ದಿವಂಗತ ನಟ ಪುನೀತ್‌ರಾಜ್‌ಕುಮಾರ್ ಸಂಸ್ಮರಣೆ: ರಕ್ತ ಸಂಗ್ರಹಿಸಿ ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಿ ಮಾದರಿಯಾದ ಅಭಿಮಾನಿಗಳು

Blood donation camp by puneeth rajkumar fans mandya
Published on

ಮಂಡ್ಯ: ಭಾರತೀಯ ಚಿತ್ರರಂಗದಲ್ಲಿಯೇ ನಟ ಪುನೀತ್ ರಾಜಕುಮಾರ್ ವಿಶಿಷ್ಟ ವ್ಯಕ್ತಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಬಣ್ಣಿಸಿದರು.

ನಗರದ ಎಸ್.ಬಿ ಸಮುದಾಯ ಭವನದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗ, ಮಿಮ್ಸ್ ಜಿಲ್ಲಾ ರಕ್ತನಿಧಿ ಕೇಂದ್ರ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಪುನೀತ್ ರಾಜ್‌ಕುಮಾರ್ ಅವರ 2ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಆದರ್ಶಪ್ರಿಯ ವ್ಯಕ್ತಿಯಾಗಿ ಕಲಾಕ್ಷೇತ್ರದಲ್ಲಿ ಅಪಾರ ಜನಮನ್ನಣೆ ಗಳಿಸಿದ್ದರು. ಭಾರತೀಯ ಚಿತ್ರರಂಗಕ್ಕೆ ಪುನೀತ್ ರಾಜಕುಮಾರ್ ಅವರು ಅಪೂರ್ವ ಕೊಡುಗೆ ನೀಡಿದ್ದಾರೆ. ಪುನೀತ್ ರಾಜಕುಮಾರ್ ಅವರು, ಕಲೆ ಹಾಗೂ ಸಂಸ್ಕೃತಿ ಹಾಗೂ ಸಿನಿಮಾ ರಂಗವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರು. ನಟರಾಗಿ ಮಾತ್ರವಲ್ಲದೆ ಸಮಾಜಮುಖಿಯಾಗಿ ಒಳ್ಳೆಯ ಮಾನವೀಯ ಕೆಲಸಗಳನ್ನು ಮಾಡುವ ಮೂಲಕ ಕನ್ನಡಿಗರ ಮೆಚ್ಚುಗೆ ಪಡೆದಿದ್ದರು. ಅವರು ಅಭಿಮಾನಿಗಳಿಗೆ ಆರಾಧ್ಯ ದೈವವೂ ಆಗಿದ್ದಾರೆ. ಅವರು ಇಲ್ಲದಿದ್ದರೂ ಅವರು ಮಾಡಿರುವ ಸಮಾಜಮುಖಿ ಕೆಲಸ ಇಂದಿಗೂ ಜೀವಂತಾಗಿದೆ ಎಂದರು.

ರಕ್ತದಾನ ಮಹಾದಾನವಾಗಿದ್ದು, ಎಲ್ಲರೂ ರಕ್ತದಾನ ಮಾಡಿ ಮತ್ತೊಂದು ಜೀವ ಉಳಿಸುವ ಕೆಲಸವನ್ನು ಮಾಡಬೇಕಿದೆ. ಈ ಉತ್ತಮ ಕಾರ್ಯಕ್ರಮವನ್ನು ಆ ಪುಣ್ಯಾತ್ಮನ ಹೆಸರಿನಲ್ಲಿ ಮಾಡಿರುವುದು ಸಂತೋಷ ತರಿಸಿದೆ ಎಂದು ಮೆಚ್ಚಗೆ ವ್ಯಕ್ತಪಡಿಸಿದರು.

ರೆಡ್‌ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ. ರಕ್ತವನ್ನು ಕಂಡು ಹಿಡಿಯಲು ಸಾಧ್ಯವೇ ಆಗಿಲ್ಲ. ಆದ್ದರಿಂದ ಇಂತಹ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳು ಹೆಚ್ಚಾಗಿ ನಡೆಯಬೇಕು. ಆ ಮೂಲಕ ರಕ್ತ ಸಂಗ್ರಹ ಆಗಬೇಕು. ಇದು ಅಮೂಲ್ಯವಾದ ಜೀವಗಳನ್ನು ಉಳಿಸುವ ಶಿಬಿರವೂ ಆಗಿದೆ. ಹಾಗಾಗಿ ಎಲ್ಲ ಆರೋಗ್ಯವಂತರೂ ರಕ್ತದಾನ ಮಾಡುವಂತಾಗಲಿ ಎಂದು ಆಶಿಸಿದರು.

ಜೀವಧಾರೆ ಟ್ರಸ್ಟ್ ಅಧ್ಯಕ್ಷ ನಟರಾಜು, ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕರಾದ ಕೆ.ಟಿ.ಹನುಮಂತು, ರಂಗಸ್ವಾಮಿ, ಮಿಮ್ಸ್ ರಕ್ತನಿಧಿ ಕೇಂದ್ರದ ಮುರುಳೀಧರ್, ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗದ ರಾಜು, ಹೇಮಂತ್ ಇತರರು ಇದ್ದರು.

ಅಭಿಮಾನಿಗಳ ಮಾದರಿ ನಡೆ: ನೆಚ್ಚಿನ ನಟನ ಸ್ಮರಣೆ ಅಂಗವಾಗಿ ಆಯೋಜಿಸಿದ ರಕ್ತದಾನ ಶಿಬಿರಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ಯುವಕರು ಸ್ವಯಂ ಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡಿದರು. ಇದರಿಂದಾಗಿ 150ಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹಿಸಿ ಮಿಮ್ಸ್ ರಕ್ತನಿಧಿ ಕೇಂದ್ರಕ್ಕೆ ಹಸ್ತಾಂತರ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net