ರೇಣುಕಸ್ವಾಮಿ ಹತ್ಯೆ ಪ್ರಕರಣ: ತಾಳೆಯಾಗದ ಆರೋಪ ಸಾಕ್ಷ್ಯ!, ದರ್ಶನ್ ಪರ ವಕೀಲರ ವಾದ

Darshan Bail Cancel ​
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಎಸ್​ಪಿಪಿ ಅವರು ಅತ್ಯುತ್ತಮ ಎಂದಿದ್ದಾರೆ. ಆದರೆ, ಇದೊಂದು ಕಳಪೆ ತನಿಖೆಯಾಗಿದ್ದು, ಸಾಕಷ್ಟು ಲೋಪಗಳಿವೆ. ತನಿಖಾಧಿಕಾರಿಗಳೇ ಹಲವು ಸಾಕ್ಷ್ಯ ಸೃಷ್ಟಿಸಿದ್ದಾರೆ. ಆರೋಪ ಪಟ್ಟಿಯಲ್ಲಿ ದಾಖಲಿಸಿರುವ ಮಾಹಿತಿಗೂ, ಸಾಕ್ಷಿಗಳು ನೀಡಿರುವ ಹೇಳಿಕೆಗೂ ಸಾಕಷ್ಟು ವ್ಯತ್ಯಾಸವಿದೆ. ರಸ್ತೆ ಬದಿ ಜಾದೂ ಮಾಡುವವರು ಖಾಲಿ ಡಬ್ಬ ತೋರಿಸಿ ಮೊಲ ಇದೆ ಎನ್ನುತ್ತಾರಲ್ಲ, ಪೊಲೀಸರ ತನಿಖೆ ಸಹ ಹಾಗೆಯೇ ಇದೆ.

ಇದು ನಗರದ 57ನೇ ಸಿಸಿಎಚ್ ಕೋರ್ಟ್​ನಲ್ಲಿ ಆರೋಪಿ, ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಸುದೀರ್ಘವಾಗಿ ಮಂಡಿಸಿದ ವಾದದ ಪ್ರಮುಖಾಂಶ. ಪ್ರಕರಣಕ್ಕೆ ಸಂಬಂಧಿ ಸಿದಂತೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ ಬೆನ್ನಲ್ಲೇ ದರ್ಶನ್ ಜಾಮೀನು ಕೋರಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್​ನ ನ್ಯಾಯಾ ಧೀಶ ಜೈಶಂಕರ್ ಶುಕ್ರವಾರ ಈ ಅರ್ಜಿಯ ವಿಚಾರಣೆ ನಡೆಸಿದರು.

ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿ, ದರ್ಶನ್ ವಿರುದ್ಧ ಎಫ್​ಐಆರ್ ದಾಖಲಾದಾಗಿನಿಂದಲೂ ಮಾಧ್ಯಮಗಳು ಟ್ರಯಲ್ ನಡೆಸಿ ದೋಷಿ ಎಂದು ತೀರ್ಪು ನೀಡಿವೆ. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್​ರನ್ನು ಅಪರಾಧಿ ಎಂಬಂತೆ ಬಿಂಬಿಸಲಾಗಿದೆ. ಪ್ರಕರಣದ ಸಾಕ್ಷಿ ಹೇಳಿಕೆಗಳು, ಪಂಚನಾಮೆ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ರೇಣುಕಸ್ವಾಮಿ ಮೈ ಮೇಲಿದ್ದ ಗಾಯಗಳಲ್ಲಿ ಕೆಲವು ನಾಯಿ ಕಚ್ಚಿದ್ದರಿಂದ ಆಗಿದ್ದವು, ಅವನ್ನೂ ದರ್ಶನ್ ಹಾಗೂ ಸಹಚರರ ಹಲ್ಲೆಯಿಂದ ಆಗಿವೆ ಎಂದು ತೋರಿಸಲಾಗಿದೆ. ಮಾಧ್ಯಮಗಳ ಟ್ರಯಲ್​ನಿಂದ ಜಾಮೀನು ನಿರ್ಧಾರವಾಗಲ್ಲ ಎಂದು ನಂಬಿದ್ದೇನೆ ಎಂದರು.

ಬೆಳಗ್ಗೆ ಸಿಗದಿದ್ದದ್ದು ರಾತ್ರಿ ಸಿಕ್ಕಿತಂತೆ

ದರ್ಶನ್ ವಿರುದ್ಧ ಸಾಂರ್ದಭಿಕ, ಪ್ರತ್ಯಕ್ಷ ಸಾಕ್ಷಿಗಳನ್ನು ಬಗ್ಗೆ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಆ ಎಲ್ಲ ಸಾಕ್ಷ್ಯಗಳು ಸೃಷ್ಟಿಸಿರುವ ಸಾಕ್ಷಿಗಳಾಗಿವೆ. 2024ರ ಜೂ.12ರಿಂದಲೇ ದಾಖಲೆ ಸೃಷ್ಟಿಸುವ ಕಾರ್ಯ ನಡೆದಿದೆ. ಆರೋಪಿ ಹೇಳಿಕೆ ಮೇಲೆ ಜೂ.12ರಂದು ಮರದ ಕೊಂಬೆ, ನೈಲಾನ್ ಹಗ್ಗ, ನೀರಿನ ಬಾಟಲಿ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ. ಆದರೆ, ಜೂ.9ರಂದೇ ಇವೆಲ್ಲ ವಸ್ತುಗಳು ಪೊಲೀಸರ ವಶದಲ್ಲಿದ್ದವು. ಈ ಸಂಗತಿಯನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಜೂ.12ರಂದು ಕತ್ತಲೆಯಲ್ಲಿ ಪಂಚನಾಮೆ ಮಾಡಿ ರಿಕವರಿ ಎಂದಿದ್ದಾರೆ. ಪೊಲೀಸರಿಗೆ ಬೆಳಗ್ಗೆ ಸಿಗದಿದ್ದದ್ದು ರಾತ್ರಿ ಪಂಚನಾಮೆ ವೇಳೆ ಸಿಕ್ಕಿತಂತೆ ಎಂದು ಟೀಕಿಸಿದರು.

ಜೂ.11ರಂದು ದರ್ಶನ್​ರ ಹೇಳಿಕೆ ದಾಖಲಿಸಲಾಗಿದೆ. ದರ್ಶನ್ ಹೇಳಿಕೆಯಲ್ಲಿ ರೇಣುಕಸ್ವಾಮಿ ಕೊಲೆ ಮಾಡಿದ ಸ್ಥಳ ತೋರಿಸುತ್ತೇನೆ ಎಂದಿದೆ. ಆದರೆ, ಅದೇ ದಿನ ಪೊಲೀಸರು ದರ್ಶನ್​ರನ್ನು ಸ್ಥಳಕ್ಕೆ ಕರೆದೊಯ್ದಿಲ್ಲ. ಜೂ.10ರಂದೇ ಪ್ರಕರಣದ ನಾಲ್ಕನೇ ಆರೋಪಿಯ ಸ್ವ-ಇಚ್ಛಾ ಹೇಳಿಕೆಯಲ್ಲಿ ಸ್ಥಳದ ವಿವರವಿದೆ. ಎಸ್​ಐ ವಿನಯ್ ಹೇಳಿಕೆಯಲ್ಲಿ ಜೂ.8ರಂದೇ ಮಾಹಿತಿ ಇತ್ತು ಎಂದಿದೆ. ಆರೋಪಿ ಪ್ರದೋಷ್ ಜೂ.8ರ ಮಧ್ಯರಾತ್ರಿಯೇ ಎಸ್​ಐ ವಿನಯ್ಗೆ ಕರೆ ಮಾಡಿ, ಮೂವರು ಹಣದ ವಿಷಯಕ್ಕೆ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ. ವಿನಯ್ ಈ ಸಂಗತಿಯನ್ನು ಇನ್​ಸ್ಪೆಕ್ಟರ್​ಗೆ ತಿಳಿಸಿದ್ದರು. ಪ್ರತ್ಯಕ್ಷದರ್ಶಿ ಹೇಳಿಕೆ ಪ್ರಕಾರವೇ ಜೂ.9ರಂದೇ ಪೊಲೀಸರು ಪಟ್ಟಣಗೆರೆ ಶೆಡ್​ಗೆ ಹೋಗಿದ್ದರು ಎಂದು ನಾಗೇಶ್ ವಾದ ಮಾಡಿದರು.

ಇದು ಸಾಕ್ಷ್ಯ ತಿರುಚುವಿಕೆ ಅಲ್ಲವೇ? : ಪ್ರಕರಣದ ಪ್ರತ್ಯಕ್ಷ ಸಾಕ್ಷಿ ಯಾದ ಶೆಡ್​ನ ಸೆಕ್ಯೂರಿಟಿ ಗಾರ್ಡ್ ಹಿಂದಿಯಲ್ಲಿ ನೀಡಿರುವ ಹೇಳಿಕೆಯನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಓದಿದ ನಾಗೇಶ್, ಜೂ.9ರಂದೇ ಪೊಲೀಸರು ಶೆಡ್​ಗೆ ಹೋಗಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಮುರಿದ ಲಾಠಿ, ಮರದ ಕೊಂಬೆ, ನೈಲಾನ್ ಹಗ್ಗ ಎಲ್ಲವನ್ನೂ ವಶಕ್ಕೆ ಪಡೆದಿದ್ದರು. ಜೂ.12ರಂದು ದರ್ಶನ್ ಹೇಳಿಕೆ ಆಧಾರದಲ್ಲಿ ವಶಕ್ಕೆ ಎಂದು ಹೇಳಿರುವುದೇಕೆ? ಇದು ಸಾಕ್ಷ್ಯ ತಿರುಚುವಿಕೆ ಅಲ್ಲವೇ? ವಸ್ತುಗಳನ್ನು ಜಪ್ತಿ ಮಾಡಿದ ನಂತರ ಪೊಲೀಸರು 3 ದಿನ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.

ತೊಳೆದ ಬಟ್ಟೆಯಲ್ಲಿ ರಕ್ತದ ಕಲೆ

ಪಂಚನಾಮೆಯಲ್ಲಿ ದರ್ಶನ್ ಚಪ್ಪಲಿ ಧರಿಸಿದ್ದರು ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. ಕೊನೆಗೆ ರಿಕವರಿ ಮಾಡಿರುವುದು ರಕ್ತದ ಕಲೆಯಿದೆ ಎನ್ನಲಾದ ಶೂ. ಆ ಶೂ ರಿಕವರಿ ಮಾಡಲು ಯಾವುದೇ ಸ್ವ-ಇಚ್ಛಾ ಹೇಳಿಕೆ ಇರಲಿಲ್ಲ. ಬಟ್ಟೆಯನ್ನು ರಿಕವರಿ ಮಾಡಲು ಹೋದಾಗ ಅವು ಇರಲಿಲ್ಲ. ಬಟ್ಟೆಗಳನ್ನು ಒಗೆದು ಒಣಗಲು ಹಾಕಿದ್ದಾರೆಂದು ಹೇಳಿದ ಬಳಿಕ ರಿಕವರಿ ಮಾಡಲಾಗಿದೆ. ಸರ್ಫ್ ಪೌಡರ್ ಹಾಕಿ ತೊಳೆದು ಒಣಗಲು ಹಾಕಿದ ಬಟ್ಟೆಗಳಲ್ಲಿ ರಕ್ತದ ಕಲೆ ಇರಲು ಸಾಧ್ಯವೇ? ಆದರೆ, ರಕ್ತದ ಕಲೆ ಇತ್ತೆಂದು ಪೊಲೀಸರು ಹೇಳಿದ್ದಾರೆ ಎಂದು ಸಿ.ವಿ.ನಾಗೇಶ್ ವಾದ ಮಂಡಿಸಿದರು.

ಶೂ ಬಗ್ಗೆ ಪೊಲೀಸರಿಗೆ ಸ್ಪಷ್ಟತೆ ಇಲ್ಲ

ಸಾಕಷ್ಟು ತಡವಾಗಿ ಜೂ.14ರಂದು ಬಟ್ಟೆ, ಶೂ ವಶಕ್ಕೆ ಪಡೆಯಲಾಗಿದೆ. ಮೊದಲಿಗೆ ದರ್ಶನ್ ಬಿಟ್ಟ ಸ್ಥಳದಲ್ಲಿ ಶೂ ಇರಲಿಲ್ಲ. ಪತ್ನಿಯ ಮನೆಯಲ್ಲಿ ಇರಬಹುದೆಂದು ಹೇಳಿದ ಬಳಿಕ ಪೊಲೀಸರು ಅಲ್ಲಿಗೆ ತೆರಳಿದರು. ನಂತರ ಪತ್ನಿ ಹಲವು ಶೂಗಳನ್ನು ತಂದುಕೊಟ್ಟರು. ಅದರಲ್ಲಿ ಒಂದು ಶೂ ರಿಕವರಿ ಮಾಡಿದ್ದಾರೆ. ಶೂ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ಇದಕ್ಕೆ ಮಾನ್ಯತೆ ಇಲ್ಲ. 37 ಲಕ್ಷ ರೂ. ಹಣದ ಬಗ್ಗೆ ಆರೋಪಪಟ್ಟಿಯಲ್ಲಿ ಉಲ್ಲೇಖವಿದೆ. ಮೇ 2ರಂದೇ ಹಣವನ್ನು ದರ್ಶನ್​ಗೆ ನೀಡಲಾಗಿದೆ. ಆ ಹಣವನ್ನು ಮುಂದೆ ಸಾಕ್ಷಿಗಳಿಗೆ ನೀಡಲು ಇಟ್ಟಿದ್ದರೆಂದು ಹೇಳಲಾಗಿದೆ. ಮೇ 2ರಂದೇ ಬಂದ ಹಣವನ್ನು ಕೊಲೆಗೆಂದು ಇಡಲು ಸಾಧ್ಯವೇ ಎಂದು ಸಿ.ವಿ.ನಾಗೇಶ್ ಪ್ರಶ್ನೆ ಮಾಡಿದರು. ನಾಗೇಶ್​ರ ಸುದೀರ್ಘ ವಾದ ಆಲಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಶನಿವಾರ (ಅ.5)ಮಧ್ಯಾಹ್ನಕ್ಕೆ ಮುಂದೂಡಿದರು. ಪ್ರಕರಣದ ಮೊದಲ ಆರೋಪಿ ಪವಿತ್ರಾಗೌಡರ ಜಾಮೀನು ಅರ್ಜಿ ವಿಚಾರಣೆ ಸಹ ಶನಿವಾರಕ್ಕೆ ಮುಂದೂಡಿಕೆಯಾಗಿದೆ.

ಮೆಡಿಕಲ್ ವರದಿ ಬಳಿಕ ಚಿಕಿತ್ಸೆ

ಬಳ್ಳಾರಿ: ಕೊಲೆ ಆರೋಪಿ ನಟ ದರ್ಶನ್​ಗೆ ಬೆನ್ನಿನಲ್ಲಿ ಊತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರು ತಪಾಸಣೆ ನಡೆಸಿದ್ದು, ವರದಿ ಬಂದ ಬಳಿಕ ಸರ್ಜರಿ ಮಾಡುವುದರ ಬಗ್ಗೆ ನಿರ್ಧರಿಸಲಾಗುವುದು ಎಂದು ಜೈಲಿನ ಅಧಿಕಾರಿಗಳು ತಿಳಿಸಿದರು. ದರ್ಶನ್ ಇಲ್ಲಿನ ಜೈಲಿಗೆ ಸ್ಥಳಾಂತರಗೊಂಡ ದಿನದಿಂದ ಬೆನ್ನು ನೋವಿನ ಸಮಸ್ಯೆಯಿದ್ದು, ಸರ್ಜಿಕಲ್ ಚೇರ್ ನೀಡುವಂತೆ ಮನವಿ ಮಾಡಿದ್ದರು. ಬಳಿಕ ವೈದ್ಯರ ಸಲಹೆ ಮೇರೆಗೆ ಚೇರ್ ನೀಡಲಾಗಿತ್ತು. ಸದ್ಯ ದರ್ಶನ್​ಗೆ ಬೆನ್ನಿನ ಊತದ ಬಗ್ಗೆ ಬಿಮ್್ಸ ವೈದ್ಯರು ತಪಾಸಣೆ ನಡೆಸಿದ್ದು, ಇನ್ನೂ ವರದಿ ಬಂದಿಲ್ಲ. ಬಂದ ಬಳಿಕ ಜೈಲಿನ ನಿಯಮದಂತೆ ಅವರು ಒಪ್ಪಿದರೆ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುವುದು. ಸದ್ಯ ಅವರಿಗೆ ನೋವು ನಿವಾರಕ ಔಷಧಗಳನ್ನು ನೀಡಲಾಗಿದೆ ಎಂದು ಜೈಲು ಅಧೀಕ್ಷಕಿ ಲತಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net