ರಕ್ಷಣಾ ಅನುದಾನ ಕಡಿತಕ್ಕೆ ವಿರೋಧ ಸಂಸದೀಯ ಸ್ಥಾಯಿ ಸಮಿತಿ ವರದಿ

sdfsdfgfgh
Published on

ನವದೆಹಲಿ: ರಕ್ಷಣಾ ವೆಚ್ಚಗಳಿಗೆ ಸಾಕಷ್ಟು ಅನುದಾನ ನೀಡಬೇಕು. ಪ್ರಸ್ತುತ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಇರುವಾಗ ಆರ್ಥಿಕವಾಗಿ ಕೈಕಟ್ಟಿಹಾಕುವುದು ಸಮಂಜಸವಲ್ಲ ಎಂದು ರಕ್ಷಣಾ ವಿಷಯ ಕುರಿತ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.

ಮೂರೂ ಸೇನಾಪಡೆಗಳ ಬೇಡಿಕೆ ಮತ್ತು ಬಜೆಟ್​ನಲ್ಲಿ ಒದಗಿಸಲಾಗಿರುವ ಅನುದಾನದ ಮಧ್ಯೆ ಬಹಳ ಅಂತರ ಇದೆ. ರಕ್ಷಣಾ ಅನುದಾನದಲ್ಲಿ ಕೈ ಬಿಗಿಹಿಡಿಯುವುದು ಸೂಕ್ತವಲ್ಲ. ಮೂರೂ ಪಡೆಗಳು ಬಂಡವಾಳದ ಖರ್ಚುವೆಚ್ಚಕ್ಕಾಗಿ 2,15,995 ಕೋಟಿ ರೂಪಾಯಿ ಬೇಡಿಕೆ ಇರಿಸಿದ್ದವು. ಆದರೆ, ಒದಗಿಸಲಾಗಿರುವ ಅನುದಾನ 1,52,369.61 ಕೋಟಿ ರೂಪಾಯಿ. ಅಂದರೆ, 63 ಸಾವಿರ ಕೋಟಿ ರೂ. ಕಡಿಮೆ ಇದೆ. ಈ ರೀತಿ ಅನುದಾನ ಕಡಿತ ಮಾಡುವುದರಿಂದ ರಕ್ಷಣಾ ಸೇವೆಗಳ ಸಿದ್ಧತೆಗೆ ತೊಡಕಾಗುತ್ತದೆ ಎಂದು ಲೋಕಸಭೆಯಲ್ಲಿ ಬುಧವಾರ ಮಂಡಿಸಲಾದ ಸಮಿತಿಯ ವರದಿ ಅಸಮಧಾನ ವ್ಯಕ್ತಪಡಿಸಿದೆ.

ಗಡಿ ಉದ್ವಿಗ್ನತೆ ಕಾರಣ: 2022-23ರ ಬಜೆಟ್​ನಲ್ಲಿ ಭೂ, ವಾಯು ಮತ್ತು ನೌಕಾಪಡೆಗಳಿಗೆ ಕ್ರಮವಾಗಿ 14,729.11 ಕೋಟಿ ರೂ., 20,031,.97 ಕೋಟಿ ರೂ., 28,471.05 ಕೋಟಿ ರೂ. ಅನುದಾನ ನೀಡಲಾಗಿದೆ. ಇದು ಕಳೆದ ವರ್ಷಕ್ಕಿಂತ ಹೆಚ್ಚಾಗಿದ್ದರೂ, ಪ್ರಸಕ್ತ ಗಡಿ ಉದ್ವಿಗ್ನತೆಯ ಸನ್ನಿವೇಶದಲ್ಲಿ ಈ ಅನುದಾನ ಸಾಕಾಗುವುದಿಲ್ಲ. ಜತೆಗೆ ಬಳಕೆಯಾಗದ ಹಣವನ್ನು ವಾಪಸು ಪಡೆಯುವ ಷರತ್ತು ಇಲ್ಲದೆ ರಕ್ಷಣಾ ಅನುದಾನವನ್ನು ಉದಾರವಾಗಿ ನೀಡಬೇಕು ಸಮಿತಿ ಹೇಳಿದೆ. ಬಿಜೆಪಿ ಸಂಸದ ಜುಯಲ್ ಓರಮ್ ಅಧ್ಯಕ್ಷತೆಯ ರಕ್ಷಣಾ ಸ್ಥಾಯಿ ಸಮಿತಿಯಲ್ಲಿ 30 ಸಂಸದರು ಇದ್ದಾರೆ. ಕಾಂಗ್ರೆಸ್​ನ ರಾಹುಲ್ ಗಾಂಧಿ, ಎನ್​ಸಿಪಿಯ ಶರದ್ ಪವಾರ್ ಕೂಡ ಇದರ ಸದಸ್ಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net