

ಬೆಂಗಳೂರು: ಚಿತ್ರ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದ ಸಂಬಂಧ ತನಿಖೆ ಕೈಗೊಂಡಿರುವ ಮಾದನಾಯಕನಹಳ್ಳಿ ಠಾಣೆ ಪೊಲೀಸರು, ಘಟನಾ ಸ್ಥಳದಲ್ಲಿ ಜಪ್ತಿ ಮಾಡಿರುವ ಮೊಬೈಲ್‌ಗಳು ಹಾಗೂ ಲ್ಯಾಪ್‌ಟಾಪ್‌ಗಳನ್ನು ರೀಟ್ರಿವ್ ಮಾಡಲು ಎಫ್‌ಎಸ್‌ಎಲ್‌ಗೆ ರವಾನಿಸಿದ್ದಾರೆ.
ಸದ್ಯದ ತನಿಖೆಯಲ್ಲಿ ಘಟನಾ ಸ್ಥಳದಲ್ಲಿ ಯಾವುದೇ ಮರಣಪತ್ರ ಸಿಕ್ಕಿಲ್ಲ. ಹೀಗಾಗಿ ಅಪಾರ್ಟ್‌ಮೆಂಟ್‌ನ ಪ್ಲ್ಯಾಟ್‌ನಲ್ಲಿ ಪತ್ತೆಯಾಗಿರುವ ಮೂರು ಮೊಬೈಲ್‌ಗಳು, ಲ್ಯಾಪ್‌ಟಾಪ್ ಹಾಗೂ ಟ್ಯಾಬ್‌ಗಳಲ್ಲಿನ ಮಾಹಿತಿ ಪರಿಶೀಲಿಸುವ ಸಂಬಂಧ ಅವುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಅಲ್ಲದೇ ಗುರುಪ್ರಸಾದ್ ಆತ್ಮಹತ್ಯೆಗೆ ಸಾಲಬಾಧೆ ಪ್ರಮುಖ ಕಾರಣ ಎನ್ನಲಾಗಿದೆ. ದೂರಿನಲ್ಲಿ ಅವರ ಎರಡನೇ ಪತ್ನಿ ಸುಮಿತ್ರಾ ಸಹ ಸಾಲಬಾಧೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಗುರುಪ್ರಸಾದ್‌ಗೆ ಯಾರೆಲ್ಲಾ ಸಾಲ ನೀಡಿದ್ದರೂ ಎಂಬುದರ ಬಗ್ಗೆಯೂ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಬಳಿಕ ನೋಟಿಸ್ ಜಾರಿಗೊಳಿಸಿ ಹೇಳಿಕೆ ಪಡೆಯಲಿದ್ದಾರೆ. ಅಂತೆಯೆ ಗುರುಪ್ರಸಾದ್ ಬ್ಯಾಂಕ್ ಖಾತೆಗಳಲ್ಲಿನ ಹಣ ವರ್ಗಾವಣೆ ಸೇರಿ ವಹಿವಾಟಿನ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಗುರುಪ್ರಸಾದ್ ಅವರ ಮೊದಲ ಹಾಗೂ ಎರಡನೇ ಪತ್ನಿ ಸೇರಿ ಸಂಬಂಧಿಕರ ಹೇಳಿಕೆ ದಾಖಲಿಸಲು ಪೊಲೀಸರು ಸಿದ್ದತೆ ನಡೆಸಿದ್ದಾರೆ. ಜತೆಗೆ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಗುರುಪ್ರಸಾದ್ ಅವರೊಂದಿಗೆ ಕೆಲಸ ಮಾಡುತ್ತಿದ್ದ ನಿರ್ದೇಶಕರು, ಸಹ ನಿರ್ದೇಶಕರು, ನಿರ್ಮಾಪಕರು ಸೇರಿ ಹಲವರ ಹೇಳಿಕೆ ಪಡೆಯಲಿದ್ದಾರೆ. ಶೀಘ್ರದಲ್ಲಿಯೇ ನೋಟಿಸ್ ಜಾರಿಗೊಳಿಸಿ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೈಸೇರದ ಅಂತಿಮ ವರದಿ:
ಗುರುಪ್ರಸಾದ್ ಅವರ ಮರಣೋತ್ತರ ಪರೀಕ್ಷೆ ಅಂತಿಮ ವರದಿ ಇನ್ನೂ ಪೊಲೀಸರ ಕೈಸೇರಿಲ್ಲ. ಪ್ರಾಥಮಿಕ ವರದಿ ಪ್ರಕಾರ ನಾಲ್ಕೈದು ದಿನಗಳ ಹಿಂದೆಯೇ ಗುರುಪ್ರಸಾದ್ ಮೃತಪಟ್ಟಿದ್ದಾರೆ. ಹೀಗಾಗಿ ಮೃತದೇಹ ಕೊಳೆತು ರಕ್ತಸ್ರಾವವಾಗಿದೆ. ಮುಂದಿನ ಗುರುವಾರ ಅಥವಾ ಶುಕ್ರವಾರ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಪೊಲೀಸರ ಕೈ ಸೇರಲಿದೆ ಎಂದು ತಿಳಿದು ಬಂದಿದೆ.