

ಬೆಂಗಳೂರು: ಆರ್‌ಸಿಬಿ ತಂಡದ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧಿಸಿದಂತೆ ಹತ್ತು ದಿನಗಳಲ್ಲಿ ನ್ಯಾಯಾಂಗ ತನಿಖೆಯ ವರದಿ ಬರುವ ಸಾಧ್ಯತೆಯಿದೆ ಎಂದು ರಾಜ್ಯ ಸರ್ಕಾರದ ಪರ ಎಜಿ ಕೆ.ಶಶಿಕಿರಣ್ ಶೆಟ್ಟಿ ನ್ಯಾಯಪೀಠದ ಮುಂದೆ ಭರವಸೆ ವ್ಯಕ್ತಪಡಿಸಿದರು.
ಈ ವಿಚಾರವಾಗಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ಪರ ಹಾಜರಿದ್ದ ಎಜಿ ಕೆ. ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ಸುಮಾರು ಹತ್ತು ದಿನಗಳಲ್ಲಿ ನ್ಯಾಯಾಂಗ ತನಿಖೆಯ ವರದಿ ಬರುವ ಸಾಧ್ಯತೆಯಿದೆ. ಈ ಹಿನ್ನಲೆ ಹೀಗಾಗಿ ಮುಚ್ಚಿದ ಲಕೋಟೆಯಲ್ಲಿನ ಸರ್ಕಾರದ ವರದಿ ಸಲ್ಲಿಸುವಂತೆ ಒತ್ತಾಯಿಸಬಾರದು ಹಾಗೂ ವಿಚಾರಣೆ ಹತ್ತು ದಿನಗಳ ಕಾಲ ಮುಂದೂಡಲು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.