

ಬೆಂಗಳೂರು: ರೈತರ ಮಕ್ಕಳಿಗೆ ಯಡಿಯೂರಪ್ಪ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಜ್ಯದ ಕೃಷಿ ಕಾಲೇಜುಗಳಲ್ಲಿನ ಡಿಪ್ಲೊಮಾ ಮತ್ತು ಪದವಿ ಕೋರ್ಸ್ ಗಳಲ್ಲಿ ಕೃಷಿಕರ ಮಕ್ಕಳಿಗೆ ಹೆಚ್ಚು ಅವಕಾಶ ಸಿಗಬೇಕೆಂಬ ಕಾರಣಕ್ಕೆ ಮೀಸಲಾತಿ ಪ್ರಮಾಣವನ್ನು ಶೇ.10ರಷ್ಟು ಹೆಚ್ಚಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ. ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಕೃಷಿ ಇಲಾಖೆ ಮುಂದಿಟ್ಟ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಈ ನಿರ್ಧಾರದಿಂದಾಗಿ ಹಾಲಿ ಶೇ.40 ಇರುವ ಮೀಸಲು ಶೇ.50ಕ್ಕೆ ಹೆಚ್ಚಲಿದೆ.
ಕರ್ನಾಟಕದಲ್ಲಿ ಕೃಷಿ ಹಾಗೂ ಕೃಷಿಗೆ ಸಂಬಂಧಿತ ಆರು ವಿಶ್ವವಿದ್ಯಾಲಗಳಿವೆ. ಬೆಂಗಳೂರು, ಧಾರವಾಡ, ಶಿವಮೊಗ್ಗ ಮತ್ತು ರಾಯಚೂರಿನಲ್ಲಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ, ಬೀದರ್ನ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಅಧೀನದಲ್ಲಿ್ಲ 26 ಸರ್ಕಾರಿ ಕಾಲೇಜುಗಳು ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ಗಳು ನಡೆಯುತ್ತಿವೆ.
ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಸರಿಸುಮಾರು ನಾಲ್ಕು ಸಾವಿರ ಸೀಟುಗಳಿಗೆ ದಾಖಲಾತಿ ನಡೆಯುತ್ತದೆ. ಇಷ್ಟು ಸೀಟುಗಳಿಗೆ ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚಿನ ಮಂದಿ ಕೋರ್ಸ್ ಪ್ರವೇಶಕ್ಕೆ ಅಪೇಕ್ಷಿತರಾಗಿ ಪ್ರಯತ್ನ ನಡೆಸುತ್ತಾರೆ. ಇದರಿಂದ ಕೃಷಿಕರ ಮಕ್ಕಳು ತೀವ್ರ ಪೈಪೋಟಿ ಎದುರಿಸಬೇಕಾಗುತ್ತದೆ. ಕೃಷಿ ಹಾಸುಹೊಕ್ಕಾದ ಕುಟುಂಬದಿಂದ ಬರುವ ಆಕಾಂಕ್ಷಿತರಿಗೆ ಶೇ.40 ಇರುವ ಮೀಸಲು ಪ್ರಮಾಣ ಹೆಚ್ಚಿಸಬೇಕೆಂಬ ಬೇಡಿಕೆ ಇತ್ತು.
ಹೊಸ ಜಲನೀತಿಗೆ ತಯಾರಿ: ನೀರಿನ ಬಳಕೆ ಹಾಗೂ ನಿರ್ವಹಣೆ ಮಾಡುವ ಸಂಬಂಧ ರಾಜ್ಯಕ್ಕೊಂದು ಸಮಗ್ರ ಜಲನೀತಿ ರೂಪಿಸಲು ರಾಜ್ಯ ಸರ್ಕಾರ ತೀರ್ವನಿದೆ. ಕುಡಿಯುವ ನೀರು, ಕೃಷಿ, ಕೈಗಾರಿಕೆ, ನಗರ ಸ್ಥಳೀಯ ಸಂಸ್ಥೆಗೆ ಸಂಬಂಧಪಟ್ಟಂತೆ ಪ್ರಾಧಿಕಾರ ರಚಿಸುವ ಪ್ರಸ್ತಾವನೆ ಮಾಡಿದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ವಿಸ್ತೃ ಚರ್ಚೆ ನಡೆದು ಅಂತಿಮವಾಗಿ ಕರಡು ರೂಪಿಸಲು ಸಂಪುಟ ಉಪ ಸಮಿತಿ ರಚಿಸಲು ನಿರ್ಧರಿಸಲಾಯಿತು. 2019ರಲ್ಲಿ ತಂದ ನೀತಿಯನ್ನು ಪರಿಷ್ಕೃರಣೆಗೊಳಿಸಲಾಗುತ್ತದೆ.
ಎಸ್ಆರ್ ದಾಖಲೆಗೆ ವಿದಾಯ: ಸರ್ಕಾರಿ ನೌಕರರಿಗೆ ಸಂಬಂಧಪಟ್ಟಂತೆ ಸರ್ಕಾರ ಮಹತ್ವದ ನಿರ್ಧಾರ ಮಾಡಿದೆ. ಇನ್ನು ಮುಂದೆ ಸರ್ಕಾರಿ ನೌಕರರ ಗೌಪ್ಯ ವರದಿಕೊಡುವ ಪದ್ಧತಿಯನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಈವರೆಗೆ ಕೈ ಬರಹದಲ್ಲಿ ಸಿಆರ್ ಬರೆಯುತ್ತಿದ್ದರು, ವರದಿ ಬರೆಯುವಾಗ ದೋಷ ಉಂಟಾಗುವುದು, ತಿದ್ದುವುದು, ಉದ್ದೇಶಪೂರ್ವಕವಾಗಿ ತಡ ಮಾಡುವುದು, ಕಳೆದು ಹೋಗುವ ಪ್ರಸಂಗಗಳಿತ್ತು. ಹೀಗಾಗಿ ಇನ್ನು ಮುಂದೆ ಮುಂದೆ ಎಲೆಕ್ಟ್ರಾನಿಕ್ ವಿಧಾನದ ಮೂಲಕವೇ ಗೌಪ್ಯ ವರದಿಗೆ ದಾಖಲೀಕರಣ ನಡೆಸಬೇಕೆಂದು ನಿರ್ಣಯಿಸಲಾಗಿದೆ.
ಕೆರೆ ನುಂಗಣ್ಣರಿಗೆ ಕಡಿವಾಣ: ಸಂಪುಟ ಸಭೆಯಲ್ಲಿ ಲ್ಯಾಂಡ್ ಗ್ರಾಂಟ್ ರೂಲ್ 22ಎ ತಿದ್ದುಪಡಿ ತರಲಾಗಿದೆ. ಆ ಮೂಲಕ ಕೆರೆ ನುಂಗಣ್ಣರಿಗೆ ಬ್ರೇಕ್ ಹಾಕುವ ತೀರ್ಮಾನ ಮಾಡಲಾಗಿದೆ. ಅನೇಕ ಸಂದರ್ಭದಲ್ಲಿ ಭೂಮಿ ಹಂಚಿಕೆ ಮಾಡಿದಾಗ ನಡುವೆ ಸಣ್ಣ ಭೂಮಿ ಲಾಕ್ ಆಗಿರುತ್ತದೆ. ಖರಾಬು ಭೂಮಿ ನಡುವೆ ಕೆರೆ, ಕಟ್ಟೆ ಬಂದರೂ ಅದು ಮಾರ್ಪಾಡಾಗಿದೆ ಎಂದು ಯಾವುದೇ ರೀತಿ ಕಾಲಮಿತಿ ಇಲ್ಲದೇ ಬಳಕೆಗೆ ಅವಕಾಶವಿತ್ತು. ಈಗ ಅದನ್ನು ಕನಿಷ್ಠ 10 ವರ್ಷ ಆದರೂ ಕೆರೆ, ಕಟ್ಟೆ ಸ್ವರೂಪ ಇಲ್ಲ ಎಂದು ಸರ್ವೆ ವರದಿ ಇದ್ದಾಗ ಮಾತ್ರ ಬಳಕೆ ಮಾಡಬಹುದೆಂದು ತೀರ್ಮಾನಿಸಲಾಗಿದೆ.
ಹಾಲಿ ಮೀಸಲಾತಿ ಪ್ರಮಾಣ ಏನಿದೆ?: ಕೃಷಿಕ ಕುಟುಂಬ ಅಭ್ಯರ್ಥಿಗಳ ಕೋಟಾದ ಅಡಿಯಲ್ಲಿ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರಾಯೋಗಿಕ ಪರೀಕ್ಷೆಯಲ್ಲಿ ಕನಿಷ್ಠ ಶೇ.50ರಷ್ಟು ಅಂಕ ಪಡೆದಿರಬೇಕು. ಕೃಷಿ ಕುಟುಂಬ ಅಭ್ಯರ್ಥಿಗಳ ಕೋಟಾದ ಅಡಿ ಕೃಷಿ ವಿಜ್ಞಾನ/ತೋಟಗಾರಿಕೆ ಕೋರ್ಸಗಳ ಪ್ರವೇಶಕ್ಕೆ ಮೆರಿಟ್ ಪಟ್ಟಿಯನ್ನು ಸಿಇಟಿ ಐಚ್ಛಿಕ ವಿಷಯಗಳಲ್ಲಿ ಶೇ.50 ಅಂಕಗಳನ್ನು ಮತ್ತು ಪ್ರಾಯೋಗಿಕ ಪರೀಕ್ಷೆಯ ಶೇ.50 ಅಂಕಗಳನ್ನು ಪರಿಗಣಿಸಿ ರ್ಯಾಂಕ್ ನೀಡುವ ಪದ್ಧತಿ ಇದೆ.
ಕೋರ್ಸ್ಗಳ ವಿವರ: ಸದ್ಯ ಬಿಎಸ್ಸಿ (ಆನರ್ಸ್) ಕೃಷಿ, ಬಿಎಸ್ಸಿ (ಆನರ್ಸ್) ರೇಷ್ಮೆ, ಕೃಷಿ, ಬಿಎಸ್ಸಿ (ಆನರ್ಸ್) ಅರಣ್ಯ ವಿಜ್ಞಾನ, ಬಿಟೆಕ್ (ಜೈವಿಕ ತಂತ್ರಜ್ಞಾನ), ಬಿಎಸ್ಸಿ (ಆನರ್ಸ್) ಸಮುದಾಯ ವಿಜ್ಞಾನ, ಬಿಟೆಕ್(ಕೃಷಿ ಇಂಜಿನಿಯರಿಂಗ್), ಬಿಟೆಕ್ (ಆಹಾರ ತಂತ್ರಜ್ಞಾನ), ಬಿಟೆಕ್ (ಹೈನುಗಾರಿಕೆ ತಂತ್ರಜ್ಞಾನ), ಬಿಎಫ್ಎಸ್ಸಿ (ಮೀನುಗಾರಿಕೆ), ಬಿಎಸ್ಸಿ (ಆನರ್ಸ್) (ಕೃಷಿ ವ್ಯವಹಾರ ನಿರ್ವಹಣೆ)ಕೋರ್ಸ್ಗಳಿವೆ.
ಡಿಪ್ಲೊಮಾ ಇನ್ ಅಗ್ರಿಕಲ್ಚರ್ ಮತ್ತು ಬಿಎಸ್ಸಿ ಅಗ್ರಿ, ಸರಿಸಮಾನವಾದ ಪದವಿ ಕೋರ್ಸ್ಗಳಲ್ಲಿ ರೈತರ ಮಕ್ಕಳಿಗೆ ಶೇ.40 ಸೀಟು ಮೀಸಲಿತ್ತು. ಇದನ್ನು ಶೇ.50ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಬಜೆಟ್ನಲ್ಲಿ ಘೋಷಿಸಿದ್ದನ್ನು ಈಗ ಅನುಷ್ಠಾನ ಮಾಡಲಾಗುತ್ತಿದೆ.
| ಬಸವರಾಜ ಬೊಮ್ಮಾಯಿ ಗೃಹ ಸಚಿವ