

ನವದೆಹಲಿ : ಕರೊನಾ ಎರಡನೇ ಅಲೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ 2 ಲಕ್ಷ ಕೋಟಿ ರೂ.ಗಳ ನಷ್ಟವನ್ನುಂಟು ಮಾಡಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ಬಿಐ) ಹೇಳಿದೆ. ಜೂನ್ 2021 ರ ತನ್ನ ಮಾಸಿಕ ಬುಲೆಟಿನ್ನಲ್ಲಿ, ಭಾರತದಲ್ಲಿ ನಿರ್ದಿಷ್ಟವಾಗಿ ದೇಶೀಯ ಬೇಡಿಕೆಗೆ ಭಾರೀ ಪೆಟ್ಟು ಬಿದ್ದಿದೆ ಎಂದು ಆರ್ಬಿಐ ಹೇಳಿದೆ.
ಕರೊನಾ ವೈರಸ್ ಮತ್ತು ತತ್ಸಂಬಂಧಿ ನಿರ್ಬಂಧಗಳು ಸಣ್ಣ ನಗರಗಳಿಗೆ ಮತ್ತು ಗ್ರಾಮಗಳಿಗೆ ವಿಸ್ತಾರಗೊಂಡ ಪರಿಣಾಮವಾಗಿ ಗ್ರಾಮೀಣ ಬೇಡಿಕೆ ಕಡಿತಗೊಂಡಿದೆ. ಎಚ್ಚರಿಕೆಯ ಆಶಾವಾದವು ಮರಳುತ್ತಿದ್ದರೂ ಸಹ, ಭಾರತದ ಆರ್ಥಿಕತೆಯು ಸಾಂಕ್ರಾಮಿಕದ ಎರಡನೇ ಅಲೆಯೊಂದಿಗೆ ಸೆಣಸಾಟವನ್ನು ಮುಂದುವರಿಸಿದೆ ಎಂದು ಆರ್ಬಿಐ ಹೇಳಿದೆ.
ದೇಶೀಯ ಬೇಡಿಕೆಗೆ ಏಟು ಬಿದ್ದಿದ್ದರೂ, ಒಟ್ಟಾರೆ ಪೂರೈಕೆಯ ಪರಿಸ್ಥಿತಿಯು ಸಮಾಧಾನಕರವಾಗಿದೆ. ಕೃಷಿ ಮತ್ತು ಸಂಪರ್ಕವಿಲ್ಲದ ಸೇವೆಗಳಂಥ ಹಲವಾರು ಅಂಶಗಳು ಮಾರುಕಟ್ಟೆ ಸ್ಥಿತಿಯನ್ನು ಹಿಡಿದಿಟ್ಟುಕೊಂಡಿವೆ. ಕೋವಿಡ್ ಪ್ರೋಟೋಕಾಲ್ಗಳ ಮಧ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ, ಕೈಗಾರಿಕಾ ಉತ್ಪಾದನೆ ಮತ್ತು ರಫ್ತು ಹೆಚ್ಚಾಗಿದೆ ಎಂದು ಆರ್ಬಿಐ ಹೇಳಿದೆ.
2019ರ ಎರಡನೇ ಕ್ವಾರ್ಟರ್ನಿಂದ ಸಾವರಿನ್ ಯೀಲ್ಡ್ ಕರ್ವ್ ಇಳಿಮುಖವಾಗಿದೆ. ಅಭಿವೃದ್ಧಿಗೆ ಅಗತ್ಯವಾದ ಫಿಸ್ಕಲ್ ಸ್ಟಿಮುಲಸ್ಅನ್ನು ಎಷ್ಷು ಅನ್ನುವುದಕ್ಕಿಂತ ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗಿದೆ ಎಂದಿರುವ ಆರ್ಬಿಐ, "ಲಸಿಕಾಕರಣದ ವೇಗ ಮತ್ತು ಪ್ರಮಾಣವು ಆರ್ಥಿಕ ವ್ಯವಸ್ಥೆ ಚೇತರಿಸಿಕೊಳ್ಳಲು ನಿರ್ಣಾಯಕವಾಗುವುದು. ಕರೊನಾ ಸಂಕಷ್ಟದಿಂದ ಹೊರಕ್ಕೆ ಚಿಮ್ಮಿ ಮತ್ತೆ ಅಭಿವೃದ್ಧಿ ಪಥದತ್ತ ನಡೆಯುವ ಉತ್ಸಾಹವನ್ನು ಆರ್ಥಿಕ ವ್ಯವಸ್ಥೆ ತೋರುತ್ತಿದೆ" ಎಂದಿದೆ. (ಏಜೆನ್ಸೀಸ್)