

ಬೆಂಗಳೂರು: ಯು.ಜಿ.ಸಿ. ಕರಡು ನಿಯಮಗಳು(2025) ಸಂವಿಧಾನದ ಬಾಹಿರ, ರಾಜಕೀಯ ಪ್ರೇರಿತವಾಗಿದ್ದು ಇವುಗಳನ್ನು ಸಾರಾಸಗಟು ತಿರಸ್ಕರಿಸುವಂತೆ(Request to state governments to reject UGC draft rule) ಜಾಗೃತ ನಾಗರಿಕರು ಕರ್ನಾಟಕ ವೇದಿಕೆ ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದೆ.
2020ರಲ್ಲಿ ಅಸಾಂವಿಧಾನಿಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಿದಾಗ ದೇಶಾದ್ಯಂತ ದೊಡ್ಡ ಮಟ್ಟದ ಪ್ರತಿರೋಧ ಹಾಗೂ ಪ್ರತಿಭಟನೆಯ ಮೂಲಕ ಅದನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿತ್ತು. ದೇಶದ ಬಹುತೇಕ ರಾಜ್ಯಗಳು ತಿರಸ್ಕರಿಸಿದ ಈ ಅಸಾಂವಿಧಾನಿಕ, ಅಪ್ರಜಾಸಾತ್ತಾತ್ಮಕ ಹಾಗೂ ಜನ ವಿರೋಧಿ ನೀತಿಯನ್ನೇ ಆಧರಿಸಿ ಯುಜಿಸಿ ತನ್ನ ಕರಡು ನಿಯಮಗಳು (2025)ನ್ನು ರೂಪಿಸಿ ಚರ್ಚೆಗೆ ಬಿಟ್ಟಿದೆ. ಈಗಾಗಲೇ ದೇಶದ ಜನತೆ ತಿರಸ್ಕರಿಸಿದ ನೀತಿಯನ್ನು ಆಧರಿಸಿ ರೂಪಿಸಲಾಗಿರುವ ಈ ಕರಡು ನಿಯಮಗಳು ರಾಜ್ಯ ಸರ್ಕಾರಗಳ ಮೇಲೆ ಮತ್ತೊಮ್ಮೆ ತಿರಸ್ಕೃತ ರಾಷ್ಟ್ರೀಯ ನೀತಿಯನ್ನು ಹಿಂಬಾಗಿಲಿನಿಂದ ಹೇರುವ ದೊಡ್ಡ ರಾಜಕೀಯ ಹುನ್ನಾರವಾಗಿದೆ ಎಂದು ವೇದಿಕೆ ಹೇಳಿದೆ.
ಈ ನಿಯಮಗಳು ದೇಶದ ವಿಶ್ವವಿದ್ಯಾಲಯ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಗುಣಮಟ್ಟ ಸುಧಾರಿಸುವ ಕುಂಟು ನೆಪದಲ್ಲಿ, ರಾಜ್ಯಗಳು ತಮ್ಮ ಸಂಪೂರ್ಣ ಧನ ಸಹಾಯದಿಂದ ನಡೆಸುತ್ತಿರುವ ಎಲ್ಲ ವಿಶ್ವವಿದ್ಯಾಲಯಗಳನ್ನು ಮತ್ತು ಸಂಯೋಜಿತ ಕಾಲೇಜುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಾಗಿದೆ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.
ಪ್ರಜಾಸತ್ತಾತ್ಮಕ ಒಕ್ಕೂಟ ವ್ಯವಸ್ಥೆ ಹಾಗೂ ಸಾಮಾಜಿಕ ನ್ಯಾಯದ ತತ್ವವನ್ನು ಬುಡಮೇಲು ಮಾಡಿ ಕೇಂದ್ರೀಕೃತ ಸರ್ವಾಧಿಕಾರವನ್ನು ಜಾರಿಗೊಳಿಸಲು ರೂಪಗೊಂಡ ರಾಜಕೀಯ ಯೋಜನೆ ಇದಾಗಿದೆ. ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದಿದರೂ ರಾಜ್ಯಗಳ ಹಕ್ಕನ್ನು ಕಸಿದುಕೊಳ್ಳುವ, ವಿಶ್ವವಿದ್ಯಾಲಯಗಳ ಸ್ವಾಯತ್ತತೆ ಮೊಟಕುಗೊಳಿಸುವ ಈ ತಿದ್ದುಪಡಿಯನ್ನು ತಿರಸ್ಕರಿಸಬೇಕು.
ೆ.5 ರಂದು ಬೆಂಗಳೂರಿನಲ್ಲಿ ನಡೆಯುವ ದಕ್ಷಿಣ ಭಾರತದ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ ಈ ಕರಡು ನಿಯಮಗಳನ್ನು ಒಮ್ಮತದಿಂದ ಸಾರಾಸಗಟು ತಿರಸ್ಕರಿಸುವ ಒಂದು ಅಂಶದ ನಿರ್ಣಯ ಅಂಗೀಕರಿಸಬೇಕೆಂದು ವೇದಿಕೆಯ ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ವಿಜಯಾ, ಪ್ರೊ.ಎಸ್. ಜಿ.ಸಿದ್ದರಾಮಯ್ಯ ಮತ್ತಿತರರು ಆಗ್ರಹಿಸಿದ್ದಾರೆ.