

ಶಿವಮೊಗ್ಗ: ಸರ್ಕಾರಿ ಜಾಗಗಳಲ್ಲಿ ಅಂಗನವಾಡಿಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಪೀಸ್ ಆರ್ಗನೈಜೇಷನ್ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಶಿವಮೊಗ್ಗ ಜಿಲ್ಲೆಗೆ ಹೊಸದಾಗಿ ಅಂಗನವಾಡಿ ಕೇಂದ್ರಗಳನ್ನು ಮಂಜೂರು ಮಾಡಿದೆ. ನಗರದ ವಾರ್ಡ್‌ಗಳಲ್ಲಿ ಕೂಡ ಅಂಗನವಾಡಿ ಕೇಂದ್ರಗಳನ್ನು ತೆರೆಯಬಹುದಾಗಿದೆ. ಆದರೆ ವಾರ್ಡ್‌ವಾರುಗಳಲ್ಲಿ ಸರ್ಕಾರಿ ಜಾಗಗಳಿದ್ದರೂ ಅಧಿಕಾರಿಗಳು ಪರಿಶೀಲನೆ ಮಾಡದೆ ಬಾಡಿಗೆ ಕಟ್ಟಡಗಳಲಿಲ್ಲಿ ಅಂಗನವಾಡಿ ನಡೆಸುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಹೊರೆಯಾಗುತ್ತದೆ ಎಂದು ಮನವಿದಾರರು ತಿಳಿಸಿದ್ದಾರೆ.
ನಗರದ 31ನೇ ವಾರ್ಡಿನಲ್ಲಿ ಬೇಕಾದಷ್ಟು ಸರ್ಕಾರಿ ಜಾಗಗಳಿವೆ. ಆದರೆ ಅದನ್ನು ಬಿಟ್ಟು ಶಾರದಾ ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದೆ. ಜತೆಗೆ ಇಲಿಯಾಸ್, ನಗರ, ಚಾಲುಕ್ಯನಗರ, ಆರ್‌ಎಂಎಲ್ ನಗರ, ಹಳೇ ಮಂಡ್ಲಿ ಮುಂತಾದ ಭಾಗಗಳಲ್ಲಿ ಸರ್ಕಾರಿ ಜಾಗವಿದೆ. ಆದ್ದರಿಂದ ಈ ಜಾಗಗಳಲ್ಲಿ ಅಂಗನವಾಡಿ ಸ್ಥಾಪಿಸಿ ಮೂಲ ಸೌಲಭ್ಯ ಒದಗಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು. ಪ್ರಮುಖರಾದ ರಿಯಾಜ್ ಅಹ್ಮದ್, ಸಯ್ಯದ್ ಶಫಿವುಲ್ಲಾ, ಜಹೀರ್, ಆದಿಲ್ ಪಾಶಾ, ಇಮ್ರಾನ್ ಖಾನ್ ಇದ್ದರು.