

ಶಿವಮೊಗ್ಗ: ನಾಡಹಬ್ಬ ದಸರಾ ಅಂತಿಮ ಹಂತ ತಲುಪಿದೆ. ಶಕ್ತಿ ದೇವತೆ ಆರಾಧನೆಯ ಪ್ರತೀಕವಾಗಿರುವ ದಸರಾದ ಪೂಜಾ ಕೈಂಕರ್ಯಗಳ ಬಳಿಕ ಈಗ ಉಳಿದಿರುವುದು ಹಬ್ಬದ ಪ್ರಮುಖ ಘಟ್ಟವಾಗಿರುವ ಆಯುಧ ಪೂಜೆ ಹಾಗೂ ವಿಜಯದಶಮಿ ಮಾತ್ರ. ನವರಾತ್ರಿಯಲ್ಲಿ ಈ ಎರಡು ಆಚರಣೆಗೆ ಎಲ್ಲಿಲ್ಲದ ಮಹತ್ವ. ಮಂಗಳವಾರ ಜಿಲ್ಲಾದ್ಯಂತ ಆಯುಧ ಪೂಜೆ ಹಾಗೂ ವಿಜಯದಶಮಿ ಆಚರಣೆಗೆ ನಾಗರಿಕರು ಸಂಭ್ರಮದಿಂದ ಸಿದ್ಧತೆಗಳನ್ನು ನಡೆಸಿದರು.
ವಾಹನ ಪೂಜೆ, ಕಾರ್ಖಾನೆಗಳ ಪೂಜೆಗೆ ಅಗತ್ಯವಾದ ವಸ್ತುಗಳ ಖರೀದಿಗೆ ಮುಗಿಬಿದ್ದರು. ಹಣ್ಣು - ಹೂವುಗಳು ದುಬಾರಿಯಾಗಿದ್ದರೂ ಹಬ್ಬದ ಆಚರಣೆಗೆ ಬೇಕಾದ ಸಿದ್ಧತೆ ನಡೆಸಿದರು. ನಗರದ ಪ್ರಮುಖ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ, ಲಕ್ಷ್ಮೀ ಟಾಕೀಸ್ ವೃತ್ತ ಹೀಗೆ ವಿವಿಧೆಡೆ ರಸ್ತೆ ಪಕ್ಕದಲ್ಲಿ ಹೂವು - ಹಣ್ಣು - ಬಾಳೆ ಕಂದು, ಕುಂಬಳಕಾಯಿ, ಮಾವಿನ ಟೊಂಗೆಗಳನ್ನು ಮಾರಾಟ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಬಾರಿ ಮಾರುಕಟ್ಟೆಯಲ್ಲಿ ಚೆಂಡು ಹೂವು ಅತಿ ಹೆಚ್ಚು ಲಭ್ಯವಿದೆ.
ಧಾರಣೆಯ ಹೆಚ್ಚಳದ ನಡುವೆಯೇ ನಾಗರಿಕರು ಖರೀದಿಯಲ್ಲಿ ತೊಡಗಿದ್ದರು. ಪ್ರಮುಖ ವಾಣಿಜ್ಯ ಕೇಂದ್ರ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವುದು ಸಂಚಾರಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.