ನ.15ರ ಬಳಿಕ ಜಿಲ್ಲಾ ಭೇಟಿ; ಸ್ವಯಂಪ್ರೇರಣೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ: ಬಿಎಸ್​ವೈ ಹೇಳಿಕೆ

State Lead
ಹಾನಗಲ್ಲ ತಾಲೂಕು ಚಿಕ್ಕಾಂಶಿ-ಹೊಸೂರ ಗ್ರಾಮದಲ್ಲಿ ಆಯೋಜಿಸಿದ್ದ ಬಿಜೆಪಿ ಪರ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿದರು.
Published on

ಹಾವೇರಿ: ಗ್ರಾಪಂ ಅಧ್ಯಕ್ಷರಾದವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಹತ್ತಾರು ಬಾರಿ ಯೋಚಿಸುತ್ತಾರೆ. ಆದರೆ, ನಾನು ಸ್ವಯಂ ಪ್ರೇರಣೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಬಿಸಾಕಿದ್ದೇನೆ. ಅಧಿಕಾರ ಇಲ್ಲದೇ ಇದ್ದರೂ ಪರವಾಗಿಲ್ಲ. ನಿಮ್ಮ ಪ್ರೀತಿ, ಅಭಿಮಾನ ನನಗೆ ಮುಖ್ಯ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾರ್ವಿುಕವಾಗಿ ಹೇಳಿದರು.

ಹಾನಗಲ್ ತಾಲೂಕು ಚಿಕ್ಕಾಂಶಿ-ಹೊಸೂರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರವಾಗಿ ಶನಿವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ನ.15ರ ನಂತರ ರಾಜ್ಯದ ಪ್ರತಿ ಜಿಲ್ಲೆಗೂ ಭೇಟಿ ನೀಡುತ್ತೇನೆ. ಬಿಜೆಪಿ ಸರ್ಕಾರದ ಸಾಧನೆಗಳನ್ನು ಕಾರ್ಯಕರ್ತರಿಗೆ ತಿಳಿಸಿ ಅದನ್ನು ಮನೆಮನೆಗೆ ತಿಳಿಸಲು ಸೂಚಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ 140 ಸ್ಥಾನಗಳೊಂದಿಗೆ ಸ್ವತಂತ್ರವಾಗಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದೇನೆ ಎಂದರು.

ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದವರು ಕಾಂಗ್ರೆಸ್​ನವರು. ದೆಹಲಿಯಲ್ಲಿ ಅಂಬೇಡ್ಕರರ ಶವಸಂಸ್ಕಾರ ಮಾಡುವುದಕ್ಕೂ ಕಾಂಗ್ರೆಸ್​ನವರು ಬಿಡಲಿಲ್ಲ. ಮಾತಿನಲ್ಲಿ ಮಾತ್ರ ನಾವು ಹಿಂದುಳಿದವರ, ದಲಿತರ ಪರ ಎಂದು ಹೇಳಿಕೊಳ್ಳುತ್ತಾರೆ. ಕಾಂಗ್ರೆಸ್​ನವರ ಮಾತಿಗೆ ಜನರು ಬೆಲೆ ಕೊಡುವುದಿಲ್ಲ ಎಂಬುದು ಕಾಂಗ್ರೆಸ್​ನವರಿಗೆ ಅರ್ಥ ಆಗಿದೆ. ಹಣ, ಹೆಂಡ, ತೋಳ್ಬಲ, ಜಾತಿಯ ವಿಷಬೀಜ ಬಿತ್ತಿ ವೋಟು ತೆಗೆದುಕೊಳ್ಳುವ ಕಾಲ ಹೋಗಿದೆ. ಜನ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಮೆಚ್ಚಿಕೊಂಡಿದ್ದಾರೆ. ಆದ್ದರಿಂದ ಬಿಜೆಪಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಪ್ರಧಾನಿ ಮೋದಿ ಯುವಕರ ಮೇಲೆ ಬಹಳ ಭರವಸೆ ಇಟ್ಟುಕೊಂಡಿದ್ದಾರೆ. ಮಹಿಳೆಯರು, ಎಸ್​ಸಿ, ಎಸ್​ಟಿ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿ ಪಕ್ಷ ಬಲಪಡಿಸುವ ಕೆಲಸ ಮಾಡಿ. ಟೀಕೆ ಟಿಪ್ಪಣಿ ಮಾಡಲು ನಾವು ಬಂದಿಲ್ಲ. ದೇಶದ ಜನರು ಕಾಂಗ್ರೆಸ್ ಅನ್ನು ಮರೆತಿದ್ದಾರೆ. ಲೋಕಸಭೆಯಲ್ಲಿ ಯಂಕ, ಸೀನ, ನಾಣಿ ಅನ್ನುವ ರೀತಿ ಕಾಂಗ್ರೆಸ್​ನವರು 40 ಜನ ಇದ್ದಾರೆ. ಅಲ್ಲೊಬ್ಬ, ಇಲ್ಲೊಬ್ಬರು ಇರುವ ಕಾಂಗ್ರೆಸ್ಸಿಗರ ಮನವೊಲಿಸಿ ಬಿಜೆಪಿ ಅಭ್ಯರ್ಥಿಗೆ ವೋಟು ಕೊಡಿಸಬೇಕು. ದೊಡ್ಡ ಅಂತರದಿಂದ ಸಜ್ಜನರನ್ನು ಗೆಲ್ಲಿಸಿ ಕಳಿಸಬೇಕು ಎಂದು ಮನವಿ ಮಾಡಿದರು.

ತಾಲಿಬಾನ್ ಆಡಳಿತ ಹೇಗಿದೆ ಎಂದು ಸಿದ್ದರಾಮಯ್ಯ ಖುದ್ದಾಗಿ ಅರಿತುಕೊಳ್ಳಬೇಕಾಗಿದೆ. ಆದ್ದರಿಂದ ಅವರನ್ನು ಒಂದು ತಿಂಗಳ ಮಟ್ಟಿಗೆ ತಾಲಿಬಾನ್ ಆಡಳಿತ ಇರುವ ಅಫ್ಘಾನಿಸ್ತಾನಕ್ಕೆ ಕಳುಹಿಸಿ ಕೊಡಬೇಕು. ಅಲ್ಲಿಯ ಪರಿಸ್ಥಿತಿ ಅವಲೋಕಿಸಿ ಬಂದ ಬಳಿಕ ಬೇಕಿದ್ದರೆ ನಮ್ಮ ಸರ್ಕಾರದ ಬಗ್ಗೆ ಮಾತನಾಡಲಿ. | ವಿ.ಶ್ರೀನಿವಾಸಪ್ರಸಾದ್ ಸಂಸದ ಆರ್​ಎಸ್​ಎಸ್ ಬೈಯುವುದು, ನಿಂದಿಸುವುದು ಹೊಸದೇನು ಅಲ್ಲ. ಅನೇಕ ಸಲ ಇಂತದ್ದೆಲ್ಲ ನಡೆದಿದೆ. ಚುನಾವಣೆ ಬಂದಾಗೆಲ್ಲ ಇದು ನಡೆಯುತ್ತದೆ. ಚುನಾವಣೆ ಮುಗಿದ ಮೇಲೆ ತಣ್ಣಗಾಗುತ್ತದೆ. ಆದರೆ, ಮುಸ್ಲಿಂ ಮತಗಳ ಓಲೈಕೆಗಾಗಿ ಇಂಥ ಟೀಕೆ-ಟಿಪ್ಪಣೆ ಸಲ್ಲದು. | ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಮಠ, ಉಡುಪಿ ಬಿಜೆಪಿಯಂಥ ಕೋಮುವಾದಿ ಪಕ್ಷದ ಜತೆ ಜೆಡಿಎಸ್ ಒಳಒಪ್ಪಂದ ಮಾಡಿಕೊಂಡು ಆಡಳಿತ ನಡೆಸಿದೆ. ಜೆಡಿಎಸ್​ನಲ್ಲಿ ನಾನಿದ್ದಾಗ ಅದೊಂದು ಜಾತ್ಯತೀತ ಪಕ್ಷವಾಗಿತ್ತು. ಈಗ ಅಪ್ಪ, ಮಕ್ಕಳ ಪಕ್ಷವಾಗಿದೆ. | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ಮತದಾರರಿಗೆ ಬಿಜೆಪಿ ಹಣ- ಹೆಂಡ ಹಂಚುತ್ತಿದೆ ಎಂದು ಕಾಂಗ್ರೆಸ್ ನಾಯಕರು ಸೋಲಿನ ಭೀತಿಯಿಂದ ಹೇಳುತ್ತಿದ್ದಾರೆ. ಫಲಿತಾಂಶ ಪ್ರಕಟವಾದ ಮೇಲೆ ಹೇಳುವ ಡೈಲಾಗ್ ಅನ್ನು ಅದಕ್ಕೂ ಮೊದಲೇ ಹೇಳುತ್ತಿರುವುದನ್ನು ಗಮನಿಸಿದರೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲು ಒಪ್ಪಿಕೊಂಡಿದೆ. | ಆರ್.ಅಶೋಕ್ ಕಂದಾಯ ಸಚಿವ ಬಿಜೆಪಿ ಅಥವಾ ಕಾಂಗ್ರೆಸ್ ಬಗ್ಗೆ ಜೆಡಿಎಸ್​ಗೆ ಮೃಧು ಧೋರಣೆ ಇಲ್ಲ. ಸಿಂದಗಿ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಲಿದ್ದಾರೆ. ಹಾನಗಲ್ಲ ಜನರ ಭಾವನೆ ಅರಿತು, ಅಲ್ಲಿನ ಚುನಾವಣೆ ಫಲಿತಾಂಶದ ಬಗ್ಗೆ ರ್ಚಚಿಸುತ್ತೇನೆ. | ಎಚ್.ಡಿ. ಕುಮಾರಸ್ವಾಮಿ ಮಾಜಿ ಸಿಎಂ

ಚುನಾವಣೆ ಬಂದಾಗಷ್ಟೇ ಓಲೈಕೆ

ಚುನಾವಣೆ ಬಂದರೆ ಸಾಕು ಕಾಂಗ್ರೆಸ್​ನವರಿಗೆ ಅಲ್ಪಸಂಖ್ಯಾತರ ಬಗೆಗೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಬರುತ್ತದೆ. ಅಲ್ಪಸಂಖ್ಯಾತರ ರಕ್ಷಣೆಗೆ ನಾವಿದ್ದೇವೆ ಎನ್ನುತ್ತಾರೆ. ನಿಜವಾಗಿಯೂ ಕಾಂಗ್ರೆಸ್ ರಕ್ಷಣೆಯಲ್ಲಿ ಅಲ್ಪಸಂಖ್ಯಾತರಿಲ್ಲ. ಬದಲಿಗೆ ಅಲ್ಪಸಂಖ್ಯಾತರ ರಕ್ಷಣೆಯಲ್ಲಿಯೇ ಕಾಂಗ್ರೆಸ್ ಪಕ್ಷವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕುಟುಕಿದರು.

ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಬಾವಿಯಲ್ಲಿಟ್ಟಿದೆ. ಚುನಾವಣೆ ಬಂದಾಗ ಹಗ್ಗ ಕೊಟ್ಟು ಅವರನ್ನು ಮೇಲೆತ್ತಿ, ಮತ ಹಾಕಿಸಿಕೊಂಡು ಮರಳಿ ಅವರನ್ನು ಬಾವಿಗೆ ಬಿಟ್ಟು ಬಿಡುತ್ತಾರೆ. ನಾವು ಬರೀ ಹಾನಗಲ್ಲ ಕ್ಷೇತ್ರದಲ್ಲಿಯೇ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಇದೇ ವರ್ಷ 20 ಕೋಟಿ ರೂ. ಅನುದಾನ ಕೊಟ್ಟಿದ್ದೇವೆ ಎಂದರು.

ಕಾಂಗ್ರೆಸ್ ಮುಳುಗುತ್ತಿರುವ ಹಡಗು. ದೇಶದ ಭೂಪಟದಲ್ಲಿ ಎಲ್ಲಿ ನೋಡಿದರೂ ಮುಳುಗಿದೆ. ಕರ್ನಾಟಕದಲ್ಲಿ ಸ್ವಲ್ಪ ಉಳಿದುಕೊಂಡಿದೆ. ಮತದಾರರು ಉಪಚುನಾವಣೆಯಲ್ಲಿ ಬಿಜೆಪಿಗೆ ಅತಿಹೆಚ್ಚು ಮತ ನೀಡಿದರೆ, ಇಲ್ಲಿಯೂ ಮುಳುಗಿ ಹೋಗುತ್ತದೆ. ಕಾಂಗ್ರೆಸ್​ನವರ ಸುಳ್ಳಿನ ರಾಜಕಾರಣ ಬಹಳ ದಿನಗಳು ನಡೆಯುವುದಿಲ್ಲ. ಅಭಿವೃದ್ಧಿಯೇ ನಮ್ಮ ಅಜೆಂಡಾ. ನಾವು ಮಾಡಿರುವ, ಮಾಡುತ್ತಿರುವ ಕೆಲಸಗಳಿಂದ ಮತ ಕೇಳುತ್ತೇವೆ. ಅಭಿವೃದ್ಧಿಯ ಹರಿಕಾರ ದಿವಂಗತ ಉದಾಸಿಯವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲು ಬಿಜೆಪಿಗೆ ಮತ ಹಾಕಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net