ಉಪಾಹಾರ ಕೂಟ ನಡೆಸಿದ ರೇಣುಕಾಚಾರ್ಯಗೆ ಸಿಎಂ ಬಿಎಸ್​ವೈ ಬುಲಾವ್

renukacharya
Published on

ಬೆಂಗಳೂರು: ಸರ್ಕಾರ ಮತ್ತು ಸಂಘಟನೆ ಒಟ್ಟಿಗೆ ಹೆಜ್ಹೆಯಿಡಬೇಕು ಎಂಬ ವರಿಷ್ಠರ ಸೂಚನೆ ಇರುವಾಗ, ಗೊಂದಲ ಬಗೆಹರಿಸಲು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಂದಿರುವ ಸಂದರ್ಭದಲ್ಲಿ, ಕೆಲವು ಶಾಸಕರ ಜತೆಗೂಡಿ ತಮ್ಮ ನಿವಾಸದಲ್ಲಿ ಉಪಾಹಾರ ಕೂಟ ನಡೆಸಿದ ಎಂ.ಪಿ.ರೇಣುಕಾಚಾರ್ಯರಿಗೆ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುರ್ತು ಬುಲಾವ್ ನೀಡಿದ್ದಾರೆ.

ಬಿಎಸ್​​ವೈ ಬೆಂಬಲಿಗರು ಎಂದು ಗುರುತಿಸಿಕೊಂಡಿರುವ 12 ಶಾಸಕರು ರೇಣುಕಾಚಾರ್ಯ ನಿವಾಸದಲ್ಲಿದ್ದು, ಬಿಎಸ್ ವೈ ಕರೆಯ ಮೇರೆಗೆ ಎಲ್ಲರೂ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಧಾವಿಸಿದರು. ಪ್ರತ್ಯೇಕವಾಗಿ ಸೇರುವುದರಿಂದ ಸರ್ಕಾರ, ಪಕ್ಷದ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಿದಂತಾಗುತ್ತದೆ. ವರಿಷ್ಠರು ನೀಡಿದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಏನಾದರೂ ಹೇಳುವುದಿದ್ದರೆ ನೇರವಾಗಿ ಅರುಣ್ ಸಿಂಗ್ ಅವರ ಬಳಿಗೆ ತೆರಳಿ ಹೇಳಿಕೊಳ್ಳಬೇಕು. ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಬಾರದು ಎಂದು ಸಿಎಂ ಬಿಎಸ್ ವೈ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

ಕರೊನಾ ಸಂಕಷ್ಟದಲ್ಲಿ ಅಸಹ್ಯ : ಈ ಮಧ್ಯೆ ರೇಣುಕಾಚಾರ್ಯ ಸುದ್ದಿಗಾರರ ಜೊತೆಗೆ ಮಾತನಾಡಿ, "ಸಿಎಂ ಯಡಿಯೂರಪ್ಪ ನಮ್ಮ ನಾಯಕರು‌. ಕರೊನಾ ಸಂಕಷ್ಟ ಸಂದರ್ಭದಲ್ಲಿ ಭಿನ್ನಮತೀಯ ಚಟುವಟಿಕೆ ನಡೆಸುತ್ತಿರುವುದು ಅಸಹ್ಯ. ಕೆಲವರು ಸೂಟು-ಬೂಟು ಹೊಲಿಸುಕೊಂಡು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಇನ್ನೂ ಕೆಲವರು ಖಾಸಗಿ ಕೆಲಸವೆಂದು ಹೇಳಿ ದೆಹಲಿಗೆ ಹೋಗಿ ನಾಯಕರನ್ನು ಭೇಟಿ ಮಾಡುತ್ತಾರೆ. ಇವೆಲ್ಲ ಅನಗತ್ಯ ಗೊಂದಲ ಸೃಷ್ಟಿಸಲಿದ್ದು, ತಕ್ಷಣವೇ ಬಗೆಹರಿಯಬೇಕಾಗಿದೆ" ಎಂದರು.

ಪಕ್ಷದ ಸೂಚನೆ ಪ್ರಕಾರ ಗುಂಪು ಕಟ್ಟಿಕೊಂಡು ಅರುಣ್ ಸಿಂಗ್ ಬಳಿ ಹೋಗುವುದಿಲ್ಲ. ಭೇಟಿ ಮಾಡಿ ಪಕ್ಷ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ಬಿಎಸ್​​ವೈ ಅವರನ್ನು ಮುಂದುವರಿಸಬೇಕು ಎಂಬ ಅಭಿಪ್ರಾಯ ನೀಡಲಾಗುವುದು. ಕೆಲವರಿಗೆ ಯಾವ ನೈತಿಕತೆ ಇದೆಯೆಂದು ಸಿಎಂ ಬದಲಾಗಬೇಕೆಂದು ವರಿಷ್ಠರಿಗೆ ಒತ್ತಾಯಿಸುತ್ತಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಸಮಸ್ಯೆ ಬಗೆಹರಿಯಬೇಕು. ಕರೊನಾ ಕೆಲಸದ ಜೊತೆಗೆ ಕ್ಷೇತ್ರದ ಜವಾಬ್ದಾರಿಯತ್ತ ಎಲ್ಲರೂ ಗಮನಹರಿಸಿ, ಮುಂಬರುವ ಚುನಾವಣೆಗಳಿಗೆ ಪಕ್ಷ ಸಿದ್ಧವಾಗಬೇಕಾಗಿದೆ ಎಂದು ರೇಣುಕಾಚಾರ್ಯ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net