2.67 ಲಕ್ಷ ಟನ್ ಯೂರಿಯಾ ಪೂರೈಕೆಗೆ ಮನವಿ | Union Agri Minister respond

IMG-20250814-WA0021
Published on

ಬೆಂಗಳೂರು: ಕೇಂದ್ರವೇ 2025-26ನೇ ಸಾಲಿನಲ್ಲಿ ಹಂಚಿಕೆ ಮಾಡಿರುವಷ್ಟು ಪ್ರಮಾಣದಲ್ಲಿ ರಸಗೊಬ್ಬರ ಪೂರೈಸದ ಹಿನ್ನಲೆ ಕರ್ನಾಟಕ ರಾಜ್ಯದಲ್ಲಿ ಯುರಿಯಾ ಕೊರತೆಯಾಗಿದ್ದು ಅತ್ಯಂತ ತ್ವರಿತವಾಗಿ 2.67 ಲಕ್ಷ ಮೆ.ಟನ್ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತೆ ಮನವಿ ಮಾಡಿದರು.

ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚವ್ಹಾಣ್ ರವರು ಎಲ್ಲಾ ರಾಜ್ಯಗಳ ಕೃಷಿ ಸಚಿವರೊಂದಿಗೆ ಗುರುವಾರ ನಡೆಸಿದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಕರ್ನಾಟಕದಲ್ಲಿ ಸರಬರಾಜು ಕೊರತೆಯಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಸವಿವರವಾಗಿ ಗಮನ ಸೆಳೆದು ಶೀಘ್ರ ಬಾಕಿ ಪೂರೈಕೆಗೆ ಬೇಡಿಕೆ ಸಲ್ಲಿಸಿದರು.

ಕರ್ನಾಟಕ ವಿಧಾನಸಭೆ ಹಾಗೂ ವಿಧಾನಪರಿಷತ್ತು ಕಲಾಪಗಳಲ್ಲಿ ಎರಡು ದಿನ ರಸಗೊಬ್ಬರ ಕೊರತೆ ಬಗ್ಗೆ ನಡೆದ ಗಂಭೀರ ಚರ್ಚೆಗಳ ವಿಚಾರ ಹಾಗೂ ರಾಜ್ಯದ ಬೇಡಿಕೆ ಕೇಂದ್ರದ ಹಂಚಿಕೆ ಮತ್ತು ಪೂರೈಕೆ ಪ್ರಮಾಣದ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

ವಿಕಸಿತ ಕೃಷಿ ಅಭಿಯಾನ

ಕರ್ನಾಟಕದಲ್ಲಿ ಖರೀಫ್ ವಿಕಸಿತ  ಕೃಷಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗಿದೆ. ನಮ್ಮ ರಾಜ್ಯದಲ್ಲಿ ಜುಲೈ ತಿಂಗಳಿಗೆ 1.27 ಲಕ್ಷ ಟನ್ ಯೂರಿಯಾ ಮತ್ತು ಆಗಸ್ಟ್ ತಿಂಗಳಿಗೆ 1.40 ಲಕ್ಷ ಟನ್ ಯೂರಿಯಾ ಕೊರತೆಯಿದೆ. ಒಟ್ಟಾರೆಯಾಗಿ 2.67 ಲಕ್ಷ ಟನ್ ಯೂರಿಯಾವನ್ನು ಆದಷ್ಟು ಬೇಗ ಕರ್ನಾಟಕಕ್ಕೆ ವಿತರಿಸಲು ಅಗತ್ಯವಿದೆ ಎಂದು ಕೃಷಿ ಸಚಿವರು ವಿವರಿಸಿದರು.

ಆಗಸ್ಟ್-ಸೆಪ್ಟೆಂಬರ್ ಮಾಹೆಯಲ್ಲಿ ಬಿತ್ತನೆ ಕಾರ್ಯ ಹೆಚ್ಚಿನ ಪ್ರಮಾಣದಲ್ಲಿ ನಡೆಯುವುದರಿಂದ ರೈತರಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ರಸಗೊಬ್ಬರವನ್ನು ಪೂರೈಸಬೇಕಿದೆ. ವಿಳಂಭವಾದಲ್ಲಿ ರೈತರ ಬೆಳೆಗೆ ಹಾನಿಯಾಗುವ ಸಂಭವವಿರುತ್ತದೆ. ಬಹುತೇಕ ಬೆಳೆಗಳಿಗೆ ಮೇಲುಗೊಬ್ಬರವಾಗಿ ಯುರಿಯಾ ಬಳಸುವುದರಿಂದ ತುರ್ತಾಗಿ ಮನವಿ ಮಾಡಿದರು.

ನಾವು ರಬಿ ಹಂಗಾಮಿನ ಗೊಬ್ಬರದ ಅವಶ್ಯಕತೆಗಳ ವಿವರ ಸಲ್ಲಿಸಿದ್ದು ಅದರಂತೆ ಹಂಚಿಕೆ ಮಾಡುವಂತೆಯೂ ಅವರು ವಿನಂತಿಸಿದರು

ಕೇಂದ್ರ ಕೃಷಿ ಸಚಿವರ ಭರವಸೆ

ಇದೇ ವೇಳೆ ರಸಗೊಬ್ಬರ ಇಲಾಖೆ ಕಾರ್ಯದರ್ಶಿಯವರೊಂದಿಗೆ ಮಾತನಾಡಿ ಆದಷ್ಟು ಬೇಗ ಕರ್ನಾಟಕಕ್ಕೆ ಬಾಕಿ ರಸಗೊಬ್ಬರ ಪೂರೈಕೆಯ ವ್ಯವಸ್ಥೆ ಮಾಡುವುದಾಗಿ ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚವ್ಹಾಣ್  ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಉತ್ತರಪ್ರದೇಶ ರಾಜ್ಯ ಕೃಷಿ ಸಚಿವರಾದ ಶ್ರೀ ಸೂರ್ಯ ಪ್ರತಾಪ್ ಶಾಹಿ ಅವರು ಮಾತನಾಡಿ ರಾಜ್ಯಕ್ಕೆ 18 ಲಕ್ಷ ಮೆ.ಟನ್ ಯುರಿಯಾ ಹಂಚಿಕೆ ಮಾಡಲಾಗಿದ್ದು ಈ ವರೆಗೆ ಕೇವಲ 12 ಲಕ್ಷ ಮೆ.ಟನ್ ಪೂರೈಕೆಯಾಗಿದೆ. ಇನ್ನು 6 ಲಕ್ಷ ಮೆ.ಟನ್ ವ್ಯತ್ಯಾಸವಿದ್ದು ಸಮಸ್ಯೆ ತಲೆದೂರಿದೆ. ಆದಷ್ಟು ಬೇಗ ಬಾಕಿ ಪೂರೈಕೆ ಮಾಡುವಂತೆ ಮನವಿ ಮಾಡಿದರು.

ಬಿಹಾರ, ಉತ್ತರಾಖಂಡ, ಛತ್ತೀಸ್ಘಡ ಸೇರಿ ವಿವಿಧ ರಾಜ್ಯಗಳ ಕೃಷಿ ಸಚಿವರೂ ಸಹ ತಮ್ಮ ರಾಜ್ಯಗಳಲ್ಲಿ ಉಂಟಾಗಿರುವ ಯುರಿಯಾ ಮತ್ತು ಡಿ.ಎ.ಪಿ ರಸಗೊಬ್ಬರ ಕೊರತೆ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆದರು.

ಪ್ರಮುಖಾಂಶಗಳು

ರಾಜ್ಯದಲ್ಲಿ ಯಶಸ್ವಿಯಾಗಿ ರಬಿ ವಿಕಸಿತ ಕೃಷಿ ಅಭಿಯಾನ  ನಡೆಯುತ್ತಿದ್ದು ತಾವು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸೆಪ್ಟೆಂಬರ್ 15 ಮತ್ತು 16 ರಂದು ನಡೆಯುವ ರಬಿ ಸಮ್ಮೇಳನದಲ್ಲಿ ಭಾಗವಹಿಸುವುದಾಗಿ ಎನ್.ಚಲುವರಾಯಸ್ವಾಮಿ ಕೇಂದ್ರ ಸಚಿವರಿಗೆ ತಿಳಿಸಿದರು.

ಈ ಶೈಕ್ಷಣಿಕ ವರ್ಷದಿಂದಾಗಿ ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಿದ್ದು ಕೇಂದ್ರ ಐ.ಸಿ.ಎ.ಆರ್ ಮಾನ್ಯತೆಗೆ ಒಳಪಡಿಸಿ ಅಭಿವೃದ್ಧಿ ಅನುದಾನಗಳನ್ನು ಬಿಡುಗಡೆ ಮಾಡಿ, ಐಸಿಎಆರ್ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿ ಮತ್ತು ಯುಎಎಸ್ ಬೆಂಗಳೂರು ನಿಂದ ಎಲ್ಲಾ ಕೆವಿಕೆ ಮತ್ತು ಎಐಸಿಆರ್ಪಿ ಕೇಂದ್ರಗಳನ್ನು ವರ್ಗಾಯಿಸುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net