ಹನುಮಾನ್​ ಗಡಿಗೆ ನವಸ್ಪರ್ಶ

Hanuman border
Published on

| ರಾಘವ ಶರ್ಮ ನಿಡ್ಲೆ, ಅಯೋಧ್ಯೆ

ಅಯೋಧ್ಯೆಯ ರಾಮಜನ್ಮಭೂಮಿ ಜಮೀನು ವಿವಾದಕ್ಕೆ ಸಂಬಂಧಿಸಿ ಯಥಾಸ್ಥಿತಿ ಕಾಯುವ ಅನಿವಾರ್ಯತೆ ಇದ್ದುದರಿಂದ ಹನುಮಾನ್​ಗಡಿ ದೇಗುಲ ಪರಿಸರವೂ ನಿರ್ಲಕ್ಷ್ಯಕ್ಕೊಳಗಾಗಿತ್ತು. ಆದರೆ, ಮಂದಿರ ನಿರ್ವಣಕ್ಕೆ ಶ್ರೀರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಮುಂದಾಗುತ್ತಿದ್ದಂತೆ ಹನುಮಾನ್​ಗಡಿ ಸುತ್ತಮುತ್ತಲಿನ ಸ್ಥಳಗಳೂ ಅಭಿವೃದ್ಧಿಗೆ ತೆರೆದುಕೊಳ್ಳುತ್ತಿವೆ.

ಹಿಂದೆ ಹನುಮಾನ್​ಗಡಿ ರಸ್ತೆ ಅಂಗಡಿಮುಂಗಟ್ಟು, ವಾಹನಗಳಿಂದ ತುಂಬಿ ಹೋಗಿತ್ತು. ಸರ್ಕಾರ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದಲ್ಲದೆ, ಎಲ್ಲ ಅಂಗಡಿಗಳನ್ನೂ ಏಕರೂಪದಲ್ಲಿ ವಿನ್ಯಾಸಗೊಳಿಸಿದೆ. ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಅದೇ ನಗರದ ಇತರ ದೇಗುಲಗಳಿಗೂ ಅಭಿವೃದ್ಧಿಭಾಗ್ಯ ಸಿಕ್ಕಿದೆ. ರಾಮ ಹುಟ್ಟಿದ ಊರಿಗೆ ಎಂಥ ಸ್ಥಿತಿ ಬಂದಿದೆ ಎಂದು ಕಣ್ಣೀರು ಸುರಿಸುತ್ತಿದ್ದ ಭಕ್ತರು ನವಅಯೋಧ್ಯೆಯನ್ನು ಕಂಡರೆ ಹಷೋಲ್ಲಾಸಗೊಳ್ಳುವಷ್ಟು ಸುಧಾರಣೆಯಾಗುತ್ತಿದೆ. ಹನುಮಾನ್​ಗಡಿ ಎದುರು ಭಾಗದಲ್ಲೇ ಕಳೆದ 40 ವರ್ಷಗಳಿಂದ ಹೂವು ಮಾರುತ್ತಿರುವ ಧಮೇಂದ್ರ ಸೈನಿ, ‘500 ವರ್ಷಗಳಿಂದ ರಾಮ ಕಾಡಿನಲ್ಲಿದ್ದ. ಈಗ ಮಂದಿರ ಸೇರುತ್ತಿದ್ದಾನೆ. ಇದಕ್ಕಿಂತ ಖುಷಿ ವಿಚಾರ ಮತ್ತೇನಿದೆ’ ಎಂದರು. ‘ರಾಮಮಂದಿರಕ್ಕೆ ಬರುವ ಭಕ್ತರೆಲ್ಲರೂ ಹನುಮಾನ್​ಗಡಿಗೂ ಬರುತ್ತಾರೆ. ಯಾತ್ರಿಕರ ಸಂಖ್ಯೆ ಹೆಚ್ಚಿರುವುದರಿಂದ ದಿನಕ್ಕೆ ರೂ. 300-500ರಷ್ಟಿದ್ದ ನಮ್ಮ ಸಂಪಾದನೆ ರೂ. 1500-2000ಕ್ಕೇರಿದೆ. ಅಭಿವೃದ್ಧಿ ಕಾರ್ಯಗಳಿಂದ ಅಯೋಧ್ಯೆ ನಳನಳಿಸುತ್ತಿದೆ’ ಎಂದು ಸಂತಸ ಹಂಚಿಕೊಂಡರು.

ಟೆಂಟ್​ಹೌಸ್ ವಿಶೇಷತೆ: ಅಯೋಧ್ಯೆಯ ವಿವಿಧೆಡೆ ಆಹ್ವಾನಿತರ ವಾಸ್ತವ್ಯಕ್ಕೆ ಆಧುನಿಕ ಸ್ಪರ್ಶವುಳ್ಳ ಟೆಂಟ್​ಹೌಸ್​ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅಯೋಧ್ಯಾಧಾಮ್ ರೈಲ್ವೆ ನಿಲ್ದಾಣದ ಹಿಂಭಾಗದ ತೀರ್ಥಕ್ಷೇತ್ರಪುರಂನಲ್ಲಿ 15 ಸಾವಿರ ಜನ ಸಾಮರ್ಥ್ಯದ ಬೃಹತ್ ಟೆಂಟ್​ಹೌಸ್ ನಿರ್ಮಾಣ ವಾಗುತ್ತಿದೆ. ಇಲ್ಲಿ ಯಾಗ-ಯಜ್ಞಾದಿಗಳೂ ನಡೆಯಲಿದ್ದು, ರಾಮಕಥಾ ಸಂಕೀರ್ತನೆಗಳನ್ನೂ ಏರ್ಪಡಿಸಲಾಗಿದೆ. 47 ಎಕರೆ ಭೂಪ್ರದೇಶದಲ್ಲಿರುವ ಈ ಟೆಂಟ್​ಹೌಸ್​ನಲ್ಲಿ 6 ಪ್ರತ್ಯೇಕ ನಗರಗಳನ್ನು ಸಿದ್ಧಪಡಿಸಲಾಗಿದ್ದು, ಒಂದು ನಗರದ ಉಸ್ತುವಾರಿಯನ್ನು ರಂಗನಾಥ ಅಂಗಿಂತಾಯರಿಗೆ ನೀಡಲಾಗಿದೆ. ಈ ನಗರದಲ್ಲಿ 1500 ಮಂದಿ ಸಂತರ ವಾಸ್ತವ್ಯಕ್ಕೆ ವ್ಯವಸ್ಥೆಯಿದೆ. ಭೋಜನಕ್ಕಾಗಿ ಪ್ರತ್ಯೇಕ ಬೃಹತ್ ಗಾತ್ರದ ಪೆಂಡಾಲ್​ಗಳನ್ನು ಹಾಕಿ ವ್ಯವಸ್ಥೆ ಮಾಡಲಾಗಿದೆ.

ಅಯೋಧ್ಯೆಗೆ ನೇಪಾಳ ನದಿಗಳ ಜಲ

ನೇಪಾಳಕ್ಕೂ ಅಯೋಧ್ಯೆಗೂ ಅವಿನಾಭಾವ ನಂಟು. ರಾಮನ ಪತ್ನಿ ಸೀತೆ ನೇಪಾಳದ ಜನಕಪುರಿಯಲ್ಲಿ ಜನಿಸಿದಳು ಎಂದು ರಾಮಾಯಣದಲ್ಲಿದೆ. ಹೀಗಾಗಿ, ಎರಡೂ ದೇಶಗಳನ್ನು ಅಯೋಧ್ಯೆ-ಜನಕಪುರಿ ಈಗಲೂ ಬೆಸೆದಿವೆ. ರಾಮ-ಸೀತೆಯ ಕಾರಣಕ್ಕಾಗಿ ಎರಡೂ ದೇಶಗಳ ಧಾರ್ವಿುಕ ಸಂಬಂಧ ಗಟ್ಟಿಯಾಗಿದೆ. ಅಯೋಧ್ಯೆಗೆ ನೇಪಾಳದ ಗಂಡಕಿ ನದಿಯ ಶಿಲೆ ಬಂದಾಗಲೂ ಇದು ಸಾಬೀತಾಗಿತ್ತು. ಈಗ ಮತ್ತೊಮ್ಮೆ ಅದು ದೃಢವಾಗಿದೆ. ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಆಗಲಿರುವುದರಿಂದ, ನೇಪಾಳದ ಬಾಗಮತಿ, ನಾರಾಯಣಿ, ಗಂಗಾಸಾಗರ, ದೂಧ್​ವುತಿ, ಕಾಳಿ, ಗಂಡಕಿ, ಕೋಸಿ, ಕಮಲ ಸೇರಿದಂತೆ 16 ನದಿಗಳ ನೀರನ್ನು ಸಂಗ್ರಹಿಸಿ ಅಯೋಧ್ಯೆಗೆ ತರಲಾಗಿದೆ. ಈ ನೀರಿನಿಂದ ರಾಮನಿಗೆ ಅಭಿಷೇಕ ನಡೆಯಲಿದೆ. ನೇಪಾಳದ ಭಕ್ತರು ಖುದ್ದಾಗಿ ಕಳಶಗಳಲ್ಲಿ ನೀರನ್ನು ತಂದು ಅಯೋಧ್ಯೆಯ ಕರಸೇವಕಪುರಂನಲ್ಲಿರುವ ವಿಶ್ವ ಹಿಂದೂ ಪರಿಷತ್​ನ ಕೇಂದ್ರಸ್ಥಾನದ ಮಂದಿರವೊಂದರಲ್ಲಿ ಇರಿಸಿದ್ದಾರೆ. ಜನವರಿ 16ರಿಂದ ಪ್ರಾಣಪ್ರತಿಷ್ಠೆಯ ಒಂದೊಂದೇ ಪ್ರಕ್ರಿಯೆಗಳು ಶುರುವಾಗುತ್ತಿದ್ದಂತೆಯೇ ಈ ನೀರನ್ನು ರಾಮಮಂದಿರಕ್ಕೆ ಕೊಂಡೊಯ್ಯಲಾಗುತ್ತದೆ.

ಬಳ್ಳಾರಿ ದಂಪತಿ ಕಣ್ಣೀರು

ಬಳ್ಳಾರಿಯಿಂದ ರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ಬಂದಿದ್ದ ವೃದ್ಧ ದಂಪತಿ ನೂತನ ಭವ್ಯ ಶ್ರೀರಾಮ ಮಂದಿರ ನೋಡುತ್ತಲೇ ಕಣ್ಣೀರು ಹರಿಸಿದರು. ‘ನೀನೇ ಕಾಪಾಡು ನಮ್ಮನ್ನು ಅಂತ ನಾವು ಭಕ್ತಿಯಿಂದ ಬೇಡಿಕೊಳ್ಳುವ, ಪೂಜಿಸುವ, ಆರಾಧಿಸುವ ರಾಮನನ್ನು ಪ್ಲಾಸ್ಟಿಕ್ ಟೆಂಟ್​ನಲ್ಲಿ ಇರಿಸಬೇಕಾಗಿ ಬಂದಿತ್ತು. ಕೊನೆಗೂ ಇಂಥ ಭವ್ಯ ಮಂದಿರದಲ್ಲಿ ರಾಮನನ್ನು ಕಣ್ತುಂಬಿಕೊಳ್ಳಬಹುದಲ್ಲ ಅಂತ ಖುಷಿಯಾಗುತ್ತಿದೆ. ದೇವರು ಶಕ್ತಿ ಕೊಟ್ಟರೆ ಮತ್ತೊಮ್ಮೆ ಅಯೋಧ್ಯೆಗೆ ಬಂದು ಹೊಸ ರಾಮಮಂದಿರಲ್ಲಿ ದೇವರ ದರ್ಶನ ಮಾಡುತ್ತೇವೆ’ ಎಂದವರು ಬಳ್ಳಾರಿಯ ವೃದ್ಧ ಮಹಿಳೆ ಸರಸ್ವತಿ.

92ರ ನಂತರ ಮತ್ತೆ ಸೇವೆಗೆ

ಕರಸೇವೆಗೆಂದು 1992ರಲ್ಲಿ ಅಯೋಧ್ಯೆಗೆ ದೇಶದ ಮೂಲೆಮೂಲೆಯಿಂದ ಬಂದವರಲ್ಲಿ ಕರ್ನಾಟಕದವರೂ ಹಲವರಿದ್ದರು. ಅವರಲ್ಲಿ ದಕ್ಷಿಣ ಕನ್ನಡದ ಪುತ್ತೂರಿನ ನಿವಾಸಿ ರಂಗನಾಥ ಅಂಗಿಂತಾಯ ಕೂಡ ಒಬ್ಬರು. 92ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮಂಡ್ಯ ಶಾಖೆಯಲ್ಲಿ ಕ್ಲರ್ಕ್ ಆಗಿದ್ದ ರಂಗನಾಥರು, ‘ಕೆಲಸ ಹೋದರೂ ಪರವಾಗಿಲ್ಲ. ನಾನು 40 ದಿನ ರಜೆ ಹಾಕುತ್ತಿದ್ದೇನೆ’ ಎಂದು ನೇರವಾಗಿ ಅಯೋಧ್ಯೆಗೆ ಬಂದಿದ್ದರು. 92ರ ನಂತರ 31 ವರ್ಷಗಳ ಬಳಿಕ ಮತ್ತೆ ಅಯೋಧ್ಯೆಗೆ ಬಂದಿರುವ ಅವರು, ‘2 ತಿಂಗಳ ಕಾಲ ರಾಮನ ಸೇವೆಗೆಂದೇ ಇಲ್ಲಿ ಬಂದಿದ್ದೇನೆ’ ಎಂದು ವಿಜಯವಾಣಿ ಜತೆ ಮಾತಿಗಿಳಿದರು. ಸದ್ಯ ಬ್ಯಾಂಕ್​ನಿಂದ ನಿವೃತ್ತರಾಗಿದ್ದು, ಅಯೋಧ್ಯೆಯ ವಿಪರೀತ ಚಳಿಯಲ್ಲೂ, ಸಾಧು- ಸಂತರಿಗೆಂದು ನಿರ್ಮಾಣ ಮಾಡುತ್ತಿರುವ ಟೆಂಟ್​ಹೌಸ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಅಯೋಧ್ಯೆಗೆ ಬರುತ್ತೇನೆ ಎಂದು ಗೋಪಾಲ್ ನಾಗರಕಟ್ಟೆಯವರಿಗೆ ತಿಳಿಸಿದಾಗ, ಒಂದೆರಡು ದಿನಕ್ಕಾದರೆ ಬರಬೇಡಿ. 2 ತಿಂಗಳು ಕೆಲಸ ಮಾಡಲು ಬನ್ನಿ ಎಂದರು. ಇಲ್ಲಿರುವುದು ಭಾಗ್ಯ ಎಂದು ಬಂದಿದ್ದೇನೆ ಎನ್ನುತ್ತಾರೆ’ ರಂಗನಾಥ್.

‘ಮಂಡ್ಯದಲ್ಲಿ ಬಾಡಿಗೆಮನೆಯಲಿದ್ದಾಗ ಮದುವೆಯಾಗಿರ ಲಿಲ್ಲ. ಕರಸೇವೆಗೆಂದು ಅಯೋಧ್ಯೆಗೆ ಹೋದರೆ ವಾಪಸ್ ಬರುತ್ತೇನೆ ಎಂಬ ಖಾತರಿ ಇರಲಿಲ್ಲ. ಬ್ಯಾಂಕ್ ಕೆಲಸದ ಬಗ್ಗೆ ಯೋಚಿಸಲಿಲ್ಲ. ವಾಪಸ್ ಬರದಿದ್ದರೆ ನನ್ನೆಲ್ಲ ಸಾಮಗ್ರಿಗಳನ್ನು ಹೆತ್ತವರಿಗೆ ಕೊಟ್ಟು ಬಿಡಿ ಎಂದು ಮನೆಮಾಲೀಕರಿಗೆ ತಿಳಿಸಿ ಅಯೋಧ್ಯೆಗೆ ಬಂದಿದ್ದೆ. ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಉದ್ದೇಶವಿದ್ದುದರಿಂದ ಜನ್ಮಭೂಮಿಯಲ್ಲಿ ಯಾಗ-ಯಜ್ಞಾದಿಗಳನ್ನು ಕೈಗೊಳ್ಳಲಾಗಿತ್ತು. ನಾನದರಲ್ಲಿ ಭಾಗವಹಿಸಿದ್ದೆ’ ಎಂದು ರಂಗನಾಥ್ ನೆನಪಿಸಿಕೊಂಡರು.

ರಾಮಮಂದಿರ ಥೀಮ್​ನಾರಸಿ ಸೀರೆ

ರಾಮಮಂದಿರದ ಥೀಮ್ಲ್ಲಿ ತಯಾರಾದ ಬನಾರಸಿ ಸೀರೆಗಳು ಫ್ಯಾಷನ್ ಲೋಕದಲ್ಲಿ ಸದ್ದು ಮಾಡಲು ಸಿದ್ಧವಾಗಿವೆ. ಐತಿಹಾಸಿಕ ವೈಶಿಷ್ಟ್ಯ ಗಳೊಂದಿಗೆ ವಿನ್ಯಾಸವಾದ ಸೀರೆಗಳಿಗೆ ಯಾವಾಗಲೂ ಭಾರಿ ಬೇಡಿಕೆಯಿದೆ. ಆದರೆ ರಾಮ ಮಂದಿರದ ಬಗೆಗಿನ ಭಾವನೆ ಸಂಪೂರ್ಣವಾಗಿ ವಿಭಿನ್ನವಾಗಿದೆ ಎಂದು ನೇಕಾರ ಅನಿಸುರ್ ರೆಹಮಾನ್ ಹೇಳಿದ್ದಾರೆ.

ಪಲ್ಲು ಮೇಲಿನ ರಾಮ ದರ್ಬಾರ್ ಚಿತ್ರವಿರುವ ಸೀರೆಗಳಿಗೆ ಹೆಚ್ಚಿನ ಬೇಡಿಕೆಯಿದೆ. ಅಮೆರಿಕದಿಂದಲೂ ಆರ್ಡರ್​ಗಳನ್ನು ಸ್ವೀಕರಿಸಿದ್ದೇವೆ. ಈ ಸೀರೆಗಳ ಬೆಲೆ 7,000 ರೂಪಾಯಿಯಿಂದ ಪ್ರಾರಂಭವಾಗಿ 1 ಲಕ್ಷ ರೂಪಾಯಿವರೆಗೂ ಇದೆ.

| ಮದನ್ ನೇಕಾರ

ಕನಸು ನನಸಾಗಿದೆ

ಲಖನೌ: ಅಯೋಧ್ಯೆಯಿಂದ ಕಳುಹಿಸಿರುವ ರಾಮಮಂದಿರದ ಫೋಟೊ, ಪತ್ರದ ಜತೆಗೆ ಅಕ್ಷತೆ ಸ್ವೀಕರಿಸಿದ ಕರಸೇವಕ ಮೊಹಮ್ಮದ್ ಹಬೀಬ್ ಭಾವುಕರಾಗಿ, ದೀರ್ಘ ತಪಸ್ಸು ಫಲಿಸಿದೆ ಎಂದು ಪ್ರತಿಕ್ರಿಯಿಸಿ ದರು. ಕರಸೇವಕನಾಗಿ 1992 ಡಿಸೆಂಬರ್ 2 ರಿಂದ ನಾಲ್ಕೈದು ದಿನಗಳ ಕಾಲ ಅಯೋಧ್ಯೆಯಲ್ಲಿದ್ದೆ. ಕರಸೇವೆಯ 32 ವರ್ಷಗಳ ನಂತರ ಮಂದಿರ ನಿರ್ವಣದ ಕನಸು ನನಸಾಗುತ್ತಿರುವುದು ಖುಷಿ ತಂದಿದೆ. 22ರ ನಂತರ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆಯುತ್ತೇನೆ ಎಂದು ಹಬೀಬ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net