

ಕೋಲಾರ: ಮಕ್ಕಳಿಂದ ಮಲದ ಗುಂಡಿ ಶುಚಿಗೊಳಿಸಿದ ಪ್ರಕರಣ ನಡೆದಿರುವ ಜಿಲ್ಲೆಯ ಮಾಲೂರು ತಾಲೂಕಿನ ಯಲವಹಳ್ಳಿ ಮುರಾರ್ಜಿ ದೇಸಾಯಿ ಶಾಲೆಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಹಾಗೂ ಶಾಲಾ ಶಿಕ್ಷಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಡಿ.1ರಂದೇ ಪ್ರಕರಣ ಸಂಭವಿಸಿದ್ದರೂ ಯಾಕೆ ಕ್ರಮಕೈಗೊಂಡಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಸಮರ್ಪಕವಾದ ಉತ್ತರ ಬರದಿದ್ದಾಗ ಅಶೋಕ್ ಮತ್ತಷ್ಟು ವ್ಯಗ್ರರಾದರು. ಪ್ರಾಂಶುಪಾಲರು ಸೇರಿದಂತೆ ಶಿಕ್ಷಕರು ಶಾಲಾ ಮಕ್ಕಳಿಂದ ಮಲದ ಗುಂಡಿ ಸ್ವಚ್ಚ ಮಾಡಿಸಿದ್ದಾರೆ ಎಂದರೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವೈಲ್ಯ ಸ್ಪಷ್ಟವಾಗಿದೆ. ಕಾಲಕಾಲಕ್ಕೆ ವಸತಿ ನಿಲಯಕ್ಕೆ ಭೇಟಿ ನೀಡಿದ್ದರೆ ಇಂತಹ ಕೃತ್ಯ ಸಂಭವಿಸುತ್ತಿರಲಿಲ್ಲ. ಮಕ್ಕಳ ಪ್ರಾಣಕ್ಕೆ ಅಪಾಯವಾಗಿದ್ದರೆ ಯಾರು ಹೊಣೆ ಎಂದು ಕಿಡಿಕಾರಿದರು.
ಅಧಿಕಾರಿಗಳು ಹಾಗೂ ಮಕ್ಕಳ ಜತೆಗೆ ಸಭೆ ನಡೆಸಿದ ಆರ್.ಅಶೋಕ್, ಪ್ರಕರಣದ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಆನಂತರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಡಿ.1ರಂದು ಟನೆ ನಡೆದಿದ್ದರೂ ಇಲ್ಲಿಗೆ ದೊಡ್ಡ ವ್ಯಕ್ತಿಗಳು ಬಂದು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ಸವಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ವಿಡಿಯೋ, ದೂರು ಬಂದಿದ್ದರೂ ಸುಮ್ಮನಿದ್ದಾರೆ. ಅಧಿವೇಶನ ಸಂದರ್ಭದಲ್ಲಿ ವಿಚಾರ ಹೊರಗೆ ಬಂದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣದಿಂದಲೇ ಅಧಿಕಾರಿ, ಜನಪ್ರತಿನಿಧಿಗಳು ಎಲ್ಲರೂ ಸೇರಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ವಾಡಿದ್ದಾರೆ ಎಂದು ಅಶೋಕ್ ಆರೋಪಿಸಿದರು.
ನಾನು ಮಕ್ಕಳನ್ನು ಭೇಟಿ ವಾಡಿ ವಿಚಾರಿಸಿದೆ. ತೊಂದರೆ ಆಗಿರುವ ಬಗ್ಗೆ ಮಕ್ಕಳು ಹೇಳಿಕೊಂಡರು. ಯಾವುದೋ ಹಳ್ಳಿಗೆ ಬೆಳಗ್ಗೆ ತಿಂಡಿಯೂ ಇಲ್ಲದೆ ನಾವೇ ಹೋಗಿ ಕಾಡಿನಲ್ಲಿ ಬಿದಿರು ಕಡಿದುಕೊಂಡು ಬಂದಿದ್ದೆವು. ಒಮ್ಮೆ ನಾಗರಹಾವು ನಮ್ಮ ಕಡೆಗೆ ಅಟ್ಟಿಸಿಕೊಂಡು ಬಂದಿತ್ತು. ತಪ್ಪಿಸಿಕೊಂಡು ಓಡಿ ಬಂದಿದ್ದೆವು. ಕಚ್ಚಿದ್ದರೆ ಯಾರು ಹೊಣೆ ಎಂದು ಮಕ್ಕಳು ಪ್ರಶ್ನಿಸಿದರು ಎಂದು ಅಶೋಕ್ ತಿಳಿಸಿದರು.
ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ಕಾನೂನಿನ ಭಯವೇ ಇಲ್ಲ. ಸರಿಯಾಗಿ ಊಟ ಕೊಡುತ್ತಿರಲಿಲ್ಲ. ತರಕಾರಿ ಇಲ್ಲವೇ ಇಲ್ಲ, ಮೆನು ಪ್ರಕಾರ ಇಲ್ಲಿ ಸರಬರಾಜು ವಾಡುತ್ತಿಲ್ಲ. 240 ಮಕ್ಕಳಿಗೆ 4 ಲೀಟರ್ ಹಾಲು ತರಿಸುತ್ತಿದ್ದರು. ಕೆಟ್ಟು ಹೋದ ಮೊಟ್ಟೆ ಕೊಡುತ್ತಿದ್ದರು ಎಂದು ಮಕ್ಕಳು ಅಳಲು ತೊಡಿಕೊಂಡಿದ್ದಾರೆ. ಇನ್ನು ಮಕ್ಕಳಿಗೆ ಯಾವ ರೀತಿ ಊಟ ಕೊಡುತ್ತಿದ್ದರೊ? ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.