

ದೇಶದಾದ್ಯಂತ ಕರೊನಾ ಸೋಂಕಿನ ತೀವ್ರತೆ ಹಲವು ಮಾನವೀಯ ಸಂಕಷ್ಟಗಳನ್ನು ಸೃಷ್ಟಿಸಿದೆ. ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂಥ ತೀವ್ರ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಇತರರ ಜೀವ ರಕ್ಷಿಸಲು ಹಗಲು-ರಾತ್ರಿ ಶ್ರಮಿಸುತ್ತಿರುವವರ ಕಳಕಳಿ, ಶ್ರಮ, ಬದ್ಧತೆ ನಿಜಕ್ಕೂ ಮೆಚ್ಚುವಂಥದ್ದು. ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿರುವುದು ಹೌದು. ಆದರೆ, ಈ ಸಮಯದಲ್ಲಿ ಎಲ್ಲ ಹೊರೆಯನ್ನು ಸರ್ಕಾರದ ಮೇಲೆ ಹಾಕಿ ಕೈಕಟ್ಟಿ ಕುಳಿತುಕೊಳ್ಳುವುದು ಸೂಕ್ತವಲ್ಲ ಎಂದು ತಿಳಿದು, ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ಕಷ್ಟದಲ್ಲಿ ಇರುವವರಿಗೆ ನೆರವು ನೀಡಬೇಕು ಎಂದು ಸಂಕಲ್ಪಿಸಿ ಅಸಾಧಾರಣವಾಗಿ ಕೆಲಸ ಮಾಡುತ್ತಿರುವ ವಿವಿಧ ವಲಯದವರ ಸಂಖ್ಯೆ ಕಡಿಮೆಯೇನಿಲ್ಲ. ಟೆಕ್ಕಿಗಳು, ಪೌರಕಾರ್ವಿುಕರು, ಆಂಬುಲೆನ್ಸ್ ಚಾಲಕರು, ಪೊಲೀಸರು, ಪತ್ರಿಕೆ ವಿತರಕರು, ಹಲವು ಸಂಘಸಂಸ್ಥೆಗಳ ಪದಾಧಿಕಾರಿಗಳು ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಇವರಿಗೆಲ್ಲ ಕೃತಜ್ಞತೆ ಹೇಳಲೆಂದೇ ‘ವಿಜಯವಾಣಿ’ ‘ಸಲಾಂ ವಾರಿಯರ್ಸ್’ ಹೆಸರಿನಲ್ಲಿ ಸರಣಿ ವರದಿಗಳನ್ನು ಪ್ರಕಟಿಸುತ್ತಿದೆ.
ಕಷ್ಟದ ಹೊತ್ತಲ್ಲಿ ನೆರವಿಗೆ ಬರುವ, ಸ್ಪಂದಿಸುವ ಯಾರನ್ನೇ ಆದರೂ ಕೃತಜ್ಞತೆಯಭಾವದಿಂದ ಕಾಣಬೇಕು. ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರಪಾಲಿಕೆಯ ಮಹಿಳಾ ಕಮಿಶನರ್ ಒಂದು ತಿಂಗಳ ಮಗುವನ್ನು ಮನೆಯಲ್ಲೇ ಬಿಟ್ಟು ಕಚೇರಿಗೆ ಹಾಜರಾಗಿ, ಕರೊನಾ ವಿರುದ್ಧ ಸಮರದಲ್ಲಿ ತೊಡಗಿಕೊಂಡಿದ್ದಾರೆ. ಮಧ್ಯಪ್ರದೇಶದ ಜಬಲ್ಪುರ್ ಠಾಣೆಯ ಪೇದೆ ಕರ್ತವ್ಯಕ್ಕೆ ಹಾಜರಾಗಲು ಉತ್ತರಪ್ರದೇಶದ ತಮ್ಮ ಊರಿಂದ 450 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಕ್ರಮಿಸಿದ್ದಾರೆ. ವೈದ್ಯರು, ನರ್ಸ್ಗಳು ವಾರಗಟ್ಟಲೇ ಮನೆಗೆ ಹೋಗದೆ, ಕುಟುಂಬ ಸದಸ್ಯರನ್ನು ಭೇಟಿ ಆಗದೆ ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲ ಪ್ರಯತ್ನಗಳ ಒಟ್ಟು ಭಾವವೇ ಕರೊನಾ ಸೋಂಕಿನ ಆಪತ್ತಿನಿಂದ ಬೇಗ ಮುಕ್ತಿ ಪಡೆಯಬೇಕು ಎಂಬುದು.
ಕೆಲವರು ಇದನ್ನು ಅರ್ಥ ಮಾಡಿಕೊಳ್ಳದೆ ವೈದ್ಯರ ಮೇಲೆ, ಪೊಲೀಸರ ಮೇಲೆ, ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಿರುವುದು ಖಂಡನೀಯ. ಪಂಜಾಬ್ನ ಪಟಿಯಾಲ ಜಿಲ್ಲೆಯಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ಗುಂಪು ಸೇರಿದ್ದ ಜನರಿಗೆ ‘ಕರ್ಫ್ಯೂ ಪಾಸ್ ಇದೆಯೇ’ ಎಂದು ಪ್ರಶ್ನಿಸಿದ್ದಕ್ಕೆ ಆ ಗುಂಪು ಎಎಸ್ಐ ಕೈ ಕತ್ತರಿಸಿದೆ, ಘಟನೆಯಲ್ಲಿ ಆರು ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಜನರ ರಕ್ಷಣೆಗೆ ನಿಂತಿರುವ ಆರಕ್ಷಕರ ಮೇಲೆಯೇ ಹಲ್ಲೆ ಮಾಡುವ ಬುದ್ಧಿಗೆ ಏನೆನ್ನಬೇಕು? ಅಷ್ಟೇ ಅಲ್ಲ, ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನೇ ಅವಾಚ್ಯವಾಗಿ ನಿಂದಿಸುವ, ಅವರ ಮೇಲೆ ಉಗುಳುವ, ಹಲ್ಲೆ ಮಾಡುವ ಘಟನೆಗಳು ದೇಶದ ಹಲವೆಡೆಯಿಂದ ವರದಿಯಾಗಿವೆ. ಇಂಥ ದುರ್ವತನೆಗಳನ್ನು ತೋರುವುದು, ಚಿಕಿತ್ಸೆಗೆ ಅಸಹಕಾರ ತೋರುವುದು ನಾಗರಿಕ ಲಕ್ಷಣವಲ್ಲ. ಇವರೆಲ್ಲರೂ ನಮ್ಮ ರಕ್ಷಣೆಗೆ, ಆರೋಗ್ಯಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಸಾಮಾನ್ಯಜ್ಞಾನ ಬೇಡವೇ? ಇಂಥ ಘಟನೆಗಳು ಹೀಗೇ ಮುಂದುವರಿದರೆ ಕರೊನಾ ವಿರುದ್ಧ ಸೇನಾನಿಗಳಂತೆ ಹೋರಾಡುತ್ತಿರುವವರ ಮನೋಬಲ ಕುಗ್ಗಬಹುದು. ಹಾಗಾಗುವ ಮುನ್ನ ಇಂಥವರು ಎಚ್ಚೆತ್ತುಕೊಂಡು, ಚಿಕಿತ್ಸೆಗೆ ಸರಿಯಾದ ಸಹಕಾರ ನೀಡಲಿ. ನಿಯಮ ಪಾಲನೆಯಲ್ಲೇ ಎಲ್ಲರ ಹಿತ ಇದೆ ಎಂಬ ಸತ್ಯವನ್ನು ಮನಗಾಣಲಿ.