

ಶಿವಮೊಗ್ಗ: ಖಾಸಗಿ ಬಸ್ ಹಾಗೂ ಲಾರಿಗಳಿಗೆ ನಗರದ ಹೊರವಲಯದಲ್ಲಿ ಸುಸಜ್ಜಿತ ಟ್ರಕ್ ಹಾಗೂ ಬಸ್ ಟರ್ಮಿನಲ್ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಸ್ ಹಾಗೂ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಮಂಗಳವಾರ ಡಿಸಿ ಕಚೇರಿ ಸಹಾಯಕ ಅಧಿಕಾರಿ ಚನ್ನಪ್ಪ ಅವರಿಗೆ ಮನವಿ ಸಲ್ಲಿಸಿದರು.
ನಗರವು ವಾಣಿಜ್ಯ ದೃಷ್ಟಿಯಿಂದ ಸಾಕಷ್ಟು ಬೆಳೆದಿದೆ. ಇಲ್ಲಿಗೆ ಪ್ರತಿ ದಿನ ದೂರದ ಊರುಗಳಿಂದ ಸುಮಾರು 500 ಟ್ರಕ್‌ಗಳು ಆಗಮಿಸುತ್ತವೆ. ಬೇರೆಡೆಯಿಂದ 600ಕ್ಕೂ ಹೆಚ್ಚು ಖಾಸಗಿ ಬಸ್‌ಗಳೂ ಬರುತ್ತಿವೆ. ಇವುಗಳ ನಿಲುಗಡೆಗೆ ನಗರದೊಳಗೆ ಸೂಕ್ತ ವ್ಯವಸ್ಥೆಯಿಲ್ಲ. ಹೀಗಾಗಿ ಚಾಲಕರು ಹಾಗೂ ನಿರ್ವಾಹಕರು ವಿಶ್ರಾಂತಿ ಪಡೆಯುವುದು, ನಿತ್ಯಕರ್ಮಗಳನ್ನು ಪೂರೈಸಿಕೊಳ್ಳುವುದಕ್ಕೆ ಅಗತ್ಯ ಜಾಗವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.
ವಾಹನದಟ್ಟಣೆಯಿಂದ ನಗರದೊಳಗಿನ ರಸ್ತೆಗಳ ಮೇಲೆ ಒತ್ತಡ ಹೆಚ್ಚಿದೆ. ಇಲ್ಲಿ ಲಾರಿ, ಬಸ್‌ಗಳನ್ನು ನಿಲುಗಡೆ ಮಾಡುವುದು ಸಾಧ್ಯವಿಲ್ಲ. ನಿಲುಗಡೆ ಮಾಡಿದರೆ ಮತ್ತೊಂದು ಸಮಸ್ಯೆ ಸೃಷ್ಟಿಯಾಗುತ್ತದೆ. ಹೀಗಾಗಿ ನಗರದ ಮೂರು ಕಡೆಗಳಲ್ಲಿ ನಿರ್ಮಾಣವಾಗಿರುವ ರಿಂಗ್ ರೋಡ್‌ಗಳ ಪಕ್ಕದಲ್ಲಿ ಟ್ರಕ್ ಟರ್ಮಿನಲ್ ಸ್ಥಾಪಿಸಬೇಕು ಎಂದು ಒತ್ತಾಯಿಸಲಾಯಿತು.
ಟರ್ಮಿನಲ್ ಸ್ಥಾಪನೆಗೆ ಸುಮಾರು 45 ಎಕರೆ ಜಾಗದ ಅವಶ್ಯವಿದೆ. ಅಷ್ಟೊಂದು ಪ್ರಮಾಣದ ಸರ್ಕಾರಿ ಭೂಮಿ ಲಭ್ಯವಿಲ್ಲ ಎಂದು ಜಿಲ್ಲಾಡಳಿತ ಈಗಾಗಲೇ ವರದಿ ನೀಡಿದೆ. ತೇವರಚಟ್ನಳ್ಳಿ-ಗೊಂದಿ ಚಟ್ನಳ್ಳಿ ನಡುವೆ ಸೂಡಾದಿಂದ 45 ಎಕರೆ ಜಾಗ ಗುರುತಿಸಲಾಗಿದೆ. ಮೂರು ಕಡೆಗಳಲ್ಲಿ ಒಟ್ಟು 100 ಎಕರೆ ಭೂಮಿ ಗುರುತಿಸಿ, ರೈತರಿಗೆ ಉತ್ತಮ ಪರಿಹಾರ ನೀಡಿ ಟರ್ಮಿನಲ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.
ಬಸ್‌ಗಳ ನಿಲುಗಡೆಗೆ ಖಾಸಗಿ ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಇಲ್ಲವೇ ಸರ್ಕಾರಿ ಕಚೇರಿಗಳ ಆವರಣದಲ್ಲಿ ಸ್ಥಳ ಗುರುತಿಸುವಂತೆ ಒತ್ತಾಯಿಸಲಾಯಿತು.
ಲಾರಿ ಮಾಲೀಕರ ಸಂಘದ ಅಧ್ಯಕ್ಷ ತಲ್ಕೀನ್ ಅಹಮದ್, ಗೌರವಾಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಆರ್.ರಂಗಪ್ಪ, ಖಾಸಗಿ ನಗರ ಸಾರಿಗೆ ಬಸ್ ಮಾಲೀಕರ ಸಂಘದ ಅಧ್ಯಕ್ಷ ಆರ್.ರುದ್ರೇಶ್ ಇತರರಿದ್ದರು.