

ತಿ.ನರಸೀಪುರ: ಗ್ರಾಮೀಣ ಪ್ರದೇಶಗಳಲ್ಲಿರುವ ಧಾರ್ಮಿಕ ಕೇಂದ್ರಗಳಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಮೂಗೂರು ಗ್ರಾಮದ ಶ್ರೀರಾಮ ಕಾಲನಿಯಲ್ಲಿರುವ ಶ್ರೀ ಮಂಟೇಸ್ವಾಮಿ ಗದ್ದುಗೆಯನ್ನು ಜೀರ್ಣೋದ್ಧಾರ ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ ಜಯಮ್ಮ ಸುಂದರ್ ಹೇಳಿದರು.
ತಾಲೂಕಿನ ಮೂಗೂರು ಗ್ರಾಮದ ಶ್ರೀರಾಮ ಕಾಲನಿಯಲ್ಲಿ ಸೋಮವಾರ ಜೀರ್ಣೋದ್ಧಾರಗೊಂಡ ಶ್ರೀ ಮಂಟೇಸ್ವಾಮಿ ಗದ್ದುಗೆಯ ಧಾರ್ಮಿಕ ಉತ್ಸವ ಹಾಗೂ ದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪುರಾಣ ಪ್ರಸಿದ್ಧ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯವಿರುವ ಗ್ರಾಮದಲ್ಲಿದ್ದ ಶ್ರೀ ಮಂಟೇಸ್ವಾಮಿ ಗದ್ದುಗೆ ಶಿಥಿಲಗೊಂಡಿತ್ತು. ಗದ್ದುಗೆಯ ಅಭಿವೃದ್ಧಿಗೆ ಗ್ರಾಮಸ್ಥರ ಮನವಿ ಹಿನ್ನೆಲೆ ದೇವಾಲಯ ಜೀರ್ಣೋದ್ಧಾರಗೊಳಿಸಲಾಗಿದೆ ಎಂದರು.
ಯುವ ಮುಖಂಡ ರಾಹುಲ್ ಎಸ್.ಶಂಕರ್, ಎಸ್.ಮಹದೇವಸ್ವಾಮಿ ಮಾತನಾಡಿದರು.
ಶ್ರೀ ಮಂಟೇಸ್ವಾಮಿ ಗದ್ದುಗೆ ಉದ್ಘಾಟನೆ ಹಿನ್ನೆಲೆಯಲ್ಲಿ ಶ್ರೀರಾಮ ಕಾಲನಿಯಲ್ಲಿ ಬೆಳಗ್ಗೆಯಿಂದಲೇ ಪೂಜಾ ವಿಧಿ ವಿಧಾನಗಳು ನೆರವೇರಿದವು. ಮಂಗಳವಾದ್ಯದೊಂದಿಗೆ ನಗರದ ಪ್ರಮುಖ ಬೀದಿಯಲ್ಲಿ ದೇವರ ಮೆರವಣಿಗೆ ನಡೆಸಲಾಯಿತು.
ಗ್ರಾಮದ ಮುಖಂಡ ಪುಟ್ಟಸ್ವಾಮಿ, ಮಹದೇವಯ್ಯ, ಪಿ.ದೇವರಾಜು, ಉದಯಕುಮಾರ್, ರಮೇಶ್, ಗ್ರಾ.ಪ್ರಂ. ಸದಸ್ಯೆ ಚಂದ್ರಮ್ಮ, ಚೇತನ್ ಕುಮಾರ್, ಎಂ.ಪಿ.ಮಹದೇವಸ್ವಾಮಿ, ಲಿಂಗರಾಜು ಇತರರು ಇದ್ದರು.