

ಶಿವಮೊಗ್ಗ: ನಗರದ ರೈಲ್ವೆ ನಿಲ್ದಾಣದ ಸಮೀಪ ಸಿಟಿ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಪ್ರಮುಖರು ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಡಿಸಿ ಕಚೇರಿ ಸಹಾಯಕ ಅಧಿಕಾರಿ ಪ್ರದೀಪ್ ನಿಕ್ಕಂ ಅವರಿಗೆ ಮನವಿ ಸಲ್ಲಿಸಿದರು.
ರೈಲ್ವೆ ನಿಲ್ದಾಣ ಮೂಲಕ ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಅಷ್ಟೇ ಪ್ರಮಾಣದ ಪ್ರಯಾಣಿಕರು ಈ ನಿಲ್ದಾಣಕ್ಕೆ ಬಂದಿಳಿಯುತ್ತಾರೆ. ಅಲ್ಲಿ ಆಟೋ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಆದರೆ ಮಧ್ಯಮ ಹಾಗೂ ಬಡ ವರ್ಗದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ನಿಲುಗಡೆಗೂ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ವೇದಿಕೆ ಅಧ್ಯಕ್ಷ ವಾಟಾಳ್ ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ಅರ್ಚನಾ ನಿರಂಜನ್, ಪ್ರಮುಖರಾದ ಸತೀಶ್ ಗೌಡ, ಲೋಕೇಶ್, ಅಕ್ಬರ್ ಬಾಷಾ, ಮಾರುತಿ ಮುಂತಾದವರು ಮನವಿ ಸಲ್ಲಿಸುವ ಸಂದರ್ಭದಲ್ಲಿದ್ದರು.