

ತುಮಕೂರು: ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬ ವದಂತಿಗಳೆಲ್ಲಾ ಸುಳ್ಳು, ಪ್ರಣಾಳಿಕೆ ರಚನೆ ಬಗ್ಗೆ ಐಎಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಜತೆ ಚರ್ಚಿಸಿದ್ದೇನೆ ಎಂದು ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣೆ ಸಿದ್ಧತೆ ಬಗ್ಗೆ ಸುರ್ಜೇವಾಲ ಜತೆ 3 ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದೇನೆ, ಜನರು ಒಪ್ಪುವ ಪ್ರಣಾಳಿಕೆ ರಚಿಸುವ ಬಗ್ಗೆಯಷ್ಟೇ ಚರ್ಚೆ ನಡೆದಿದೆ ಎಂದರು. ಸುದೀರ್ಘ ಚರ್ಚೆಯ ಬಗ್ಗೆ ವದಂತಿ ಹರಿಯಬಿಡಲಾಗಿದೆಯಷ್ಟೇ, ಇತ್ತೀಚೆಗೆ ಪಕ್ಷದ ವತಿಯಿಂದ ಹೊರಡಿಸಿರುವ ಭರವಸೆಗಳನ್ನು ಎಲ್ಲರೂ ಒಟ್ಟಿಗೆ ಕುಳಿತು ನಿರ್ಧರಿಸಿದ್ದೇವೆ, ಈ ವಿಷಯದಲ್ಲಿ ನನಗೆ ಯಾವ ಅಸಮಾಧಾನವೂ ಇಲ್ಲ ಎಂದರು.
ಕೆಲವರು ನಮ್ಮಲ್ಲಿ ಅಸಮಾಧಾನ ತರೋಕೆ ಇಂತಹ ವದಂತಿ ಹಬ್ಬಿಸುತ್ತಿದ್ದಾರೆ. ಆರಂಭದಲ್ಲಿ ಗೃಹಲಕ್ಷ್ಮೀ ಭಾಗ್ಯಕ್ಕೆ ಎಲ್ಲಿಂದ ಹಣ ತರ್ತಿರಾ ಎಂದು ಕುಹಕವಾಡಿದರು, ಅದಕ್ಕೆಲ್ಲಾ ನಾವು ಉತ್ತರ ಕೊಟ್ಟಿದ್ದೇವೆ. ಈಗ ಇಂತಹ ವದಂತಿ ಹಬ್ಬಿಸುತ್ತಿದ್ದಾರೆಯಷ್ಟೇ. ಇತ್ತೀಚೆಗಷ್ಟೇ ಚಿತ್ರದುರ್ಗದಲ್ಲಿ 10 ಅಂಶಗಳನ್ನು ಘೋಷಣೆ ಮಾಡಿದ್ದೇವೆ. ಎಲ್ಲ ಭರವಸೆ ಈಡೇರಿಸುವ ಮೂಲಕ ಜನರ ವಿಶ್ವಾಸ ಉಳಿಸಿಕೊಳ್ಳಲು ಹೊಣೆ ನಮ್ಮ ಮೇಲಿದೆ ಎಂದರು.
ಗೆಲ್ಲುವ ಅಭ್ಯರ್ಥಿಗಳ ಪಟ್ಟಿ ಹೈಕಮಾಂಡ್‌ಗೆ: ಜಿಲ್ಲಾ ಸಮಿತಿಗಳು ಶಿಫಾರಸು ಮಾಡಿದಂತೆ ರಾಜ್ಯ ಚುನಾವಣಾ ಸಮಿತಿ ಸಭೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳನ್ನು ಗುರುತಿಸಿ ಎಐಸಿಸಿ ಚುನಾವಣಾ ಸಮಿತಿಗೆ ಕಳುಹಿಸಿಕೊಡಲಾಗಿದೆ ಎಂದು ಪರಮೇಶ್ವರ ಹೇಳಿದರು.
ಹೈಕಮಾಂಡ್ ಕೆಲವು ಮಾನದಂಡಗಳನ್ನು ಇಟ್ಟುಕೊಂಡಿದ್ದು ಸೂಕ್ತ ಅಭ್ಯರ್ಥಿಗಳನ್ನು ಶೀಘ್ರದಲ್ಲಿಯೇ ಘೋಷಿಸಲಿದೆ, ತುಮಕೂರು ನಗರ ಸೇರಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿಯೂ ಸಾಕಷ್ಟು ಜನ ಆಕಾಂಕ್ಷಿಗಳಿದ್ದು ಈ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಪಕ್ಷದ ವತಿಯಿಂದ ನಡೆಸಿರುವ ಆಂತರಿಕ ಸಮೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಕೆಲವು ಕ್ಷೇತ್ರಗಳಲ್ಲಿ ಬದಲಾವಣೆಗೆ ನಿರ್ಧಾರ ಮಾಡಿದ್ದೇವೆ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿಯಲೇಬೇಕು ಎಂದು ಸಂಕಲ್ಪ ಮಾಡಿದೆ.
ನಾವು ಜನರಿಗೆ ನೀಡುವ ಪ್ರಣಾಳಿಕೆ ಈಡೇರಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ, 1 ರಿಂದ 5ನೇ ತರಗತಿವರೆಗೂ ಸರ್ಕಾರಿ ಶಾಲೆಯಲ್ಲಿ ಓದುವ ಎಸ್‌ಸಿ, ಎಸ್‌ಟಿ ಸಮುದಾಯದ ಮಕ್ಕಳ ಕುಟುಂಬಕ್ಕೆ ಹಣ ನೀಡಲು ನಿರ್ಧರಿಸಲಾಗಿದ್ದು, ವಾರ್ಷಿಕವಾಗಿ 3600 ಕೋಟಿ ರೂ. ಅಗತ್ಯವಿದೆ. | ಡಾ.ಜಿ.ಪರಮೇಶ್ವರ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ
ಟಿಕೆಟ್ ಹಂಚಿಕೆಯಲ್ಲಿ ಯುವಕರಿಗೆ ಆದ್ಯತೆ: ಮುಂದಿನ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಲು ಪಕ್ಷ ತೀರ್ಮಾನಿಸಿದೆ ಎಂದು ಡಾ.ಜಿ.ಪರಮೇಶ್ವರ ನೀಡಿರುವ ಹೇಳಿಕೆ ಜಿಲ್ಲೆಯಲ್ಲಿ ಟಿಕೆಟ್ ಬಯಸಿರುವ ಹಿರಿಯರಿಗೆ ಮರ್ಮಾಘಾತ ನೀಡಿದೆ. ಯುವಕರು ಹಾಗೂ ಮಹಿಳೆಯರಿಗೆ ಸಾಮಾಜಿಕ ನ್ಯಾಯದ ಪಾಲನೆಯೊಂದಿಗೆ ಟಿಕೆಟ್ ಸಿಗಲಿದೆ, 110 ಮಹಿಳೆಯರೂ ಟಿಕೆಟ್ ಬಯಸಿ ಅರ್ಜಿ ಹಾಕಿದ್ದಾರೆ, ಹೈಕಮಾಂಡ್ ಕೆಲವು ಮಾನದಂಡಗಳನ್ನು ಹೊಂದಿದ್ದು, ಅವುಗಳ ಆಧಾರದ ಮೇಲೆ ಗೆಲ್ಲುವ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲಿದೆ ಎಂದು ಪರಮೇಶ್ವರ ತಿಳಿಸಿದರು.
ನನ್ನ ಯಾರೂ ಸೈಡ್‌ಲೈನ್ ಮಾಡಲು ಸಾಧ್ಯವಿಲ್ಲ!: ಕಾಂಗ್ರೆಸ್‌ನಲ್ಲಿ ನನ್ನ ಯಾರೂ ಸೈಡ್‌ಲೈನ್ ಮಾಡಿಲ್ಲ, ಆಗೇನಾದರೂ ಮಾಡಿದ್ದರೆ ಪ್ರಣಾಳಿಕೆ ಸಮಿತಿ ಅಧ್ಯಕ್ಷನನ್ನಾಗಿ ನೇಮಕ ಮಾಡುತ್ತಿರಲಿಲ್ಲ. ಎರಡು ತಂಡಗಳಲ್ಲಿ ರಾಜ್ಯದಲ್ಲಿ ಪ್ರಜಾಧ್ವನಿ ಯಾತ್ರೆ ಆರಂಭಿಸಲಾಗಿದ್ದು, ನಾನು ಹಾಗೂ ಡಿ.ಕೆ.ಶಿವಕುಮಾರ್ ಮೈಸೂರು ಭಾಗದಲ್ಲಿ ಪ್ರವಾಸ ಮಾಡುತ್ತೇವೆ, ಉತ್ತರ ಕರ್ನಾಟಕದ ಕಡೆ ಸಿದ್ದರಾಮಯ್ಯ ಪ್ರವಾಸ ಮಾಡುತ್ತಾರೆ ಎಂದು ಪರಮೇಶ್ವರ ತಿಳಿಸಿದರು.