ಸರ್ಕಾರ-ಪ್ರತಿಪಕ್ಷದ ನಡುವೆ ಮೀಸಲಾತಿ ಹಗ್ಗ-ಜಗ್ಗಾಟ; ಲಾಭದ ಫಸಲು ತೆಗೆಯುವ ಬಿಜೆಪಿಯ ಒಳಅಂದಾಜು

BJP Congress
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ವಿಧಾನಸಭೆಯಲ್ಲಿ ಪರಿಣಾಮ ಬೀರುವ ವಿಚಾರಗಳನ್ನು ಜನರ ಮುಂದೆ ಚರ್ಚೆಗೆ ಬಿಡಲು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ ಕಾಣಿಸಿದ್ದು, ಕಳೆದ ವಾರ ಲಿಂಗಾಯತ ನಾಯಕತ್ವದ ವಿಷಯ ಮುನ್ನೆಲೆಗೆ ಬಂದಿತ್ತು. ಇದೀಗ ಮೀಸಲು ವಿಷಯ ಪ್ರಧಾನವಾಗಿ ಕಾಣಿಸಿದೆ.

ಸರ್ಕಾರ ರಚನೆಗೆ ಜಿದ್ದಾಜಿದ್ದಿನ ಪೈಪೋಟಿ ನಡೆಸಿರುವ ಕಾಂಗ್ರೆಸ್-ಬಿಜೆಪಿ ಎದುರಾಳಿಯ ಶಕ್ತಿಯನ್ನು ತಗ್ಗಿಸಿ, ತನ್ನ ಶಕ್ತಿ ವೃದ್ಧಿಸಲು ಸಿಗುವ ಸಣ್ಣ ಅವಕಾಶವನ್ನೂ ಬಿಡದೇ ಜನಾಭಿಪ್ರಾಯ ಮೂಡಿಸಲು ಪ್ರಯತ್ನಿಸಿವೆ. ಲಿಂಗಾಯತ ಮತ ವಿಭಜನೆಯಾದರೆ ಎದುರಾಳಿಯ ಬಲ ಕುಸಿದು ತನಗೆ ಹೆಚ್ಚಿನ ಲಾಭವಾಗಲಿದೆ ಎಂದು ಲೆಕ್ಕಹಾಕಿದ ಕಾಂಗ್ರೆಸ್ ಅದರ ಬಗ್ಗೆಯೇ ಕಳೆದ ಒಂದು ವಾರದಿಂದ ಹೆಚ್ಚು ದೃಷ್ಟಿಹರಿಸಿತ್ತು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿಯವರಿಗೆ ಅನ್ಯಾಯವಾಗಿದೆ ಎಂದು ಹೇಳಿಕೊಂಡುಬಂತು. ಆದರೆ, ಆ ವಿಷಯ ಹೆಚ್ಚೆಚ್ಚು ಪ್ರಸ್ತಾಪವಾಗುತ್ತಿದ್ದಂತೆ ಬೂಮ್ಾಂಗ್ ಆಗಬಹುದೆಂಬ ಅಂದಾಜಿನಲ್ಲಿ ವಿಷಯ ಬದಲಿಸಿದೆ. ಇದೀಗ ಮೀಸಲು ಪರಿಷ್ಕರಣೆ ಬಗ್ಗೆ ಸುಪ್ರಿಂ ಕೋರ್ಟ್ ನೀಡಿದ ಅಂಶವನ್ನು ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ಅಖಾಡದಲ್ಲಿ ತೊಡೆತಟ್ಟಿದೆ. ವಿಧಾನಸಭೆ ಚುನಾವಣೆಯಲ್ಲಿ ಪರಿಣಾಮ ಬೀರಬೇಕೆಂಬ ಅಂದಾಜಿನಲ್ಲೇ ಬಿಜೆಪಿ ಸರ್ಕಾರ ಕೈಗೊಂಡ ಕೆಲವು ಕ್ರಮಗಳಲ್ಲಿ ಮೀಸಲು ವರ್ಗೀಕರಣ ಹಾಗೂ ಮೀಸಲು ಹೆಚ್ಚಳ ತೀರ್ಮಾನ ಕೂಡ ಒಂದು. ಅದೀಗ ನ್ಯಾಯಾಲಯದಲ್ಲಿ ವಿಚಾರಣೆಗೊಳಪಟ್ಟಿದ್ದು, ನ್ಯಾಯಾಲಯದ ಸೂಚನೆ ಕೂಡ ಚುನಾವಣೆ ವಿಷಯವಾಗಿಸಲು ಕಾಂಗ್ರೆಸ್ ಬಯಸಿದೆ.

ಮೀಸಲು ವರ್ಗೀಕರಣ ಹಾಗೂ ಮೀಸಲು ಹೆಚ್ಚಳ ತೀರ್ಮಾನ ದಿಂದ ತನಗೆ ಚುನಾವಣೆಯಲ್ಲಿ ಹೆಚ್ಚು ಲಾಭವಾಗಲಿದೆ ಎಂದು ಬಿಜೆಪಿ ಬಯಸಿ ತಳಮಟ್ಟದಲ್ಲಿ ಕಾರ್ಯೋನ್ಮುಖವಾಗಿದೆ. ಐದು ವರ್ಷ ಅಧಿಕಾರದಲ್ಲಿ ಕಾಂಗ್ರೆಸ್ ಸದಾಶಿವ ಆಯೋಗದ ವರದಿ ಪ್ರಕಾರ ಒಳ ಮೀಸಲು ನೀಡಲಿಲ್ಲ. ಎಸ್ಟಿ ಮೀಸಲು ಹೆಚ್ಚಿಸಲಿಲ್ಲ. ಆದರೆ, ನಾವು ದಲಿತ ಸಮುದಾಯದ ಬೇಡಿಕೆ ಈಡೇರಿಸಿದ್ದೇವೆ, ಎಸ್ಟಿ ಸಮುದಾಯದ ಜನಸಂಖ್ಯೆಗೆ ಆಧಾರದಲ್ಲಿ ಮೀಸಲು ಹೆಚ್ಚಿಸಬೇಕೆಂಬ ತೀರ್ವನವನ್ನೂ ಕೈಗೊಂಡಿದ್ದೇವೆ, ಅದರ ಜತೆಗೆ ಮುಸ್ಲಿಮರ ಮೀಸಲನ್ನು ಇಡಬ್ಲ್ಯುಎಸ್ (ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ ಮೀಸಲು) ಅಡಿ ತಂದು, ಅವರು ಈವರೆಗೂ ಪಡೆದುಕೊಳ್ಳುತ್ತಿದ್ದ ಮೀಸಲನ್ನು ಒಕ್ಕಲಿಗರು ಹಾಗೂ ಲಿಂಗಾಯತರಿಗೆ ಶೇ.2ರಂತೆ ಹಂಚಿಕೆ ಮಾಡಲಾಗಿತ್ತು. ಈ ತೀರ್ಮಾನ ಕೈಗೊಂಡ ನಮಗೆ ಆಶೀರ್ವದಿಸಿ ಎಂದು ಬಿಜೆಪಿ ತನ್ನ ಚುನಾವಣೆ ಪ್ರಚಾರದಲ್ಲಿ ಕೋರಿಕೊಂಡು ಬಂದಿದೆ.

ಸಹಜವಾಗಿ ಈ ಪ್ರಯತ್ನ ಕಾಂಗ್ರೆಸ್ ಒಳಗೆ ಅಳುಕಿದೆ. ಒಂದು ವೇಳೆ ದೊಡ್ಡ ವರ್ಗದ ಮೇಲೆ ಸಣ್ಣ ಪರಿಣಾಮ ಬೀರಿದರೂ ತನ್ನ ಮತ ಬ್ಯಾಂಕ್ ಚದುರಲಿದೆ. ಹತ್ತಾರು ಕ್ಷೇತ್ರಗಳಲ್ಲಿ, ಕ್ಲೋಸ್ ಎನ್​ಕೌಂಟರ್ ಇರುವ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗೆ ಆಪತ್ತು ಬರಬಹುದೆಂದು ಅಂದಾಜಿಸಿದೆ. ಇದೇ ಕಾರಣಕ್ಕೆ ಕೋರ್ಟ್ ತೀರ್ಪನ್ನು ಮುಂದಿಟ್ಟುಕೊಂಡು, ಚುನಾವಣೆ ಪ್ರಚಾರ ನಡೆಸಲಾರಂಭಿಸಿದೆ. ಬೊಮ್ಮಾಯಿ ಸರ್ಕಾರ ತನ್ನ ಮೀಸಲಾತಿ ಹೆಚ್ಚಳ ಆದೇಶ ಸಮರ್ಥಿಸಿಕೊಳ್ಳಲು ಸುಪ್ರೀಂ ಕೋರ್ಟ್​ನಲ್ಲಿ ಅಫಿಡವಿಟ್ ಸಲ್ಲಿಸಲು ವಿಫಲವಾಗಿದೆ. ಆ ಮೂಲಕ ಮೀಸಲಾತಿ ವಿಚಾರದಲ್ಲಿ ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಸಮುದಾಯಗಳಿಗೆ ದ್ರೋಹ ಬಗೆದಿದೆ, ಅಪಮಾನ ಮಾಡಿದೆ ಎಂದು ನೇರವಾಗಿ ಆರೋಪಿಸಿದೆ.

ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರೇ ಈ ನಿರೂಪಣೆಯನ್ನು ಮುಂದೆಬಿಟ್ಟಿದ್ದು, ತನ್ನ ನಾಯಕರೆಲ್ಲರೂ ಪಕ್ಷದ ಪ್ರಚಾರ ಸಭೆಗಳಲ್ಲಿ ಗಟ್ಟಿಯಾಗಿ ಪ್ರಸ್ತಾಪ ಮಾಡಬೇಕೆಂದು ತಾಕೀತು ಮಾಡಿದ್ದಾರೆ.

ಮೇ 9ರವರೆಗೆ ಹೊಸ ಮೀಸಲು ತೀರ್ಮಾನ ಮಾಡಲ್ಲ ಎಂದು ಸರ್ಕಾರ ವಾಗ್ದಾನ ಮಾಡಿದೆ. ಇದನ್ನೇ ಬಂಡವಾಳವಾಗಿಸಿಕೊಂಡ ಕಾಂಗ್ರೆಸ್, ಬೊಮ್ಮಾಯಿ ಸರ್ಕಾರ 2002ರಲ್ಲಿ ಜಾರಿಗೆ ತಂದಿದ್ದ ಮೀಸಲಾತಿಯನ್ನು ಮರು ಜಾರಿ ಮಾಡುವುದಾಗಿ ಕೋರ್ಟ್​ನಲ್ಲಿ ತಿಳಿಸಿದೆ. ಆಮೂಲಕ ಒಕ್ಕಲಿಗರು 3ಎ ಹಾಗೂ ಲಿಂಗಾಯತರು 3ಬಿ ವರ್ಗೀಕರಣದಲ್ಲಿ ಮುಂದುವರಿಯಲಿದ್ದಾರೆ ಎಂದು ವಾದಿಸಿದೆ. ಒಕ್ಕಲಿಗರಿಗೆ, ಲಿಂಗಾಯತರಿಗೆ ಹೆಚ್ಚುವರಿಯಾಗಿ ಶೇ.2 ಮೀಸಲು ಸಿಗಲ್ಲ ಎಂದು ಒತ್ತಿ ಹೇಳಬಯಸಿದೆ. ಮತ್ತೊಂದು ಮಹತ್ವದ ಸಂಗತಿ ಎಂದರೆ ಮುಸ್ಲಿಮರ ಮೀಸಲು ಒಕ್ಕಲಿಗರಿಗೆ ಹಾಗೂ ಲಿಂಗಾಯರಿಗೆ ಹಂಚಿಕೆ ಮಾಡಲಾಗಿತ್ತು ಎಂಬ ಸಂಗತಿಯನ್ನು ಕಾಂಗ್ರೆಸ್ ಗೌಣವಾಗಿಸಿ ಎಚ್ಚರಿಕೆ ಹೆಜ್ಜೆ ಇಟ್ಟಿದೆ.

ಸುಪ್ರಿಂ ಕೋರ್ಟ್ ಮೇ 9ರಂದು ವಿಚಾರಣೆ ನಿಗದಿ ಮಾಡಿರುವುದರಿಂದ ಅಲ್ಲಿವರೆಗೆ ಆದೇಶ ಜಾರಿ ಮಾಡಲ್ಲ ಎಂದು ಹೇಳಿದವರೇ ನಾವು. ಅದು ತಡೆಯಾಜ್ಞೆಯಲ್ಲ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಚುನಾವಣೆ ಸಮಯದಲ್ಲಿ ಮೀಸಲಾತಿ ಹೆಚ್ಚಳ ಹೆಸರಿನಲ್ಲಿ ಈ ಸಮುದಾಯಗಳಿಗೆ ಲಾಲಿಪಾಪ್ ಕೊಟ್ಟು ಯಾಮಾ ರಿಸುವ ಪ್ರಯತ್ನ ನಡೆದಿದೆ. | ರಣದೀಪ್ ಸಿಂಗ್ ಸುರ್ಜೆವಾಲ ಕಾಂಗ್ರೆಸ್ ರಾಜ್ಯ ಉಸ್ತುವಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net