

ತುಮಕೂರು: ಪ್ರತಿಫಲಾಪೇಕ್ಷೆಯಿಲ್ಲದೆ ದೈವವನ್ನು ಸ್ಮರಿಸುತ್ತ ಮಾಡುವ ಕಾಯಕವು ಬದುಕಿನಲ್ಲಿ ಸಂತೃಪ್ತಿ ಉಂಟು ಮಾಡಲಿದೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ನಗರದ ಕೆ.ಆರ್.ಬಡಾವಣೆಯ ಶ್ರೀಕೃಷ್ಣ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬ್ರಹ್ಮಕಲಶೋತ್ಸವದ ಸಾನ್ನಿಧ್ಯವಹಿಸಿ ಮಾತನಾಡಿದರು.
ನಾವು ಮಾಡುವ ಪ್ರತಿ ಕೆಲಸವೂ ಪರಿಶುದ್ಧತೆಯಿಂದ ಕೂಡಿದ್ದು, ಯಾವುದೇ ಅಪೇಕ್ಷೆ ಇರಬಾರದು. ನಮ್ಮ ಇಡೀ ಜೀವನವೇ ದೇವರ ಆರಾಧನೆಯಾಗಬೇಕು ಎಂದರು.
ಶ್ರೀಮಂತರು, ಅಶಕ್ತರನ್ನು ಮೇಲೆತ್ತಬೇಕು. ಕಷ್ಟದಲ್ಲಿದ್ದವರ ನೆರವಿಗೆ ಧಾವಿಸಬೇಕು. ಅದೇ ರೀತಿ ಮಾನವ ಜೀವನದಲ್ಲಿ ಯಾರಿಗೂ ನೋವುಂಟು ಮಾಡದೆ, ಹಿಂಸಿಸದೆ, ಬದುಕಿದರೆ ಭಗವಂತ ಸಂಪ್ರೀತನಾಗುತ್ತಾನೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರ ನೀಡಲು ಪಾಲಕರು ಪ್ರಾರಂಭಿಸಬೇಕು. ಆಗ ಅವರ ಬದುಕು ಶಿಸ್ತುಬದ್ಧವಾಗಿ ಸುವ್ಯವಸ್ಥಿತವಾಗಿರುತ್ತದೆ. ಈ ದಿಸೆಯಲ್ಲಿ ಶ್ರೀಕೃಷ್ಣ ಮಂದಿರವು ದೇವರ ಆರಾಧನೆಯ ಜತೆಗೆ ಸಂಸ್ಕಾರ ಕೇಂದ್ರವೂ ಆಗಲಿ ಎಂದು ಸಲಹೆ ನೀಡಿದರು.
ದೇಗುಲದ ಗೌರವ ಸಲಹೆಗಾರ ಕೆ.ಎಸ್.ಗೋಪಾಲಕೃಷ್ಣರಾವ್, ಕಾರ್ಯಾಧ್ಯಕ್ಷ ಎಚ್.ಶ್ರೀನಿವಾಸ ಹತ್ವಾರ್, ಕಾರ್ಯದರ್ಶಿ ಎಂ.ಎಸ್.ಸೂರ್ಯನಾರಾಯಣರಾವ್, ಟೂಡಾ ಮಾಜಿ ಸದಸ್ಯ ಜಿ.ಕೆ.ಶ್ರೀನಿವಾಸ್, ವ್ಯವಸ್ಥಾಪಕ ಎಚ್.ಎಲ್.ಜನಾರ್ದನಭಟ್ಟ, ಕೆ.ನಾಗರಾಜಧನ್ಯ ಮತ್ತಿತರರು ಉಪಸ್ಥಿತರಿದ್ದರು.
ದಾನಿಗಳಿಗೆ ಸನ್ಮಾನ: ಶ್ರೀಕೃಷ್ಣ ಮಂದಿರವು ನಿರ್ಮಾಣಗೊಂಡು 13 ವರ್ಷಗಳು ಸಂದಿದ್ದು, ದೇವಾಲಯದ ನವೀಕರಣ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಸಹಕರಿಸಿದ ಸರಸ್ವತಿ ಉಪಾಧ್ಯ, ಜಿ.ಕೆ.ಶ್ರೀನಿವಾಸ್, ದಯಾರಾಮ್ ಸೇರಿ ಅನೇಕ ದಾನಿಗಳನ್ನು ಶ್ರೀಗಳು ಶಾಲುಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಶ್ರೀಕೃಷ್ಣಮಂದಿರದಲ್ಲಿ ನವಗ್ರಹಹೋಮ, ಪವಮಾನಹೋಮ, ಮೂಲಮಂತ್ರಹೋಮ, ವಾಸ್ತುಹೋಮ, ಸುದರ್ಶನಹೋಮ ಸೇರಿ ವಿವಿಧ ಪೂಜೆ ನಡೆದವು. ಶ್ರೀನಿವಾಸ ಹತ್ವಾರ್ ಸ್ವಾಗತಿಸಿದರು. ಸೂರ್ಯನಾರಾಯಣರಾವ್ ಕಾರ್ಯಕ್ರಮ ನಿರೂಪಿಸಿದರು.