ಕೊಡಗಲ್ಲಿ ಮಳೆ ಅವಾಂತರ ಕಾರ್ಯಾಚರಣೆ ವಿಳಂಬ

Bagamandala
Published on

ಮಡಿಕೇರಿ: ಬ್ರಹ್ಮಗಿರಿ ಬೆಟ್ಟ ಕುಸಿದು ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್ ಸೇರಿ ಕಣ್ಮರೆಯಾಗಿರುವ ಐವರ ಶೋಧ ಕಾರ್ಯಾಚರಣೆ 2ನೇ ದಿನವಾದ ಶುಕ್ರವಾರವೂ ಪ್ರಾರಂಭವಾಗಲಿಲ್ಲ. ಮಳೆ ಆರ್ಭಟ ಹಾಗೂ ಭಾಗಮಂಡಲ-ತಲಕಾವೇರಿ ಮಾರ್ಗದಲ್ಲಿ ಗುಡ್ಡ ಕುಸಿದಿರುವುದು ಕಾರ್ಯಾಚರಣೆ ಪ್ರಾರಂಭಿಸಲು ಅಡ್ಡಿಯಾಗಿದೆ. ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್, ಸ್ಥಳೀಯ ಪೊಲೀಸರು ಸ್ಥಳದಲ್ಲಿದ್ದರೂ ಭೂಸಮಾಧಿ ಯಾಗಿರುವವರ ಪತ್ತೆಗೆ ಕಾರ್ಯಾಚರಣೆ ಕೈಗೆತ್ತಿ ಕೊಳ್ಳಲು ಪ್ರತಿಕೂಲ ಪರಿಸ್ಥಿತಿ ಸಹಕರಿಸುತ್ತಿಲ್ಲ. ಭಾಗಮಂಡಲ ಜಲಾವೃತವಾಗಿ ರುವುದರಿಂದ ಜೆಸಿಬಿ, ಇಟಾಚಿ ತಲಕಾವೇರಿ ಯತ್ತ ತೆರಳಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಭಾಗಮಂಡಲ- ತಲಕಾವೇರಿ ಮಾರ್ಗದಲ್ಲಿ ಸಾಕಷ್ಟು ಕಡೆ ಭೂಕುಸಿತವಾಗಿರುವುದು ಕಾರ್ಯಾಚರಣೆ ಪ್ರಾರಂಭಿಸಲು ಅಡ್ಡಿಯಾಗಿದೆ.

ಭಾಗಮಂಡಲ- ತಲಕಾವೇರಿ ಮಾರ್ಗದಲ್ಲಿ ಗುಡ್ಡ ಕುಸಿದಿರುವುದನ್ನು ಭಾಗಮಂಡಲದಲ್ಲಿದ್ದ 2 ಜೆಸಿಬಿ ಮೂಲಕ ತೆರವುಗೊಳಿಸಲಾಗುತ್ತಿದೆ. ಭಾಗಮಂಡಲದಲ್ಲಿ ಪ್ರವಾಹ ಇಳಿಮುಖಗೊಂಡಲ್ಲಿ ಮತ್ತು ಮಳೆ ಕಡಿಮೆಯಾದಲ್ಲಿ ಶನಿವಾರ ಶೋಧ ಕಾರ್ಯಾಚರಣೆ ಪ್ರಾರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ತಲಕಾವೇರಿ ಭಾಗದಲ್ಲಿ ಮಳೆ ಹೆಚ್ಚಳ ಹಾಗೂ ಪ್ರತಿಕೂಲ ಪರಿಸ್ಥಿತಿ ಹಿನ್ನೆಲೆಯಲ್ಲಿ ನಾಪತ್ತೆಯಾಗಿರುವ ಐವರ ಪತ್ತೆಗೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಾಧ್ಯವಾಗಿಲ್ಲ. ಮಳೆ ಕಡಿಮೆಯಾದಲ್ಲಿ ಶನಿವಾರ ಕಾರ್ಯಾಚರಣೆ ಪ್ರಾರಂಭಿಸಲಾಗುವುದೆಂದು ಶುಕ್ರವಾರ ತಲಕಾವೇರಿಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹಾಗೂ ಸಂಸದ ಪ್ರತಾಪ್​ಸಿಂಹ ಹೇಳಿದ್ದಾರೆ.

ರಾಜ್ಯಕ್ಕೆ ವಿಶೇಷ ಆರ್ಥಿಕ ನೆರವು ನೀಡಿ

ಬೆಂಗಳೂರು: ಸತತ ನೆರೆಯಿಂದ ಸಂತ್ರಸ್ತರಾಗಿರುವ ಜನತೆಗೆ ವಿಶೇಷ ಅರ್ಥಿಕ ನೆರವು ನೀಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ವಿಶೇಷ ಪ್ಯಾಕೇಜ್​ಗಾಗಿ ರಾಜ್ಯ ಸರ್ಕಾರ ಕೂಡ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಸಲಹೆ ಮಾಡಿದ್ದಾರೆ. ರಾಜ್ಯದಲ್ಲಿ ಕರೊನಾ ಜತೆಗೆ ಅತಿವೃಷ್ಟಿಯಿಂದ ಜನತೆ ಕಂಗಾಲಾಗಿದ್ದಾರೆ. ಸರ್ಕಾರ ಕೈಗೊಳ್ಳುವ ಪರಿಹಾರ ಕಾರ್ಯಕ್ಕೆ ನಾವೆಲ್ಲ ಜತೆಗೆ ನಿಲ್ಲುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಸಕಾಲಿಕ ಎಚ್ವರಿಕೆ ತೆಗೆದುಕೊಳ್ಳಿ

ಅತಿವೃಷ್ಟಿ ಸಂತ್ರಸ್ತರ ಪರಿಹಾರ ಕಾಮಗಾರಿ ಗಳಿಗೆ ಹಣಕಾಸಿನ ಕೊರತೆಯಾಗದಂತೆ ಸಕಾಲಿಕ ಎಚ್ಚರಿಕೆಯನ್ನು ಸರ್ಕಾರ ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ಬಿಗಡಾಯಿಸುತ್ತದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ. ಸಂತ್ರಸ್ತರಿಗೆ ಕೂಡಲೇ ಆಸರೆ ಕೇಂದ್ರಗಳನ್ನು ಸ್ಥಾಪಿಸಬೇಕು. ಬೆಳೆ ಹಾನಿಗೊಳಗಾದ ರೈತರಿಗೆ ಹಾಗೂ ಮನೆ ಕಳೆದುಕೊಂಡವರಿಗೆ, ಜೀವ ಹಾನಿಗೊಳಗಾದವರಿಗೆ ತಡಮಾಡದೆ ಸರ್ಕಾರ ಸಹಾಯಹಸ್ತ ಚಾಚಬೇಕು ಎಂದು ಆಗ್ರಹಿಸಿದ್ದಾರೆ.

ಭೂ ಕುಸಿತ

ಮಡಿಕೇರಿ ಸಮೀಪದ ಕಡಗದಾಳು ಬಳಿಯ ಬೊಟ್ಲಪ್ಪ ಗ್ರಾಮದಲ್ಲಿ ಭೂ ಕುಸಿತ ಉಂಟಾಗಿದೆ. ಬೊಟ್ಲಪ್ಪ ದೇವಾಲಯದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಡಿಕೇರಿ-ವಿರಾಜಪೇಟೆ ರಸ್ತೆಯ ಬೇತ್ರಿ ಸೇತುವೆ ಮೇಲೆ ಕಾವೇರಿ ನದಿ ನೀರು ಹರಿಯುತ್ತಿರುವುದರಿಂದ ಸಂಪರ್ಕ ಕಡಿತಗೊಂಡಿದೆ. ಕೀರೆಹೊಳೆ ಪ್ರವಾಹದಿಂದಾಗಿ ಗೋಣಿಕೊಪ್ಪದ ಪಟ್ಟಣದ 3ನೇ ವಾರ್ಡ್​ನ ಮನೆಗಳು ಜಲಾವೃತವಾಗಿವೆ.

ಡಿಸಿ ಕಚೇರಿ ಸ್ಥಳಾಂತರ

ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಗá-ಡ್ಡ ಕುಸಿಯಲಾರಂಭಿಸಿದೆ. ಕಳೆದ ರಾತ್ರಿ ಮಡಿಕೇರಿ-ಮಂಗಳೂರು ರಸ್ತೆಗೆ ಮಣ್ಣು ಕುಸಿದಿದ್ದು, ಬೆಳಗ್ಗೆಯೇ ಮಣ್ಣು ತೆರವು ಕಾರ್ಯ ನಡೆಯಿತು. ಮಳೆ ಮುಂದುವರಿದರೆ ಜಿಲ್ಲಾಡಳಿತ ಭವನವೂ ಕುಸಿಯುವ ಸಾಧ್ಯತೆ ಇರುವ ಬಗ್ಗೆ ಭೂ ವಿಜ್ಞಾನಿಗಳು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯನ್ನು ತಾತ್ಕಾಲಿಕವಾಗಿ ನಗರಸಭೆಗೆ ಸ್ಥಳಾಂತರ ಗೊಳಿಸಲಾಗಿದೆ.

ಕೃಷ್ಣಾ ತಟದಲ್ಲಿ ಪ್ರವಾಹದ ಆತಂಕ

ಮಹಾರಾಷ್ಟ್ರ ಸೇರಿ ಕೃಷ್ಣಾ ಮೇಲ್ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ನಾರಾಯಣಪುರ ಜಲಾಶಯದ ಮೂಲಕ ನದಿಗೆ ಶುಕ್ರವಾರ 1.84 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಇದರಿಂದಾಗಿ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕು ಹೂವಿನಹೆಡಗಿ ಸೇತುವೆ ಮುಳುಗುವ ಹಂತದಲ್ಲಿದೆ. ಸಮೀಪದ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಿದೆ. ಕೊಪ್ಪರದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಮೆಟ್ಟಿಲುವರೆಗೆ ನೀರು ಬಂದಿದೆ. ತಿಂಥಣಿ ಬ್ರಿಡ್ಜ್​ನ ಕಾಗಿನೆಲೆ ಗುರುಪೀಠ, ಅಡವಿಲಿಂಗೇಶ್ವರ ದೇವಸ್ಥಾನ ಹಾಗೂ ಮೌನೇಶ್ವರ ದೇವಸ್ಥಾನಕ್ಕೆ ಭಕ್ತರ ಭೇಟಿ ಸ್ಥಗಿತಗೊಳಿಸಲಾಗಿದೆ. ಲಿಂಗಸುಗೂರು ತಾಲೂಕು ಶೀಲಹಳ್ಳಿ ಸೇತುವೆ ಮುಳುಗಿದ್ದು, ಸಂಚಾರ ಸ್ಥಗಿತಗೊಳಿಸಲಾಗಿದೆ.

ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನ 6 ಟಿಎಂಸಿ ನೀರು

ತುಂಗಭದ್ರಾ ಜಲಾಶಯಕ್ಕೆ ಒಳಹರಿವು 81 ಸಾವಿರ ಕ್ಯೂಸೆಕ್​ಗೆ ಏರಿಕೆಯಾಗಿದೆ. ಇದರಿಂದಾಗಿ ಅಣೆಕಟ್ಟೆಗೆ ಒಂದೇ ದಿನ 6 ಟಿಎಂಸಿ ಅಡಿ ನೀರು ಹರಿದುಬಂದಿದೆ. ಜಲಾಶಯ 100.855 ಟಿಎಂಸಿ ಅಡಿ ಗರಿಷ್ಠ ಸಾಮರ್ಥ್ಯ ಹೊಂದಿದ್ದು, ಶುಕ್ರವಾರ 46.556 ಅಡಿ ಟಿಎಂಸಿ ನೀರು ಸಂಗ್ರಹವಾಗಿದೆ. ತುಂಗಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು ಹರಿಸಲಾಗುತ್ತಿದೆ. ಒಳಹರಿವು ಹೆಚ್ಚಳದಿಂದ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ, ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ ಹಾಗೂ ಹೊಸಪೇಟೆ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಬೆಳಗಾವಿಯಲ್ಲಿ ತಗ್ಗದ ನದಿಗಳ ಉಬ್ಬರ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೃಷ್ಣಾ ಹಾಗೂ ಉಪನದಿಗಳಾದ ವೇದಗಂಗಾ, ದೂಧಗಂಗಾ ನದಿಗಳು ಮೈದುಂಬಿ ಹರಿಯುತ್ತಿದ್ದು, ತೀರ ಪ್ರದೇಶಗಳಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಜಿಲ್ಲೆಯಲ್ಲಿ ಮಳೆ ಅಬ್ಬರ ತುಸು ಇಳಿಕೆ ಕಂಡಿದ್ದರೂ ಮಹಾರಾಷ್ಟ್ರದ ಮಹಾಬಲೇಶ್ವರ ಸೇರಿ ಕೊಯ್ನಾ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಮತ್ತಷ್ಟು ಏರಿಕೆಯಾಗಿದೆ. ಈ ವ್ಯಾಪ್ತಿಯಲ್ಲಿರುವ 7 ಸೇತುವೆಗಳು ಕಳೆದ ಮೂರು ದಿನಗಳಿಂದ ಜಲಾವೃತಗೊಂಡಿದ್ದು, ಶುಕ್ರವಾರವೂ ಮುಳುಗಡೆಯಾಗಿಯೇ ಇತ್ತು. ಹೀಗಾಗಿ ನದಿ ತೀರದಲ್ಲಿ ‘ಹೈ ಅಲರ್ಟ್’ ಘೊಷಿಸಲಾಗಿದೆ.

ಚಿಕ್ಕಮಗಳೂರಲ್ಲಿ ತುಂಗೆ, ಭದ್ರೆ ಪ್ರವಾಹ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರ ಶುಕ್ರವಾರವೂ ಮುಂದುವರಿದಿದೆ. ಕೊಪ್ಪ, ಶೃಂಗೇರಿ, ಮೂಡಿಗೆರೆ, ಕಳಸ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಭದ್ರಾ ಮತ್ತು ತುಂಗಾ ನದಿಗಳು ತುಂಬಿ ಹರಿಯುತ್ತಿವೆ. ಶೃಂಗೇರಿಯಲ್ಲಿ ತುಂಗಾ ಮತ್ತು ಬಾಳೆಹೊನ್ನೂರಿನಲ್ಲಿ ಭದ್ರಾ ನದಿಗಳು ಪ್ರವಾಹ ಸೃಷ್ಟಿಸಿವೆ. ಶೃಂಗೇರಿ ಮಠದ ಭೋಜನ ಶಾಲೆಗೆ ನೀರು ನುಗ್ಗಿದೆ. ನರಸಿಂಹವನದ ಗುರು ನಿವಾಸದ ರಸ್ತೆ, ವಾಹನ ರ್ಪಾಂಗ್ ಪ್ರದೇಶ ಮುಳುಗಡೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net