ಮತಾಂತರ, ಲವ್ ಜಿಹಾದ್ ತಡೆಗೆ ಸುಗ್ರೀವಾಜ್ಞೆ?

Love Jihad
Published on

ಲಖನೌ: ಲವ್ ಜಿಹಾದ್ ಹೆಸರಲ್ಲಿ ನಡೆಯುತ್ತಿರುವ ಮತಾಂತರ ತಡೆಯಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಮುಂದಾಗಿದೆ. ಈ ಕುರಿತು ಸುಗ್ರೀವಾಜ್ಞೆ ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ.

ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಲವ್ ಜಿಹಾದ್ ಹಾಗೂ ಬಲವಂತದ ಮತಾಂತರಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇತರ ಕೆಲ ರಾಜ್ಯಗಳಲ್ಲಿ ಈಗ ಜಾರಿಯಲ್ಲಿರುವ ಮತಾಂತರ ತಡೆ ಕಾಯ್ದೆಯನ್ನು ಅಧ್ಯಯನ ನಡೆಸಿ, ರಾಜ್ಯಕ್ಕೆ ಅಗತ್ಯವಾದ ರೀತಿಯಲ್ಲಿ ಮಾರ್ಪಾಡು ಮಾಡಿ ಸುಗ್ರೀವಾಜ್ಞೆ ಜಾರಿಗೊಳಿಸಲಾಗುತ್ತದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕಾನ್ಪುರ ಒಂದರಲ್ಲೇ ಇತ್ತೀಚೆಗೆ 11 ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬಂದಿವೆ. ರಾಜ್ಯಾದ್ಯಂತ 100ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ.

ಯೋಗಿ ಖಡಕ್ ಸೂಚನೆ: ಲವ್ ಜಿಹಾದ್, ಬಲವಂತದ ಮತಾಂತರ ತಡೆಯಲು ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸಿಎಂ ಯೋಗಿ ಸೂಚನೆ ನೀಡಿದ್ದಾರೆ.

ಯಾವ ರಾಜ್ಯದಲ್ಲಿ ಕಾಯ್ದೆ ಇದೆ?

ಅರುಣಾಚಲ ಪ್ರದೇಶ, ಒಡಿಶಾ, ಮಧ್ಯಪ್ರದೇಶ, ಛತ್ತೀಸ್​ಗಢ, ಹಿಮಾಚಲ ಪ್ರದೇಶ, ಗುಜರಾತ್, ಜಾರ್ಖಂಡ, ಉತ್ತರಾಖಂಡದಲ್ಲಿ ಮತಾಂತರ ತಡೆ ಕಾಯ್ದೆ ಅಸ್ತಿತ್ವದಲ್ಲಿದೆ. 1967ರಲ್ಲಿ ಒಡಿಶಾದಲ್ಲಿ ಮೊದಲ ಬಾರಿಗೆ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಬಲವಂತವಾಗಿ ಮತಾಂತರ ಮಾಡುವುದು, ಇನ್ನೊಬ್ಬರಿಂದ ಮತಾಂತರ ಮಾಡಿಸುವುದು, ಇದಕ್ಕೆ ಕುಮ್ಮಕ್ಕು ನೀಡುವುದು. ಬೆದರಿಕೆ ಹಾಕಿ, ಆಮಿಷಗಳನ್ನು ತೋರಿಸಿ ಅಥವಾ ಇನ್ಯಾವುದೇ ಮಾರ್ಗದಲ್ಲಿ ಮತಾಂತರ ಮಾಡುವುದು ಹಾಗೂ ಯತ್ನಿಸುವುದು ಅಪರಾಧವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net