ಕಸ್ತೂರಿ ರಂಗನ್ ವರದಿ; ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಬಗ್ಗೆ ಸಮಾಲೋಚನೆ

khandre
Published on

ಬೆಂಗಳೂರು: ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೇಂದ್ರದ 6ನೇ ಅಧಿಸೂಚನೆಯನ್ನು ಸಂಪೂರ್ಣ ತಿರಸ್ಕರಿಸುವ, ಈಗಾಗಲೇ ಇರುವ 16,114 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೀಮಿತಗೊಳಿಸಿ ಒಪ್ಪಿಕೊಳ್ಳುವ ಅಥವಾ ಹೊಸದಾಗಿ ಸಮಿತಿ ರಚಿಸಿ ಪುನರ್ ಪರಿಶೀಲಿಸುವ ಮೂರು ವಿಷಯಗಳನ್ನು ಸಚಿವಮ ಸಂಪುಟದ ಮುಂದಿಡಲು ಉಪ ಸಮಿತಿ ನಿರ್ಣಯಿಸಿದೆ ಎಂದು ಮೂಲಗಳು ತಿಳಿಸಿವೆ.

ವಿಧಾನಸೌಧದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು. ಸಚಿವರಾದ ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಮಧು ಬಂಗಾರಪ್ಪ ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಕಸ್ತೂರಿ ರಂಗನ್ ವರದಿ ಜಾರಿಯಿಂದ ರಾಜ್ಯದ ಪಶ್ಚಿಮಘಟ್ಟ ಪ್ರದೇಶದ ಸಮಸ್ಯೆಗಳನ್ನು ಪರಿಹರಿಸಲು ಮೂರು ಪ್ರಸ್ತಾವನೆ ಕುರಿತು ಅಮೂಲಾಗ್ರವಾಗಿ ಚರ್ಚಿಸಿತು.

ಅರಣ್ಯ ಸಚಿವ ಈಶ್ವರ ಖಂಡ್ರೆ, ಪಶ್ಚಿಮ ಘಟ್ಟ ವ್ಯಾಪ್ತಿಯ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ, ಆ ಭಾಗದ ಜನರ ಆತಂಕಗಳ ಕುರಿತು ಸಭೆಯ ಗಮನ ಸೆಳೆದರು.

ಈ ಹಿಂದೆ ಅಧಿಸೂಚನೆ ಪ್ರಕಟವಾದಾಗಲೂ ರಾಜ್ಯ ಸರ್ಕಾರ ಅದನ್ನು ಸಾರಾಸಗಟ ತಿರಸ್ಕರಿಸಿದೆ. ಈಗಲೂ ತಿರಸ್ಕರಿಸಬಹುದು. ಆದರೆ, ಕೇರಳ ರಾಜ್ಯದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಹೊರತುಪಡಿಸಿ ಸಮ್ಮತಿ ನೀಡಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಸಹ 16,114 ಚ.ಕಿ.ಮೀ. ವ್ಯಾಪ್ತಿಗೆ ಮಾತ್ರ ಪರಿಸರ ಸೂಕ್ಷ್ಮ ಪ್ರದೇಶವನ್ನು ಅನ್ವಯಗೊಳಿಸಲು ಅವಕಾಶವಿದೆ ಎಂಬ ಕುರಿತು ಸಭೆಯಲ್ಲಿ ವಿಸ್ಕೃತ ಚರ್ಚೆ ನಡೆಯಿತು.

ಸಭೆಯಲ್ಲಿ ನಿರ್ಣಯಿಸಲಾದ ಮೂರು ಪ್ರಸ್ತಾವನೆಗಳನ್ನು ಸಚಿವ ಸಂಪುಟದ ಮುಂದೆ ತಂದು ಒಪ್ಪಿಗೆ ಪಡೆದು ಕೇಂದ್ರ ಕೇಂದ್ರಕ್ಕೆ ಮನವಿ ಸಲ್ಲಿಸಲು ಸಭೆ ಒಮ್ಮತದ ಅಭಿಪ್ರಾಯ ಪಟ್ಟಿತು ಎನ್ನಲಾಗಿದೆ. ಕಸ್ತೂರಿ ರಂಗನ್ ವರದಿ ಸಲ್ಲಿಸಿ ದಶಕವೇ ಉರುಳಿದೆ. ಹಾಗಾಗಿ ಬದಲಾದ ಪರಿಸ್ಥಿತಿ ಅನುಗುಣವಾಗಿ ಹೊಸ ಸಮಿತಿ ರಚಿಸಿ ವರದಿ ಪಡೆಯಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸರ್ವಪಕ್ಷ ನಿಯೋಗ ತೆರಳಲು ಚರ್ಚೆ

ಕಸ್ತೂರಿ ರಂಗನ್ ವರದಿ ಜಾರಿಯಿಂದ ರಾಜ್ಯದಲ್ಲಿ ತೆರಬೇಕಾದ ಬೆಲೆಯ ಬಗ್ಗೆ ಸರ್ವಪಕ್ಷ ನಿಯೋಗವನ್ನು ಕೇಂದ್ರದ ಬಳಿ ಕೊಂಡೊಯ್ಯುವ ಕುರಿತು ಸಮಾಲೋಚನೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ಉಪ ಸಮಿತಿ ನಿರ್ಣಯಗಳು

1.ಹೊಸ ಸಮಿತಿ ರಚಿಸಿ ಪುನರ್ ಪರಿಶೀಲನೆ ನಡೆಸುವುದು ಅವಶ್ಯ

2.ರಾಜ್ಯದಲ್ಲಿ 16,114 ಚ.ಕಿ.ಮೀಗೆ ಮಾತ್ರ ಪರಿಸರ ಸೂಕ್ಷ್ಮ ಪ್ರದೇಶ ಅನ್ವಯ

3.ಕೇಂದ್ರದ 6ನೇ ಅಧಿಸೂಚನೆ ತಿರಸ್ಕರಿಸಲು ಕೇಂದ್ರದ ಮೇಲೆ ಒತ್ತಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net