

ನವದಹಲಿ: ಕರೊನಾ ಸೋಂಕಿತರಿಗೆ ಬಳಸುತ್ತಿರುವ ರೆಮ್ಡಿಸಿವಿರ್ ಔಷಧಿಗೆ ಈಗ ಭಾರೀ ಡಿಮ್ಯಾಂಡ್ ಬಂದಿದೆ. ಆದರೆ, ಈ ಔಷಧಿ ಬಗ್ಗೆ ದೆಹಲಿ ಏಮ್ಸ್ ವೈದ್ಯರು ಆಘಾತಕಾರಿ ಅಂಶವನ್ನು ಪ್ರಸ್ತಾಪಿಸಿದ್ದಾರೆ.
ದೆಹಲಿ ಏಮ್ಸ್ ಆಸ್ಪತ್ರೆ ನಿರ್ದೇಶಕ ರಂದೀಪ್ ಗುಲೇರಿಯಾ ಅವರು ಈ ಬಗ್ಗೆ ಮಾತನಾಡಿದ್ದು, ಶೇ 90ರಷ್ಟು ಸೋಂಕಿತ ಪ್ರಕರಣಗಳಲ್ಲಿ ರೆಮ್ಡಿಸಿವಿರ್ ಔಷಧಿಯ ಅಗತ್ಯವಿಲ್ಲ. ಒಂದು ವೇಳೆ ಇವರು ಈ ಔಷಧಿ ತೆಗೆದುಕೊಂಡರೆ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂದು ಎಚ್ಚರಿಸಿದ್ದಾರೆ. ಅನವಶ್ಯಕವಾಗಿ ಕರೊನಾದ ಮೆದು ಲಕ್ಷಣಗಳುಳ್ಳ ರೋಗಿಗಳಿಗೆ ರೆಮ್ಡಿಸಿವಿರ್ನ್ನು ಬಳಸಿದರೆ ಔಷಧಿ ತೆಗೆದುಕೊಂಡ ರೋಗಿಗಳು ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಅಲ್ಲದೇ ಕೊರೊನಾ ಬಂದ ತಕ್ಷಣ ಆಕ್ಸಿಜನ್ ಎಂದು ಓಡಿಹೋಗುವುದು, ಆಕ್ಸಿಜನ್ ಸಂಗ್ರಹಿಸುವುದು, ರೆಮ್ಡಿಸಿವಿರ್ ಬೇಕು ಎಂದು ಒತ್ತಾಯಿಸುವುದು ಸರಿಯಲ್ಲ. ಇದು ಅನವಶ್ಯಕ. ಒಂದು ವೇಳೆ ಆಕ್ಸಿಮೀಟರ್ 94ಕ್ಕಿಂತ ಕೆಳಗೆ ಇಳಿಯತೊಡಗಿದರೆ ವೈದ್ಯರ ಸಲಹೆ ಮೇರೆಗೆ ಆಕ್ಸಿಜನ್ ಹಾಗೂ ರೆಮ್ಡಿಸಿವಿರ್ ಬಳಸಬಹುದು. ಆದರೆ, ರೆಮ್ಡಿಸಿವಿರ್ ಮ್ಯಾಜಿಕ್ ಮಾಡುವುದಿಲ್ಲ ಎಂದು ಗುಲೇರಿಯಾ ಸಲಹೆ ನೀಡಿದ್ದಾರೆ.
ಆಕ್ಸಿಮೀಟರ್ 94ಕ್ಕಿಂತ ಮೇಲೆ ಇದ್ದರೆ ಕರೊನಾ ಪೀಡಿತರು ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ. ಮನೆಯಲ್ಲೇ ಐಸೋಲೇಷನ್ಗೆ ಒಳಗಾಗಬಹುದು. ಉತ್ತಮ ಆಹಾರ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿ ಪಡೆದು ಮನೆಯಲ್ಲೇ ಎಚ್ಚರಿಕೆಯಿಂದ ಇರಬೇಕು ಎಂದು ಗುಲೇರಿಯಾ ಸಲಹೆ ನೀಡಿದ್ದಾರೆ.