

ಬೆಂಗಳೂರು: ಚಿತ್ರದುರ್ಗದ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ನೀಡಿರುವ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಬೆಂಗಳೂರು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಮಧ್ಯಂತರ ಜಾಮೀನು ತೆರವು ಕೋರಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಈಗಾಗಲೇ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಕನ್ನಡದಲ್ಲಿರುವ ಪ್ರಕರಣದ ಚಾರ್ಜ್‌ಶೀಟ್ ಅನ್ನು ಪೊಲೀಸರು ಇಂಗ್ಲಿಷ್‌ಗೆ ತರ್ಜುಮೆಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳವಾರ ಹೈಕೋರ್ಟ್‌ನಲ್ಲಿ ಎಸ್‌ಎಲ್‌ಪಿ (ಸ್ಪೆಷಲ್ ಲೀವ್ ಪಿಟಿಷನ್) ಇತ್ಯರ್ಥವಾಗುವ ನಿರೀಕ್ಷೆಯಿದೆ. ಆ ಬಳಿಕ ದರ್ಶನ್‌ಗೆ ದೊರೆತಿರುವ ಮಧ್ಯಂತರ ಜಾಮೀನು ಪ್ರಶ್ನಿಸಿ ಬುಧವಾರ ಅಥವಾ ಗುರುವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ತಯಾರಿ ಮಾಡಿಕೊಳ್ಳಲಾಗಿದೆ.
ಮಧ್ಯಂತರ ಜಾಮೀನು ತೆರವಿಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರದಿಂದ ಅನುಮತಿ ದೊರೆತಿದ್ದು, ಸದ್ಯದಲ್ಲೇ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಇತ್ತೀಚೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದರು.
ದರ್ಶನ್ ಜಾಮೀನು ಅರ್ಜಿಯನ್ನು ೫೭ನೇ ಸಿಸಿಎಚ್ ನ್ಯಾಯಾಲಯ ವಜಾಗೊಳಿಸಿತ್ತು. ಆ ಬಳಿಕ ಅವರು ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅ.೩೦ರಂದು ಹೈಕೋರ್ಟ್ ಆರೋಗ್ಯ ತಪಾಸಣೆಗಾಗಿ ಆರು ವಾರಗಳ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ದರ್ಶನ್ ಜೈಲಿನಿಂದ ಬಿಡುಗಡೆಯಾಗಿ ಒಟ್ಟು ೧೯ ದಿನ ಕಳೆದಿದೆ. ೨ ದಿನ ಕುಟುಂಬದೊಂದಿಗೆ ಇದ್ದ ದರ್ಶನ್ ೧೭ ದಿನಗಳಿಂದ ಆಸ್ಪತ್ರೆಯಲ್ಲಿದ್ದಾರೆ.
ಚಿಂತೆಯಲ್ಲಿರುವ ದರ್ಶನ್:
ಒಂದು ಕಡೆ ಮೇಲ್ಮನವಿಯ ಚಿಂತೆ ಮತ್ತೊಂದೆಡೆ ಸರ್ಜರಿಯ ಮಾಡಿಸಿಕೊಳ್ಳಬೇಕಾದ ಚಿಂತೆಯಲ್ಲಿ ದರ್ಶನ್ ಇದ್ದಾರೆ. ಸರ್ಜರಿ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ವೈದ್ಯರು ಇನ್ನೆರಡು ದಿನಗಳೊಳಗೆ ಸರ್ಜರಿ ಮಾಡುವ ಸಾಧ್ಯತೆ ಇದೆ.