ಮಕ್ಕಳಿಗೆ ಸಂಬಂಧಿಸಿದ ದೂರುಗಳಿಗೆ ತಕ್ಷಣ ಸ್ಪಂದಿಸಿ

pocso workshop
ಶಿವಮೊಗ್ಗ ಡಿಎಆರ್ ಸಭಾಂಗಣದಲ್ಲಿ ಪೋಕ್ಸೋ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಎಎಸ್‌ಪಿ ಅನಿಲ್‌ಕುಮಾರ್ ಭೂಮರಡ್ಡಿ ಮಾತನಾಡಿದರು. ಬಾಬು ಆಂಜನಪ್ಪ, ಗಾಯತ್ರಿ ಇದ್ದರು.
Published on

ಶಿವಮೊಗ್ಗ: ಮಕ್ಕಳಿಗೆ ಸಂಬಂಧಿಸಿದ ಯಾವುದೇ ದೂರುಗಳು ಬಂದಾಗ ವಿಳಂಬ ಮಾಡದೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಎಎಸ್‌ಪಿ, ಶಿವಮೊಗ್ಗ ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ ನೋಡಲ್ ಅಧಿಕಾರಿ ಅನಿಲ್‌ಕುಮಾರ್ ಭೂಮರಡ್ಡಿ ಸೂಚಿಸಿದರು.

ನಗರದ ಡಿಎಆರ್ ಸಭಾಂಗಣದಲ್ಲಿ ಪೊಲೀಸ್ ಇಲಾಖೆಯಿಂದ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ಪೋಕ್ಸೋ ಕುರಿತ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಲಸೆ, ಭಿಕ್ಷಾಟನೆ ಮತ್ತು ತುಳಿತಕ್ಕೆ ಒಳಗಾದ ಮಕ್ಕಳ ರಕ್ಷಣೆ ಮತ್ತು ಪುನರ್ವಸತಿ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಾಲನೆ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಪ್ರತಿ ಪೊಲೀಸ್ ಠಾಣಾ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ನಡೆಸುವ ಮೂಲಕ ಮಕ್ಕಳು ಹಾಗೂ ಪಾಲಕರಲ್ಲಿ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸಬೇಕು. 1098 ಮಕ್ಕಳ ತುರ್ತು ಸಹಾಯವಾಣಿ ಹಾಗೂ 15100 ಉಚಿತ ಕಾನೂನು ಸೇವೆಗಳ ಸಹಾಯವಾಣಿ ಬಳಕೆ ಬಗ್ಗೆ ಪ್ರಚಾರ ಮಾಡಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ವಿಶೇಷವಾಗಿ ತೆರೆದ ಮನೆ ಕಾರ್ಯಕ್ರಮಗಳನ್ನು ನಡೆಸಿ ಮಕ್ಕಳಿಗೆ ಠಾಣಾ ವೈಖರಿಗಳು ಮತ್ತು ಕಾನೂನಿನ ಬಗ್ಗೆ ಮಾಹಿತಿ ನೀಡುವ ಮೂಲಕ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಬೇಕು ಎಂದು ಸಲಹೆ ನೀಡಿದರು.

ರಿಪ್ಪನ್‌ಪೇಟೆಯ ಮುಖ್ಯ ಪೇದೆ ಸೋಮಶೇಖರ್ ಪೋಕ್ಸೋ, ಮಕ್ಕಳ ರಕ್ಷಣಾ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆಗಳ ಕುರಿತು ಹಾಗೂ ಶಿವಮೊಗ್ಗ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಗಾಯತ್ರಿ ಅವರು ಮಕ್ಕಳನ್ನು ದತ್ತು ಪಡೆಯುವ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು. ಡಿವೈಎಸ್‌ಪಿ ಬಾಬು ಆಂಜನಪ್ಪ, ಜಿಲ್ಲೆಯ ಎಲ್ಲ ಠಾಣೆಗಳ ಮಕ್ಕಳ ಕಲ್ಯಾಣಾಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net