ಸಂಪಾದಕೀಯ | ದೇಶದ್ರೋಹಿಗಳನ್ನು ಹಿಮ್ಮೆಟ್ಟಿಸಿ

ವಿಜಯವಾಣಿ (2)
Published on

ಕೆಲವೊಮ್ಮೆ ರಾಷ್ಟ್ರದ ಒಗ್ಗಟ್ಟು ಮತ್ತು ಸಾರ್ವಭೌಮತೆಯನ್ನು ಪರೀಕ್ಷಿಸುವ ಸಂಕಷ್ಟಕರ ಸಂದರ್ಭಗಳೇ ಕಠಿಣ ಸತ್ಯಗಳನ್ನು ಬಯಲಿಗೆ ಎಳೆಯುತ್ತವೆ. ಜಮ್ಮು-ಕಾಶ್ಮೀರದ ಪಹಲ್ಗಾಮ್ಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯು ದೇಶವನ್ನು ಗಾಢ ದುಃಖಕ್ಕೆ ದೂಡಿದೆ. ಈ ದಾಳಿಯಲ್ಲಿ ಇಬ್ಬರು ಕನ್ನಡಿಗರು ಮತ್ತು ಇಬ್ಬರು ವಿದೇಶಿಯರು ಸೇರಿದಂತೆ 26 ಜನರು ಬಲಿಯಾಗಿದ್ದು, ಈ ದುರಂತವು ಭಾರತೀಯರ ಹೃದಯವನ್ನು ಕಲಕಿದೆ. ಆದರೆ, ಈ ದುರಂತಕ್ಕಿಂತಲೂ ಆಘಾತಕಾರಿಯಾದ ಸಂಗತಿಯೆಂದರೆ, ಭಾರತದ ನೆಲದಲ್ಲಿ ಬದುಕು ಕಟ್ಟಿಕೊಂಡವರೇ ಈ ದಾಳಿಯನ್ನು ಖಂಡಿಸುವ ಬದಲು, ಪಾಕಿಸ್ತಾನದ ಪರವಾಗಿ ಮಾತನಾಡುತ್ತಿರುವುದು.

ಇಂಥ ದೇಶದ್ರೋಹಿಗಳ ಮುಖವಾಡವನ್ನು ಕಿತ್ತು, ಕಾನೂನಿನ ಕಠಿಣ ಕ್ರಮದ ಮೂಲಕ ಅವರನ್ನು ನಿಗ್ರಹಿಸುವುದು ಇಂದಿನ ಅನಿವಾರ್ಯ ಸವಾಲಾಗಿದೆ. ಪಹಲ್ಗಾಮ್ ಬೈಸಾರನ್ ವ್ಯಾಲಿಯಲ್ಲಿ ನಡೆದ ಈ ಭಯೋತ್ಪಾದಕ ದಾಳಿಯು ಪಾಕಿಸ್ತಾನದಿಂದ ಪ್ರಾಯೋಜಿತವಾಗಿತ್ತು ಎಂಬುದು ಸ್ಪಷ್ಟವಾಗಿದೆ. ಆದರೆ, ದೇಶದೊಳಗಿನ ಕೆಲವು ದುಷ್ಟಶಕ್ತಿಗಳು ಈ ದಾಳಿಯನ್ನು ಸಮರ್ಥಿಸಿಕೊಂಡಿರುವುದು ರಾಷ್ಟ್ರದ ಒಗ್ಗಟ್ಟಿಗೆ ಒಡ್ಡಿದ ಗಂಭೀರ ಬೆದರಿಕೆಯಾಗಿದೆ. ಅಸ್ಸಾಂನಲ್ಲಿ ಈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನವನ್ನು ಬೆಂಬಲಿಸಿದ ಓರ್ವ ಶಾಸಕ ಸೇರಿದಂತೆ 27 ಮಂದಿಯನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಭಾರತದ ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತದೆ, ಆದರೆ ರಾಷ್ಟ್ರದ ಸಾರ್ವಭೌಮತೆ ಮತ್ತು ಭದ್ರತೆಗೆ ಧಕ್ಕೆ ತರುವ ಯಾವುದೇ ಕೃತ್ಯವನ್ನು ಸಹಿಸಿಕೊಳ್ಳುವುದಿಲ್ಲ. ದೇಶದ್ರೋಹ ಕಾಯಿದೆಯಡಿ ರಾಷ್ಟ್ರದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳು ಅಥವಾ ಕೃತ್ಯಗಳು ಗಂಭೀರ ಅಪರಾಧವಾಗಿವೆ. ಆದರೆ, ಕೆಲವರು ಈ ಕಾನೂನಿನ ಗಂಭೀರತೆಯನ್ನು ಗಾಳಿಗೆ ತೂರಿದಂತೆ ವರ್ತಿಸುತ್ತಿದ್ದಾರೆ. ಪಾಕಿಸ್ತಾನದಂಥ ಶತ್ರುರಾಷ್ಟ್ರವನ್ನು ಸಮರ್ಥಿಸುವವರು, ಭಾರತದ ಒಳಗಿನಿಂದಲೇ ದೇಶವನ್ನು ದುರ್ಬಲಗೊಳಿಸುವ ಕೃತ್ಯದಲ್ಲಿ ತೊಡಗಿದ್ದಾರೆ. ಇಂಥವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿಯೂ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಅಸ್ಸಾಂ ಸಿಎಂ ನೀಡಿದ್ದಾರೆ, ಇದು ಸ್ವಾಗತಾರ್ಹ. ಇದೇ ರೀತಿ, ನಮ್ಮ ರಾಜ್ಯದ ಮಂಗಳೂರು ಮತ್ತು ಚಿತ್ರದುರ್ಗದಲ್ಲೂ ಇಂಥ ಪ್ರಕರಣಗಳು ವರದಿಯಾಗಿವೆ, ಇದು ಸಮಸ್ಯೆಯ ಆಳವನ್ನು ತೋರಿಸುತ್ತದೆ.

ಈಗಾಗಲೇ ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂಬ ವರದಿಗಳಿವೆ, ಆದರೆ ಇದು ಕೇವಲ ಆರಂಭವಷ್ಟೇ. ದೇಶದ್ರೋಹದ ಆರೋಪದಡಿ ತನಿಖೆಯನ್ನು ತ್ವರಿತಗೊಳಿಸಿ, ತಪ್ಪಿತಸ್ಥರಿಗೆ ಕಾನೂನಿನ ಪೂರ್ಣ ಪ್ರಮಾಣದ ಶಿಕ್ಷೆಯನ್ನು ಖಾತ್ರಿಪಡಿಸಬೇಕು. ಮತ್ತೊಂದೆಡೆ, ಗುಜರಾತ್​ನಲ್ಲಿ ಬಾಂಗ್ಲಾದೇಶ ನುಸುಳುಕೋರರ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡಿದೆ. ಮೂರು ಸಾವಿರ ಪೊಲೀಸರು ಈ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪಹಲ್ಗಾಮ್ ದಾಳಿಯಂಥ ಘಟನೆಗಳು ಭಾರತದ ಒಳಗಿನ ದೌರ್ಬಲ್ಯಗಳನ್ನು ಎತ್ತಿ ತೋರಿಸಿವೆ. ಒಂದೆಡೆ ಗಡಿಯಾಚೆಯಿಂದ ಭಯೋತ್ಪಾದಕ ದಾಳಿಗಳು ನಡೆಯುತ್ತಿರುವಾಗ, ಒಳಗಿನಿಂದಲೇ ಕೆಲವರು ದೇಶದ ವಿರುದ್ಧ ಕೆಲಸ ಮಾಡುವುದು ರಾಷ್ಟ್ರದ ಭದ್ರತೆಗೆ ಗಂಭೀರ ಸವಾಲನ್ನು ಒಡ್ಡುತ್ತದೆ. ಇಂಥ ಸಂದರ್ಭದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ, ದೇಶದ್ರೋಹಿಗಳನ್ನು ಗುರುತಿಸಿ, ಅವರಿಗೆ ಕಾನೂನಿನ ಕಠಿಣ ಶಿಕ್ಷೆಯನ್ನು ವಿಧಿಸುವುದು ಅಗತ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net