ಪ್ರಜಾಪ್ರತಿನಿಧಿಗಳು ಗೃಹಲಕ್ಷ್ಮೀ ಯೋಜನೆ ಪ್ರತಿ ಮನೆಗೂ ತಲುಪಿಸಿ; ಪ್ರಕಾಶ ಕೋಳಿವಾಡ

6-RNR-07.
Published on

ರಾಣೆಬೆನ್ನೂರ: ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿಯಾದ ಗೃಹಲಕ್ಷ್ಮೀ ಯೋಜನೆಯ ಲಾಭವನ್ನು ಪ್ರತಿಯೊಂದು ಕುಟುಂಬದ ಮಹಿಳೆಯರಿಗೂ ತಲುಪಿಸುವ ಗುರುತರ ಜವಾಬ್ದಾರಿ ಪ್ರಜಾಪ್ರತಿನಿಧಿಗಳ ಮೇಲಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ತಾಪಂ, ತಾಲೂಕು ಆಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗೃಹಲಕ್ಷ್ಮೀ ಯೋಜನೆಯಡಿ ತಾಲೂಕಿನ ಎಲ್ಲ ಗ್ರಾಮಗಳಿಂದ ಆಯ್ಕೆಯಾದ ಪ್ರಜಾಪ್ರತಿನಿಧಿಗಳಿಗಾಗಿ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ಯಾಸ್ ಸಿಲೆಂಡರ್ ಹಾಗೂ ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬವಣೆಯಿಂದ ತತ್ತರಿಸಿರುವ ಜನರಿಗೆ ಅಲ್ಪ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಗೃಹಲಕ್ಷ್ಮೀ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಹಸೀಲ್ದಾರ ಹನುಮಂತಪ್ಪ ಶಿರಹಟ್ಟಿ ಮಾತನಾಡಿ, ಪ್ರಜಾಪ್ರತಿನಿಧಿಗಳು ತಾಲೂಕಿನ ಎಲ್ಲ ಅರ್ಹ ಫಲಾನುಭವಿಗಳ ಮನೆ-ಮನೆಗೆ ಭೇಟಿ ನೀಡಿ ಅರ್ಜಿ ನೋಂದಾಯಿಸಬೇಕು ಎಂದರು.
ಯೋಜನೆ ಕುರಿತು ಸಿಡಿಪಿಒ ಪಾರ್ವತಿ ಹುಂಡೇಕಾರ ಮಾಹಿತಿ ನೀಡಿದರು. ಯೋಜನೆಯ ನೋಂದಣಿ ಕುರಿತು ಪ್ರಜಾಪ್ರತಿನಿಧಿಗಳಿಗೆ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಅರುಣ ಕಾಳಪ್ಪನವರ ತರಬೇತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net