ಸರ್ಕಾರಕ್ಕೆ ಹೊರೆ ತೆರಿಗೆ ಪರಿಷ್ಕರಣೆಗೆ ಪತ್ರ; ಭೂಮಿ ಹರಾಜಿನಿಂದ ಸಂಪನ್ಮೂಲ ಸಂಗ್ರಹ ಸಾಧ್ಯತೆ

Vidhana Soudha
Published on

ರುದ್ರಣ್ಣ ಹರ್ತಿಕೋಟೆ, ಬೆಂಗಳೂರು

ಸಂಪನ್ಮೂಲ ಕ್ರೋಡೀಕರಣಕ್ಕಾಗಿ ತೆರಿಗೆ ಹೆಚ್ಚಳ ಹಾಗೂ ತೆರಿಗೆಯಲ್ಲಿ ಸುಧಾರಣೆಗಳ ಕಡೆ ಗಮನ ಹರಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಮತ್ತಷ್ಟು ಹೊರೆ ಆಗುವುದೇ ಎಂಬ ಅನುಮಾನಕ್ಕೆ ಎಡೆ ಮಾಡಿದೆ. ಯಾವ ವಲಯದಲ್ಲಿ ತೆರಿಗೆ ಹೆಚ್ಚಳ ಹಾಗೂ ತೆರಿಗೆ ಪದ್ಧತಿಯಲ್ಲಿ ಸುಧಾರಣೆಗಳನ್ನು ತರಲು ಸಾಧ್ಯವಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಹಣಕಾಸು ಇಲಾಖೆಯಿಂದ ಎಲ್ಲ ಇಲಾಖೆಗಳಿಗೆ ಸೂಚನೆ ಹೋಗಿರುವುದು ಇಂಥದೊಂದು ಅನುಮಾನಕ್ಕೆ ಕಾರಣವಾಗಿದೆ.

ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುವ ಜಿಎಸ್​ಟಿ ಪರಿಹಾರ ನಿಲ್ಲಿಸಿದೆ. ಜತೆಗೆ ಕೇಂದ್ರ ಪುರಸ್ಕೃತ ಯೋಜನೆಗಳು, ತೆರಿಗೆ ಹಂಚಿಕೆಯಲ್ಲಿ ಕಡಿಮೆ ಆಗಿದೆ. ಆದರೆ, ರಾಜ್ಯ ಸರ್ಕಾರಕ್ಕೆ ವೆಚ್ಚಗಳು ಹೆಚ್ಚುತ್ತಿರುವುದರಿಂದಲೇ ಸಂಪನ್ಮೂಲ ಸಂಗ್ರಹಕ್ಕೆ ಪರ್ಯಾಯ ಮೂಲಗಳತ್ತ ಗಮನ ಹರಿಸಲು ಮುಂದಾಗಿದೆ. ಜಿಎಸ್​ಟಿ ಇರುವುದರಿಂದ ತೆರಿಗೆ ಹೆಚ್ಚಳದ ಸಾಧ್ಯತೆಗಳು ಅತ್ಯಂತ ಕಡಿಮೆ ಇವೆ. ಆದರೆ ಸುಧಾರಣೆಗಳಲ್ಲಿ ಮತ್ತು ತೆರಿಗೆಯೇತರ ಆದಾಯದಲ್ಲಿ ಗಮನಾರ್ಹವಾಗಿ ಸಂಪನ್ಮೂಲ ಸಂಗ್ರಹಣೆ ಹೆಚ್ಚಿಸಲು ಅವಕಾಶಗಳಿದ್ದರೂ, ಜನಸಾಮಾನ್ಯರ ಮೇಲೆ ಹೊರೆ ಆಗಲಿದೆ ಎಂಬುದು ಅರ್ಥಶಾಸ್ತ್ರಜ್ಞರ ಅಭಿಪ್ರಾಯವಾಗಿದೆ. ಈ ವರ್ಷ ರಾಜ್ಯದಲ್ಲಿ ಕೆಲವೊಂದು ಬಿಗಿ ಕ್ರಮಗಳಿಂದ ನಿರೀಕ್ಷಿತ ಗುರಿ ಮೀರಿ ತೆರಿಗೆ ಸಂಗ್ರಹಣೆ ಆಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಎದುರಾಗುವ ಆರ್ಥಿಕ ಹೊರೆಗಳನ್ನು ಗಮನದಲ್ಲಿಟ್ಟುಕೊಂಡೆ ಹೆಚ್ಚಿನ ಸಂಪನ್ಮೂಲಗಳ ಸಂಗ್ರಹದತ್ತ ಸರ್ಕಾರ ದೃಷ್ಟಿ ನೆಟ್ಟಿದೆ.

ಕಾರಣಗಳೇನು?

ರಾಜ್ಯದಲ್ಲಿ ತೆರಿಗೆಯೇತರ ಸಂಪನ್ಮೂಲ ಇಳಿಮುಖ, ವೆಚ್ಚ ವಸೂಲಾತಿ ದರದಲ್ಲೂ ಇಳಿಕೆಯಾಗಿದೆ. ಇನ್ನೊಂದೆಡೆ ಲಾಭಕರವಲ್ಲದ ಸಹಾಯಧನಗಳು, ಸಾರ್ವಜನಿಕ ಉದ್ದಿಮೆಗಳ ಕಳಪೆ ನಿರ್ವಹಣೆ ಸಂಪನ್ಮೂಲ ಸಂಗ್ರಹಣೆಗೆ ಆದ್ಯತೆ ನೀಡಬೇಕಿದೆ ಎಂಬುದಕ್ಕೆ ಪ್ರಮುಖ ಕಾರಣವಾಗಿದೆ.

ಹಣದುಬ್ಬರದ ಪರಿಣಾಮ

ರೂಪಾಯಿ ಮೌಲ್ಯ ಕುಸಿತ, ಹಣದುಬ್ಬರದಿಂದಾಗಿ ಹಣಕಾಸಿನ ನಿರ್ವಹಣೆ ಸವಾಲಿನ ಕೆಲಸವಾಗಿದೆ. ಆದ್ದರಿಂದಲೇ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಆರ್ಥಿಕ ಹಿಂಜರಿತ ಗಮನದಲ್ಲಿಟ್ಟುಕೊಂಡು ಸರ್ಕಾರ ಪರ್ಯಾಯ ಮಾರ್ಗಗಳತ್ತ ಗಮನ ಕೇಂದ್ರೀಕರಿಸಿ ಪತ್ರ ಬರೆದಿದೆ ಎಂದು ಹಣಕಾಸು ಇಲಾಖೆ ಮೂಲಗಳು ಖಚಿತಪಡಿಸಿವೆ.

ಚುನಾವಣೆಯ ಭಯ

ಮುಂದಿನ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ಎದುರಾಗುತ್ತಿದೆ. ಇಂತಹ ಸಂದರ್ಭದಲ್ಲಿ ತೆರಿಗೆ ಪರಿಷ್ಕರಣೆಯಂತಹ ದುಸ್ಸಾಹಕ್ಕೆ ಕೈ ಹಾಕುವುದು ಕಷ್ಟ. ಆದರೆ ಕೆಲವೊಂದು ಸುಧಾರಣೆಗಳನ್ನು ಸರ್ಕಾರ ಕೈಗೊಳ್ಳಬಹುದೆಂದು ಹೇಳಲಾಗುತ್ತಿದೆ.

ಸರ್ಕಾರಿ ಜಮೀನುಗಳ ಮಾಹಿತಿ

ಸರ್ಕಾರಿ ಜಮೀನುಗಳ ಹರಾಜು ಹಾಕುವುದು ಸಹ ಸಂಪನ್ಮೂಲ ಸಂಗ್ರಹಣೆಗೆ ಪ್ರಮುಖ ಆದ್ಯತೆಯಾಗಿದೆ. ಆದ್ದರಿಂದಲೇ ಖಾಲಿ ಜಮೀನು, ಅದರ ವಿಸ್ತೀರ್ಣ, ಮಾರುಕಟ್ಟೆಯ ದರ, ಕಟ್ಟಡಗಳ ಮಾಲೀಕತ್ವದ ಮಾಹಿತಿಯನ್ನು ಕೋರಲಾಗಿದೆ. ಶಾಸಕ ಬೋಪಯ್ಯ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸರ್ಕಾರಿ ಜಮೀನು ಸಂರಕ್ಷಣಾ ಕಾರ್ಯಪಡೆ ಸರ್ಕಾರಕ್ಕೆ ಕೆಲವೊಂದು ಶಿಫಾರಸು ಮಾಡಿದ್ದು, ಎಲ್ಲೆಲ್ಲಿ ಸರ್ಕಾರಿ ಜಮೀನು ವಶಪಡಿಸಿಕೊಂಡು ಹರಾಜು ಹಾಕಿದರೆ ಬರಬಹುದಾದ ಹಣದ ಬಗ್ಗೆಯೂ ಮಾಹಿತಿ ನೀಡಿದೆ. ಆದ್ದರಿಂದಲೇ ಸರ್ಕಾರ ಈಗ ಸಮಗ್ರ ಮಾಹಿತಿಯನ್ನು ಇಲಾಖೆಗಳಿಂದ ಕೇಳಿದೆ.

ಸರ್ಕಾರದ ಮುಂದಿರುವ ಸಾಧ್ಯಾಸಾಧ್ಯತೆ
  • ಜಿಎಸ್​ಟಿ ಕದಿಯುವುದು ತಪ್ಪಿಸುವುದು
  • ಅಬಕಾರಿ, ಮೋಟಾರ್ ವಾಹನ ತೆರಿಗೆ ಹೆಚ್ಚಿಸುವುದು
  • ಭೂ ಕಂದಾಯ, ಮನೆ ಕಂದಾಯ, ನೀರಿನ ಕರ ಹೆಚ್ಚಳ
  • ಕೇಂದ್ರದಿಂದ ಬಾಕಿ ವಸೂಲಿ
  • ಜಿಎಸ್​ಟಿ ಪಾಲು ರಾಜ್ಯಗಳಿಗೆ ಹೆಚ್ಚು ನೀಡುವಂತೆ ಕೇಂದ್ರಕ್ಕೆ ಒತ್ತಡ
  • ಪೆಟ್ರೋಲ್, ಡಿಸೇಲ್ ಮೇಲೆ ತೆರಿಗೆ ಹೆಚ್ಚಳ
  • ಆಸ್ತಿ ನೋಂದಣಿ ತೆರಿಗೆ ಹೆಚ್ಚಳ
  • ಜಲಾಶಯ, ಕೆರೆಗಳ ನೀರು ಬಳಕೆಗೆ ತೆರಿಗೆ
  • ಜಿಎಸ್​ಟಿ ಪರಿಹಾರ ಮುಂದುವರೆಸಲು ಒತ್ತಡ
  • ಸಾರ್ವಜನಿಕ ಉದ್ದಿಮೆಗಳ ಆಸ್ತಿ ನಗದೀಕರಣ
  • ಬಳಕೆದಾರರ ಶುಲ್ಕ, ಸೇವಾ ಶುಲ್ಕಗಳ ಹೆಚ್ಚಳ

ತೆರಿಗೆ ಹೆಚ್ಚಳ ಹಾಗೂ ಸುಧಾರಣೆಗೆ ಬೇರೆ ಬೇರೆ ಇಲಾಖೆಗಳಿಗೆ ಪತ್ರ ಬರೆದಿರುವುದು ಮಾಮೂಲಿ ಪ್ರಕ್ರಿಯೆ ಹೊರತು ವಿಶೇಷ ಏನಿಲ್ಲ. ತೆರಿಗೆ ಹೆಚ್ಚಳ ಮಾಡದೇ ಸಂಪನ್ಮೂಲ ಕ್ರೋಡೀಕರಣ ಬೇರೆ ಬೇರೆ ಕ್ರಮಗಳಿಂದ ಹೆಚ್ಚಿಸಿದ್ದೇವೆ. ಜನರ ಮೇಲೆ ಹೊರೆ ಹಾಕುವುದಿಲ್ಲ.

| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಸಿಎಂ ಕೈಗೊಂಡ ಬಿಗಿ ಕ್ರಮಗಳು

ಸಿಎಂ ಬೊಮ್ಮಾಯಿ ಹಣಕಾಸು ಖಾತೆಯನ್ನೂ ಹೊಂದಿದ್ದು, ಅವರು ಕೈಗೊಂಡಿರುವ ಬಿಗಿ ಕ್ರಮಗಳಿಂದ ತೆರಿಗೆ ಸಂಗ್ರಹಣೆ ಒಂದಷ್ಟು ಹೆಚ್ಚಳವಾಗಿದೆ. ಜಿಎಸ್​ಟಿ ವ್ಯಾಪ್ತಿಗೆ ನೋಂದಣಿ ಜಾಸ್ತಿಯಾಗಿದೆ. ತೆರಿಗೆ ಕದಿಯುತ್ತಿದ್ದದ್ದು ತಪ್ಪಿಸಿದ್ದಾರೆ. ಕೆಲವೆಡೆ ದಾಳಿಗಳನ್ನು ಮಾಡಿಸಿ ತೆರಿಗೆ ವಸೂಲಿ ಮಾಡಿಸಿದ್ದಾರೆ.

ಕಟ್ಟುನಿಟ್ಟಿನ ಸೂಚನೆ ಏನು?
  • ಒಂದೇ ತೆರನಾದ ಯೋಜನೆಗಳ ವಿಲೀನ
  • ಸಹಾಯಧನ, ನಿರ್ವಹಣೆ, ವಸತಿ ಶುಲ್ಕ, ಸಾಮಾಜಿಕ ಭದ್ರತೆ ಗಮನದಲ್ಲಿಟ್ಟು ತೆರಿಗೆ ಸಂಗ್ರಹಣೆ
  • ಮೊದಲ 3 ತಿಂಗಳಿನಲ್ಲಿಯೇ ಯೋಜನೆಗಳಿಗೆ ಹಣ ಕೇಳುವುದಕ್ಕೆ ಕಡಿವಾಣ
  • ಯೋಜನೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಪಡೆದು ವಾಪಸ್ ನೀಡುವುದಕ್ಕೆ ಬ್ರೇಕ್
  • ಅಗತ್ಯಕ್ಕಿಂತ ಹೆಚ್ಚು ವೆಚ್ಚ ಮಾಡುವುದನ್ನು ಕೈಬಿಡಬೇಕು
  • ವೆಚ್ಚದಲ್ಲಿ ಪಾರದರ್ಶಕತೆಗಾಗಿ ನಿರ್ದಿಷ್ಟ ವೆಚ್ಚದ ಮಾಹಿತಿ ನೀಡಬೇಕು
  • ತೆರಿಗೆಯೇತರ ಆದಾಯ ಸಂಗ್ರಹಣೆಗೆ ಆಡಳಿತ ಇಲಾಖೆಗಳ ಮೇಲ್ವಿಚಾರಣೆ ಬಿಗಿಯಾಗಬೇಕು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net