Resort Series - ರೆಸಾರ್ಟ್​ ನಟಿ, ನಾಯಕನ ನಡುವೆ ಆರೋಪ, ಪ್ರತ್ಯಾರೋಪ

ರೆಸಾರ್ಟ್​ ವೆಬ್​ಸರಣಿ
ರೆಸಾರ್ಟ್​ ವೆಬ್​ಸರಣಿ
Published on
ವೆಬ್​ಸರಣಿಗಳು ಸಾಮಾನ್ಯವಾಗಿ ಆರರಿಂದ 20 ಸಂಚಿಕೆಗಳಿರುತ್ತವೆ. ವರ್ಷಕ್ಕೊಮ್ಮೆ ಅಥವಾ ಎರಡು, ಮೂರು ವರ್ಷಗಳಿಗೊಮ್ಮೆ ಸೀಸನ್​ 1, 2, 3 ಎಂದು ಕಥೆಯನ್ನು ಮುಂದುವರಿಸಲಾಗುತ್ತದೆ. ಆದರೆ, "ರೆಸಾರ್ಟ್​' ತಂಡ ವೆಬ್​ಸರಣಿ ಮತ್ತು ಸೀರಿಯಲ್​ ಎರಡೂ ಪರಿಕಲ್ಪನೆಗಳನ್ನು ಮಿಶ್ರಣ ಮಾಡಿದೆ. ಪ್ರತಿ ಶುಕ್ರವಾರ ನಾಲ್ಕು ಹೊಸ ಸಂಚಿಕೆಗಳನ್ನು ಬಿಡುಗಡೆ ಮಾಡುತ್ತಿದ್ದು, ಕಳೆದ ಏಳು ವಾರಗಳಲ್ಲಿ ಒಟ್ಟು 28 ಸಂಚಿಕೆಗಳು ರಿಲೀಸ್​ ಆಗಿವೆ. ಈ ಸರಣಿಯ ಒಟ್ಟು 100 ಸಂಚಿಕೆಗಳನ್ನು ಪ್ರಸಾರ ಮಾಡುವ ಪ್ಲಾ$್ಯನ್​ ತಂಡದ್ದು. ಇದುವರೆಗೆ ಈ ಸರಣಿ ಹೊಸ ಕಾನ್ಸೆಪ್ಟ್​ ಮತ್ತು ಕಂಟೆಂಟ್​ ಮೂಲಕ ಸದ್ದು ಮಾಡುತ್ತಿತ್ತು. ಆದರೆ, ಇತ್ತೀಚೆಗಷ್ಟೆ ನಟಿ ಅನುಗ್ರಹ ನಂಬಿಯಾರ್​, ಸಂಭಾವನೆ ಸರಿಯಾಗಿ ಕೊಡುತ್ತಿಲ್ಲ, ಸೆಟ್​ನಲ್ಲಿ ಗೌರವದಿಂದಲೂ ನಡೆಸಿಕೊಳ್ಳುವುದಿಲ್ಲ ಎಂದು ತಂಡದ ವಿರುದ್ಧ ಆರೋಪಿಸಿ, ಜಾಲತಾಣದಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದರು. ""ರೆಸಾರ್ಟ್​' ತಂಡದವರು ಮುಖ್ಯ ಪಾತ್ರ ನೀಡುವುದಾಗಿ ಒಂದು ವರ್ಷ ಕಾಂಟ್ರಾ$್ಯಕ್ಟ್​ಗೆ ಸೈನ್​ ಮಾಡಿಸಿಕೊಂಡಿದ್ದರು. ಆದರೆ, ಸಣ್ಣ ಪಾತ್ರ ಕೊಟ್ಟರು. ಅದಕ್ಕೆ ತಕ್ಕ ಸಂಭಾವನೆಯನ್ನೂ ನೀಡಲಿಲ್ಲ. ಜತೆಗೆ ನಿರ್ಮಾಪಕರು ಸಹ ಗೌರವದಿಂದ ನಡೆಸಿಕೊಳ್ಳಲಿಲ್ಲ' ಎಂದು ಆರೋಪಿಸಿದ್ದರು. ಆದರೆ, ವಿಡಿಯೋ ವೈರಲ್​ ಆದ ಬೆನ್ನಲ್ಲೇ ಅದನ್ನು ಡಿಲೀಟ್​ ಮಾಡಿದ್ದರು. "ನನ್ನ ಬಳಿ ಎಲ್ಲ ದಾಖಲೆಗಳಿವೆ. ಆದರೆ, ಚಿತ್ರರಂಗದಲ್ಲಿ ನನ್ನ ಭವಿಷ್ಯಕ್ಕಾಗಿ, ನನ್ನ ಮನಃಶಾಂತಿಗಾಗಿ ಹಾಗೂ ಕಾನೂನು ಹೋರಾಟಕ್ಕೆ ಹಣವಿಲ್ಲದ ಕಾರಣ, ವಿಡಿಯೋಗಳನ್ನು ತೆಗೆಯುತ್ತಿದ್ದೇನೆ. ನನಗೆ ದ್ವೇಷ ಸಾಧಿಸಲು ಇಷ್ಟವಿಲ್ಲ. ನನ್ನ ಪಾಡಿಗೆ ನಾನು ಕೆಲಸದ ಬಗ್ಗೆ ಗಮನ ಹರಿಸಲು ಇಚ್ಛಿಸುತ್ತೇನೆ' ಎಂದು ಹೇಳಿಕೊಂಡಿದ್ದರು.

ಕಾನೂನು ಹೋರಾಟಕ್ಕೆ ಮುಂದಾದ ವಿಜಯ್​

ನಟಿ ಅನುಗ್ರಹ ನಂಬಿಯಾರ್​ ಆರೋಪಗಳನ್ನು ಅಲ್ಲಗಳೆದಿರುವ ನಿರ್ಮಾಪಕಿ ನಕ್ಷತ್ರಾ ಮೂರ್ತಿ ಪತಿ, ನಟ ವಿಜಯ್​ ಕುಮಾರ್​ ರಾಜೇಂದ್ರನ್​, "ಅನುಗ್ರಹ ಮಾಡಿದ ಒಂದು ಸುಳ್ಳು ಆರೋಪವನ್ನೇ ನಂಬಿ ಎಲ್ಲರೂ ನನ್ನ ಮತ್ತು ನನ್ನ ಕುಟುಂಬದ ಮೇಲೆ ಮುಗಿಬಿದ್ದರು. ಇದೀಗ ಆಕೆ ಆ ವಿಡಿಯೋ ತೆಗೆದಿದ್ದಾರೆ. ಈಗ ನನ್ನ ಮೇಲೆ ಮುಗಿಬಿದ್ದವರು ಸಮಜಾಯಿಷಿ ನೀಡುತ್ತಾರಾ? ಕಳೆದ 10 ವರ್ಷಗಳಿಂದ ತುಂಬ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದೇವೆ. ಈ ಸುಳ್ಳು ಆರೋಪದಿಂದ ನನ್ನ ಹೆಂಡತಿ ಮೂರು ದಿನಗಳಿಂದ ಮಾನಸಿಕವಾಗಿ ಕುಗ್ಗಿದ್ದಾರೆ. ಆಕೆಯ ಬಳಿ ನಾನು ಕ್ಷಮೆ ಕೇಳುತ್ತೇನೆ. ದಾಖಲೆಗಳಿವೆ ಎಂದು ಹೇಳಿಕೊಂಡು ಆರೋಪಿಸಿದ್ದರು. ಇದೀಗ ನಾನೂ ನನ್ನ ಬಳಿ ಇರುವ ದಾಖಲೆಗಳನ್ನು ಇಟ್ಟುಕೊಂಡು ಕಾನೂನು ಮೂಲಕವೇ ಉತ್ತರ ನೀಡುತ್ತೇನೆ' ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net