

ಹೊಸನಗರ: ಸದಾ ನೈತಿಕತೆ ಪಾಠ ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ನೈತಿಕತೆ ಪ್ರದರ್ಶಿಸಲಿ ಎಂದು ಶಾಸಕ ಆರಗ ಜ್ಞಾನೇಂದ್ರ ಸವಾಲು ಹಾಕಿದರು.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ನ್ಯಾಯಾಲಯ ಆದೇಶಿಸಿದೆ. ಇನ್ನಾದರೂ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ. ಪ್ರಕರಣ ರಾಜ್ಯಪಾಲರ ಬಳಿ ಹೋಗಿ ವಿಚಾರಣೆ ಅನುಮತಿ ಕೊಡುವುದಕ್ಕಿಂತ ಮೊದಲೇ ರಾಜೀನಾಮೆ ನೀಡಿದಿದ್ದರೆ ಅವರ ಇಮೇಜ್ ಹೆಚ್ಚುತ್ತಿತ್ತು. ಆದರೆ ಈಗ ಅವರ ಇಮೇಜ್ ನೆಲಕಚ್ಚಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಸುಸಂಸ್ಕೃತ, ಭವ್ಯ ಪರಂಪರೆ ಇರುವ ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಕೂರಬಾರದು. ಕಳಂಕ ಹೊತ್ತು ಅಧಿಕಾರ ನಡೆಸುವುದು ಸರಿಯಲ್ಲ. ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಲಿ. ವಿಚಾರಣೆ ನಡೆದು ಶುದ್ಧರಾಮಯ್ಯ ಆಗಿ ಹೊರಬಂದು ಮತ್ತೆ ಬೇಕಾದರೆ ಸಿಎಂ ಸ್ಥಾನ ಅಲಂಕರಿಸಲಿ ಎಂದರು.
ಅಡಕೆ ದರ ಕುಸಿಯುತ್ತಿದೆ. ಅದಕ್ಕೆ ಹಲವು ಕಾರಣ ಇರಬಹುದು. ಅಲ್ಲದೇ ಚಾಲಿ ಅಡಕೆಗೆ ಕೆಮಿಕಲ್ ಬಳಸಿ ಕೃತಕ ಬಣ್ಣ ಹಾಕಿ ಮೋಸ ಮಾಡುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವಿ.ಸುಬ್ರಹ್ಮಣ್ಯ ಮತ್ತಿಮನೆ, ಪ್ರಮುಖರಾದ ಕಂಚುಗಾರ್, ಗಣಪತಿ ಬೆಳಗೋಡು, ಎನ್.ಆರ್.ದೇವಾನಂದ್ ಇತರರಿದ್ದರು.