

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ 19ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ. ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದು, ಪ್ರಕರಣದ ಆಳ ಕೆದಕಿದಷ್ಟು ಹೊಸ ವಿಚಾರಗಳು ಹೊರಬರುತ್ತಿವೆ. ಘಟನೆಗೆ ಸಂಬಂಧಿಸಿದಂತೆ ಹತ್ಯೆಯಾದ ರೇಣುಕಸ್ವಾಮಿ ಮೊಬೈಲ್ ಪತ್ತೆಯಾಗದಿರುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ರೇಣುಕಸ್ವಾಮಿ ಹತ್ಯೆ ನಡೆದು 10 ದಿನಗಳಾಗುತ್ತ ಬಂದರೂ ಈವರೆಗೂ ಸಂತ್ರಸ್ತನ ಫೋನ್ ಪತ್ತೆಯಾಗಿಲ್ಲ. ಜೂನ್ 08ರಂದು ಪಟ್ಟಣಗೆರೆ ಶೆಡ್ನಲ್ಲಿ ಚಿತ್ರದುರ್ಗ ಮೂಲಕ ರೇಣುಕಸ್ವಾಮಿಯನ್ನು ಹತ್ಯೆ ಮಾಡಲಾಗಿತ್ತು. ಜೂನ್ 08ರಂದು ಆರೋಪಿಗಳು ರೇಣುಕಸ್ವಾಮಿರನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆ ತರುವ ವೇಳೆ ಮೊಬೈಲ್ ಸ್ವಿಚ್ ಆಫ್ ಮಾಡಲಾಗಿತ್ತು. ಬಳಿಕ ಪಟ್ಟಣಗೆರೆ ಶೆಡ್ನಲ್ಲಿ ಮೊಬೈಲ್ ಆನ್ ಮಾಡಲಾಗಿತ್ತು. ಬಳಿಕ ಆಫ್ ಮಾಡಲಾಗಿದೆ.
ಹತ್ಯೆಯ ಬಳಿಕ ಸಂತ್ರಸ್ತನ ಮೃತದೇಹವನ್ನು ಸುಮನಹಳ್ಳಿ ಬಳಿ ಇರುವ ರಾಜಕಾಲುವೆಗೆ ಎಸೆಯಲಾಗಿತ್ತು. ಮೃತದೇಹ ಸಿಕ್ಕ ಬಳಿಕ ತನಿಖೆ ಆರಂಭಿಸಿದ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಬಂಧಿತ ಆರೋಪಿಗಳು ರೇಣುಕಸ್ವಾಮಿ ಮೊಬೈಲ್ಅನ್ನು ರಾಜಕಾಲುವೆಗೆ ಎಸೆದಿದ್ಧಾಗಿ ವಿಚಾರಣೆ ವೇಳೆ ಹೇಳಿದ್ದು, ಅದನ್ನು ಹುಡುಕುತ್ತಾ ಹೊರಟ ಪೊಲೀಸರಿಗೆ ಈವರೆಗೆ ರೇಣುಕಸ್ವಾಮಿ ಮೊಬೈಲ್ ಪತ್ತೆಯಾಗಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಸ್ವಾಮಿ ಮೊಬೈಲ್ ಪ್ರಮುಖ ಸಾಕ್ಷ್ಯಾಧಾರವಾಗಿದ್ದು, ಕಮೆಂಟ್ ಹಾಗೂ ಮೆಸ್ಸೇಜ್ ಸಂಬಂಧ ಆತನ ಮೊಬೈಲ್ನಲ್ಲೇ ಕ್ಷಮೆ ಕೋರುತ್ತಿರುವ ವಿಡಿಯೋ ಒಂದನ್ನು ಮಾಡಿಸಿದ್ದರು ಎಂದು ತಿಳಿದು ಬಂದಿದೆ. ಘಟನೆ ನಡೆದು 10 ದಿನಗಳಾಗುತ್ತ ಬಂದರೂ ಈವರೆಗೆ ಮೊಬೈಲ್ ಪತ್ತೆಯಾಗದಿರುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.