ಚುನಾವಣೆ ಬಂದಾಗ ಮೇಕೆದಾಟು ಯೋಜನೆ ನೆನಪು: ಸಚಿವ ಸುಧಾಕರ್ ಟೀಕೆ

Dr M C Sudhakar
Published on

ಬೆಂಗಳೂರು: ಪ್ರಧಾನಿ ಮೋದಿಯವರೊಂದಿಗೆ ನಿಕಟತೆಯಿದೆ. ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ಆದರೂ ಚುನಾವಣೆಗಳು ಬಂದಾಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಮೇಕೆದಾಟು ಯೋಜನೆ ನೆನಪಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಟೀಕಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮರು ಕ್ಷಣವೇ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರಲ್ಲ, ತಿಂಗಳುಗಳೇ ಗತಿಸಿದರೂ ಅನುಮತಿ ಕೊಡಿಸಲು ಸಾಧ್ಯವಾಗಿಲ್ಲವೇಕೆ ? ಎಂದು ಕೇಳಿದರು.

ಹಿರಿಯರಾದ ಎಚ್.ಡಿ.ದೇವೇಗೌಡರ ಬಗ್ಗೆ ಗೌರವವಿದೆ. ಚನ್ನಪಟ್ಟಣದಲ್ಲಿ ಮೊಮ್ಮಗನ ಗೆಲುವಿಗಾಗಿ ಈ ವಯಸ್ಸಿನಲ್ಲೂ ಬಂದಿದ್ದಾರೆ. ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದು, ಅವರು ಮಂತ್ರಿಯಾಗಿದ್ದಾಗ ತುಂಡು ಗುತ್ತಿಗೆಯಲ್ಲಿ ಭ್ರಷ್ಟಾಚಾರ ನಡೆಸಿದ್ದನ್ನು ಜನರು ಮರೆತಿಲ್ಲ ಎಂದು ಕುಟುಕಿದರು.

ನಿಖಿಲ್ ಕಣ್ಣೀರೇಕೆ ?

ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಹಲವು ಸಂದರ್ಭದಲ್ಲಿ ಕಣ್ಣೀರು ಹಾಕಿದ್ದಾರೆ. ಇದೇನು ಹೊಸದಲ್ಲ, ಆದರೆ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದೇಕೆ ? ತಿಳಿಯಲಿಲ್ಲ. ಅವರನ್ನು ಚನ್ನಪಟ್ಟಣ ಕ್ಷೇತ್ರದ ಜನರಂತೂ ಸೋಲಿಸಿಲ್ಲವಲ್ಲ.

ನಾನೂ ಎರಡು ಬಾರಿ ಸೋತಿದ್ದೇನೆ, ಜನಾದೇಶಕ್ಕೆ ತಲೆಬಾಗಿದ್ದೇನೆ. ಆದರೆ ಕಣ್ಣೀರು ಹಾಕಿಲ್ಲ, ಜನರ ಜತೆಗೆ ಕೆಲಸ ಮಾಡಿ ಗೆದ್ದಿರುವೆ. ಮಂಡ್ಯ, ರಾಮನಗರ, ಚನ್ನಪಟ್ಟಣದ ಜನರಿಗೆ ಬೇಕಿರುವುದು ಅಭಿವೃದ್ಧಿಯೇ ಹೊರತು ಇವರುಗಳ ಕಣ್ಣೀರಲ್ಲವೆಂದು ಡಾ.ಎಂ.ಸಿ.ಸುಧಾಕರ್ ಕಾಲೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net