

ಬೆಂಗಳೂರು: ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಅವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಸ್ವೀಕರಿಸಿರಯವುದು ರಾಜಕೀಯ ತಂತ್ರಗಾರಿಕೆ. ಮುಂದಿನ ಲೋಕಸಭೆ ಚುನಾವಣೆವರೆಗೆ ಈ ತಂತ್ರ ಚಾಲ್ತಿಯಲ್ಲಿರುತ್ತದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಾಮಾಜಿಕ ಸಮೀಕ್ಷೆಯನ್ನು ಜಾತಿ ಗಣತಿ ಎಂದು ಹೆಸರಿಸಲಾಗಿದೆ. ಎಚ್.ಕಾಂತರಾಜು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತಯಾರಾದ ವರದಿಯೋ? ಅಥವಾ ಜಯಪ್ರಕಾಶ್ ಹೆಗ್ಡೆ ಸಿದ್ಧಪಡಿಸಿದ ವರದಿಯೋ ಎಂಬ ಬಗ್ಗೆ ಗೊಂದಲವಿದೆ. ವರದಿ ಸ್ವೀಕರಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು, ಯಾವ ವರದಿ ಸ್ವೀಕರಿಸಿದ್ದಾರೆ ಎಂದು ಸ್ಪಷ್ಟಪಡಿಸಿ ಗೊಂದಲ ನಿವಾರಣೆ ಮಾಡಬೇಕು ಎಂದು ಒತ್ತಾಯಿಸಿದರು.
ದಾವಣಗೆರೆ ಶಾಮನೂರು ಶಿವಶಂಕರಪ್ಪ ಗುಡುಗು, ಕನಕಪುರದ ಡಿ.ಕೆ.ಶಿವಕುಮಾರ್ ಸಿಡಿಲಿಗೆ ಸಿಎಂ ಸಿದ್ದರಾಮಯ್ಯ ಬೆಚ್ಚಿಬಿದ್ದು, ವರದಿ ಮುಚ್ಚಿಟ್ಟಿದ್ದಾರೆ. ಹಿಂದುಳಿದವರು ಸೇರಿ ಎಲ್ಲ ವರ್ಗಗಳ ಬಗ್ಗೆ ಪ್ರಾಮಾಣಿಕ ಕಳಕಳಿಯಿದ್ದರೆ ವರದಿ ಬಹಿರಂಗಪಡಿಸುತ್ತಿದ್ದರು ಎಂದು ಕೋಟ ಶ್ರೀನಿವಾಸ ಪೂಜಾರಿ ತಿವಿದರು.
ಎಚ್.ಎಸ್.ದ್ವಾರಕನಾಥ್ ಈ ಹಿಂದೆ ಆಯೋಗದ ಅಧ್ಯಕ್ಷರಾಗಿದ್ದಾಗ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸುವ ಜತೆಗೆ ಸಾರ್ವಜನಿಕರ ಮುಂದಿಟ್ಟಿದ್ದರು. ಜನರ ತೆರಿಗೆ ಹಣವನ್ನು ಖರ್ಚು ಮಾಡಿ ತಯಾರಿಸಿದ ವರದಿ ಎಂದು ತಮ್ಮ ನಿರ್ಧಾರ ಸಮರ್ಥಿಸಿಕೊಂಡಿದ್ದರು. ಆದರೆ ಸಿದ್ದರಾಮಯ್ಯ ಅವರು ತಾವು ವರದಿ ಬಿಡುಗಡೆ ಮಾಡುತ್ತಿಲ್ಲ. ಹೆಗ್ಡೆಯವರಿಗೆ ಅವಕಾಶ ಕೊಟ್ಟಿಲ್ಲವೆಂದರೆ, ಲೋಕಸಭೆ ಚುನಾವಣೆಗೆ ಹೂಡಿರುವ ರಾಜಕೀಯ ತಂತ್ರಗಾರಿಕೆ, ಕಾಳಜಿಯ ನಾಟಕವಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆಗೆ ಸಂಬಂಧಿಸಿದ ಎಫ್ ಎಸ್ ಎಲ್ ವರದಿಯನ್ನು ಜನರ ಮುಂದಿಡುತ್ತಿಲ್ಲ. ಸರ್ಕಾರದ ನಡೆ ಗಮನಿಸಿದರೆ ಆರೋಪಿಗಳ ರಕ್ಷಣೆಗೆ ಮುಂದಾದಂತಿದೆ. ಈ ವಿಷಯದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಸಹಾಯಕರಾಗಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದರು.