

ಬೆಂಗಳೂರು: ಅಭಿಮಾನಿಗಳ ಚಕ್ರವರ್ತಿ, ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಖ್ಯಾತಿ ಪಡೆದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಮ್ಮ ಸಹಚರರೊಂದಿಗೆ ಬಂಧಿಸಲ್ಪಟ್ಟಿದ್ದಾರೆ. ದಿನ ಕಳೆದಂತೆ ಪ್ರಕರಣ ತಿರುವು ಪಡೆದುಕೊಳ್ಳುತ್ತಿದ್ದು, ವಿಚಾರಣೆ ತೀವ್ರಗೊಂಡಂತೆ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಚಾರ ಹೊರಬಿದ್ದಿದ್ದು, ತೀವ್ರ ಕೆಂಗಣ್ಣಿಗೆ ಗುರಿಯಾಗಿದೆ.
ಚಿತ್ರದುರ್ಗದ ನಿವಾಸಿಯಾದ ರೇಣುಕಾಸ್ವಾಮಿ ಅವರನ್ನು ಆರೋಪಿಗಳಾದ ರಘು ಮತ್ತು ಟೀಮ್ ದರ್ಶನ್ರನ್ನು ಭೇಟಿ ಮಾಡಿಸುವುದಾಗಿ ಹೇಳಿ ಬೆಂಗಳೂರಿಗೆ ಕರೆ ತಂದಿದ್ದರಂತೆ. ನೆಚ್ಚಿನ ನಟನನ್ನು ನೋಡುವ ಆಸೆಯಲ್ಲಿ ಆರೋಪಿಗಳು ಹೇಳಿದ ಮಾತಿಗೆ ತಲೆ ಆಡಿಸಿದ ರೇಣುಕಾಸ್ವಾಮಿ ಮನೆಯವರ ಗಮನಕ್ಕೆ ತರದೆ ಆರೋಪಿಗಳ ಜೊತೆ ಬಾಡಿಗೆ ಕಾರಿನಲ್ಲಿ ಬೆಂಗಳೂರಿಗೆ ಬಂದಿದ್ದರಂತೆ.
ಮಾರ್ಗಮಧ್ಯ ತುಮಕೂರಿನ ಆರೋಪಿಗಳು ಹೋಟೆಲ್ ಒಂದರಲ್ಲಿ ಉಪಾಹಾರವನ್ನು ಸೇವಿಸಿದ್ದು, ಅದರ ಬಿಲ್ಅನ್ನು ಸಹ ರೇಣುಕಾಸ್ವಾಮಿ ಪಾವತಿಸಿದ್ದರು ಎಂದು ತಿಳಿದು ಬಂದಿದೆ. ದುರಂತ ಏನೆಂದರೆ, ದರ್ಶನ್ರನ್ನು ನೋಡುವ ಆಸೆಯಿಂದ ಕಿಡ್ನ್ಯಾಪರ್ಗಳ ಕಾರು ಹತ್ತಿದ್ದ ರೇಣುಕಾ ಸ್ವಾಮಿ. ಆದರೆ ಬೆಂಗಳೂರಿಗೆ ಬಂದಾಗ ಆಗಿದ್ದು ಮಾತ್ರ ಘನಘೋರ ದುರಂತ.
ಚಿತ್ರದುರ್ಗದಲ್ಲಿ ಆರೋಪಿಗಳಾದ ರಾಘವೇಂದ್ರ, ಜಗದೀಶ್, ಅನು, ರಾಜು, ರವಿ ಎಲ್ಲರೂ ಸೇರಿ ಚಿತ್ರದುರ್ಗದ ಚಳ್ಳಕೆರೆ ಬಳಿ ಇರುವ ಬಾಲಾಜಿ ಬಾರ್ ಮುಂಭಾಗದಲ್ಲಿ ರೇಣುಕಾಸ್ವಾಮಿ ಅವರನ್ನು ಮಾತನಾಡಿಸಿ ದರ್ಶನ್ರನ್ನು ಭೇಟಿ ಮಾಡಿಸುವುದಾಗಿ ಹೇಳಿ ಬಳಿಕ ಆಟೋ ಒಂದರಲ್ಲಿ ನಗರದ ಹೊರವಲಯಕ್ಕೆ ಕರೆತಂದಿದ್ದಾರೆ. ಬಾಡಿಗೆಗೆ ಎಂದು ಹೇಳಿ ಕಾರು ಚಾಲಕ ರವಿಯನ್ನು ಕರೆಸಿಕೊಂಡಿದ್ದರು. ಬಳಿಕ ರೇಣುಕಾಸ್ವಾಮಿಯನ್ನು ಆಟೋದಿಂದ ಕಾರಿಗೆ ಶಿಫ್ಟ್ ಮಾಡಲಾಯಿತು.
ದರ್ಶನ್ ಭೇಟಿ ಮಾಡಿಸುತ್ತೇನೆಂದು ರೇಣುಕಾಸ್ವಾಮಿಗೆ ರಘು ನಂಬಿಸಿದ್ದ. ದರ್ಶನ್ರನ್ನು ಭೇಟಿ ಮಾಡುವ ಆಸೆಯಿಂದ ರೇಣುಕಾ ಸ್ವಾಮಿ ಹೋಗಿದ್ದ. ಆದರೆ ಕೊನೆಗೆ ಶವಾಗಿ ಪತ್ತೆಯಾಗಿದ್ದು ಮಾತ್ರ ದುರಂತ. ಹೈಪ್ರೊಫೈಲ್ ಕೇಸ್ ಆದ್ದರಿಂದ ತನಿಖೆ ಚುರುಕುಗೊಂಡಿದೆ. ತನಿಖೆಯ ಪ್ರತಿ ಹಂತದಲ್ಲೂ ಹೊಸ ಹೊಸ ಶಾಕಿಂಗ್ ವಿವಚಾರಗಳು ಹೊರಬರುತ್ತಿವೆ.