ರೈತ ಯುವಕರಿಗೆ ಮದುವೆಯಾಗುವವರಿಗೆ ಐದು ಲಕ್ಷ ರೂ. ಪ್ರೋತ್ಸಾಹಧನದ ಮೊರೆ !

Farmer conference
Published on

ಬೆಂಗಳೂರು: ರೈತರಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ, ಹಳ್ಳಿಗಳಲ್ಲಿ ವಾಸಿಸುವ ರೈತ ಯುವಕರ ಈ ಸಮಸ್ಯೆಗೆ ಪರಿಹಾರ ಸರ್ಕಾರದ ಕೈಯ್ಯಲ್ಲಿದೆ !. ರೈತ ಯುವಕರನ್ನು ಮದುವೆಯಾಗಲು ಮುಂದೆ ಬರುವ ಯುವತಿಯರಿಗೆ ಐದು ಲಕ್ಷ ರೂ. ಪ್ರೋತ್ಸಾಹಧನ ನೀಡಬೇಕು ಎಂದು ರಾಜ್ಯ ರೈತ ಸಂಘ ಮೊರೆಯಿಟ್ಟಿದೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ನೆನಪಿಗಾಗಿ ರೈತರ ಸಮಾವೇಶ ಶನಿವಾರ ನಡೆಯಿತು. ಈ ಸಂದರ್ಭದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹಲವು ಹಕ್ಕೊತ್ತಾಯಗಳನ್ನು ಮಂಡಿಸಿದರು.

ಈ ಪೈಕಿ ರೈತ ಯುವಕರನ್ನು ಮದುವೆಯಾಗುವವರಿಗೆ ಐದು ಲಕ್ಷ ರೂ. ಪ್ರೋತ್ಸಾಹಧನ ನೀಡಬೇಕು ಎಂದು ಕೋರುವ ಮೂಲಕ ಸಿಎಂ ಗಮನಸೆಳೆದರು. ನಂತರ ಸಮಾವೇಶ ಉದ್ದೇಶಿಸಿ ಸಿಎಂ ಸಿದ್ದರಾಮಯ್ಯ ಮಾತನಾಡುವಾಗ ರೈತ ಯುವಕರ ಮದುವೆ ಸಮಸ್ಯೆಯನ್ನು ಪ್ರಸ್ತಾಪಿಸಿ, ಬಜೆಟ್ ರೂಪಿಸುವಾಗ ಪ್ರೋತ್ಸಾಹಧನದ ಬಗ್ಗೆ ಚಿಂತನೆ ನಡೆಸುವೆ ಎಂಬ ಭರವಸೆ ನೀಡಿದರು.

ಕರೊನಾ ಸಾಂಕ್ರಾಮಿಕ ರೋಗದ ಬಳಿಕ ನೂರಾರು ಟೆಕ್ಕಿಗಳು, ಬೇರೆ ಉದ್ಯೋಗದಲ್ಲಿದ್ದವರು ಕೃಷಿಗೆ ಮರಳಿದ್ದಾರೆ. ಕೃಷಿಯಲ್ಲಿ ಹೊಸ ಪ್ರಯೋಗ, ಹೊಸತನಕ್ಕೂ ಕೈಹಾಕಿದ್ದಾರೆ. ಕೃಷಿಯತ್ತ ಮುಖ ಮಾಡಿದವರನ್ನು ಕೃಷಿಯಲ್ಲೇ ಉಳಿದುಕೊಳ್ಳಲು ಗರಿಷ್ಠ 20 ಲಕ್ಷ ರೂ.ವರೆಗೆ ಆರ್ಥಿಕ ನೆರವಿನ ಯೋಜನೆ ಜಾರಿಗೊಳಿಸಬೇಕು ಎಂದು ಬಡಗಲಪುರ ನಾಗೇಂದ್ರ ಮನವಿ ಮಾಡಿದರು.

ಹೆಕ್ಟೇರ್‌ಗೆ 25 ಸಾವಿರ ರೂ. ಪರಿಹಾರಕ್ಕೆ ಒತ್ತಾಯ

ಬರಗಾಲಬಾಧಿತ ರೈತರ ಬಗ್ಗೆ ಕೇಂದ್ರ ಸರ್ಕಾರದ ತಾತ್ಸಾರ, ರಾಜ್ಯ ಸರ್ಕಾರ ಕೇವಲ ಎರಡು ಸಾವಿರ ರೂ. ಪರಿಹಾರ ನೀಡಲು ಮುಂದೆ ಬರುವುದನ್ನು ಸಮಾವೇಶ ಖಂಡಿಸಿತು. ಹಸಿರು ಕ್ರಾಂತಿ ಪಿತಾಮಹ ಪ್ರೊ.ಎಂ.ಎಸ್.ಸ್ವಾಮಿನಾಥನ್ ಅವರಿಗೆ ಕೇಂದ್ರ ಸರ್ಕಾರ ‘ಭಾರತರತ್ನ’ ಪ್ರಕಟಿಸಿದ್ದನ್ನು ಸ್ವಾಗತಿಸಿ, ಅಭಿನಂದನೆ ಸಲ್ಲಿಸಿತು.

ಪ್ರತಿಹೆಕ್ಟೇರ್‌ಗೆ 25 ಸಾವಿರ ಬರ ಪರಿಹಾರ ನೀಡಬೇಕು. ಬೆಳೆ ಸಾಲ ವಸೂಲಿಗೆ ವಾಣಿಜ್ಯ ಬ್ಯಾಂಕ್‌ಗಳಿಂದ ಆಸ್ತಿ ಜಪ್ತಿ ನೋಟಿಸ್ ನೀಡುವುದನ್ನು ನಿಲ್ಲಿಸಬೇಕು. ಅನಾವೃಷ್ಟಿ-ಅತಿವೃಷ್ಠಿಗೆ ವೈಜ್ಞಾನಿಕ ನೆಲೆಯಲ್ಲಿ ಪರಿಹಾರೋಪಾಯ, ್ರೂಟ್ಸ್ ತಂತ್ರಾಂಶದಲ್ಲಿ ರೈತ ಮಹಿಳೆಯರ ನೋಂದಣಿಗೆ ಅವಕಾಶ, ರೈತರ ಮೇಲೆ ಹೂಡಿರುವ ದಾವೆ ವಾಪಸ್ ಸೇರಿ 19 ಹಕ್ಕೊತ್ತಾಯಗಳ ನಿರ್ಣಯಗಳನ್ನು ಸಮಾವೇಶ ಅಂಗೀಕರಿಸಿತು.

ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್, ಅಧ್ಯಕ್ಷ, ಬಡಗಲಪುರ ನಾಗೇಂದ್ರ ಮತ್ತಿತರ ಪದಾಧಿಕಾರಿಗಳು ಜಂಟಿಯಾಗಿ ಹಕ್ಕೊತ್ತಾಯ ನಿರ್ಣಯಗಳನ್ನು ಮುಖ್ಯಮಂತ್ರಿಗೆ ಸಲ್ಲಿಸಿದರು.

ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಮಾತನಾಡಿ ಸಮಾವೇಶದಲ್ಲಿ ಸ್ವೀಕರಿಸಿದ ಹಕ್ಕೊತ್ತಾಯ ನಿರ್ಣಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಬಜೆಟ್ ರೂಪಿಸುವಾಗ ಕಾರ್ಯಸಾಧು ಬೇಡಿಕೆ ಈಡೇರಿಸಲು ಪ್ರಯತ್ನಿಸುವುದಾಗಿ ಆಶ್ವಾಸನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net