ಧಾರ್ವಿುಕ ಕಟ್ಟಡ ಸೇಫ್: ಅನಧಿಕೃತ ಮಂದಿರ, ಮಸೀದಿ, ಚರ್ಚ್​ಗಳಿಗೆ ತಪ್ಪಿದ ತೆರವು ಭೀತಿ

Front
Published on

ಬೆಂಗಳೂರು: ದೇವಸ್ಥಾನ, ಮಸೀದಿ, ಚರ್ಚ್​ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ವಿುಸಿರುವ ಧಾರ್ವಿುಕ ಕಟ್ಟಡಗಳ ಸಂರಕ್ಷಣೆ ವಿಚಾರದಲ್ಲಿ ನಿರೀಕ್ಷೆಯಂತೆ ಸುಪ್ರೀಂಕೋರ್ಟ್ ತೀರ್ಪಿಗೆ ಸೆಡ್ಡು ಹೊಡೆದಿರುವ ರಾಜ್ಯ ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ಮಹತ್ವದ ವಿಧೇಯಕ ಮಂಡಿಸಿದೆ. ‘ಕರ್ನಾಟಕ ಧಾರ್ವಿುಕ ಕಟ್ಟಡಗಳ (ಸಂರಕ್ಷಣೆ) ವಿಧೇಯಕ, 2021’ಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತ ಕೆಲವೇ ಗಂಟೆಗಳಲ್ಲಿ ಮುದ್ರಣ ಹಾಗೂ ವಿಧಾನಸಭೆ ಕಾರ್ಯ-ಕಲಾಪ ಪಟ್ಟಿಗೆ ಸೇರ್ಪಡೆ ನಂತರ ಮಂಡನೆ ಕಾರ್ಯಗಳೆಲ್ಲವೂ ಶರವೇಗದಲ್ಲಿ ನಡೆದಿದೆ.

ಬಹುಸಂಖ್ಯಾತ ಹಿಂದುಗಳ ಭಾವನೆಗಳಿಗೆ ಗೌರವ, ಶ್ರದ್ಧಾ ಕೇಂದ್ರಗಳ ರಕ್ಷಣೆ ವಿಷಯದಲ್ಲಿ ಆಡಳಿತಾರೂಢ ಬಿಜೆಪಿ ಒಂದು ಹೆಜ್ಜೆ ಮುಂದಿಟ್ಟರೆ, ಬೊಮ್ಮಾಯಿ ನೇತೃತ್ವದ ಸರ್ಕಾರ ಎರಡು ಹೆಜ್ಜೆ ಮುಂದಿಟ್ಟಿದೆ. ಸುಪ್ರೀಂ ತೀರ್ಪಿನಿಂದಾಗಿ ತೆರವಿನ ಭೀತಿಯಲ್ಲಿದ್ದ ಎಲ್ಲ ಧರ್ವಿುಯರ ಧಾರ್ವಿುಕ ಕಟ್ಟಡಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗಮನಾರ್ಹ ನಿರ್ಣಯ ತೆಗೆದುಕೊಳ್ಳುವ ಮೂಲಕ ಹಿಂದುಗಳಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಸಂರಕ್ಷಣಾ ವಿಧೇಯಕವನ್ನು ಸೋಮವಾರ ಸದನದಲ್ಲಿ ಮಂಡಿಸುವ ಮೂಲಕ ಹಿಂದುಗಳಿಗೆ ಅಭಯದ ಸಂದೇಶ, ಹಿಂದುಪರ ಸಂಘಟನೆಗಳಲ್ಲಿ ವಿಶ್ವಾಸ ಮೂಡಿಸಿದೆ. ಜತೆಗೆ ಪ್ರತಿಪಕ್ಷ ಕಾಂಗ್ರೆಸ್ ಕೈಗೆ ಸಿಗಲಿದ್ದ ಅಸ್ತ್ರ ನಿಷ್ಕ್ರಿಯಗೊಳಿಸಿದೆ. ವಿಧಾನಸಭೆಯಲ್ಲಿ ಮಂಡನೆಯಾದ ವಿಧೇಯಕದ ಮೇಲೆ ಚರ್ಚೆ ನಡೆದು ಒಪ್ಪಿಗೆ ಪಡೆಯುವುದು ಬಾಕಿಯಿದೆ.

ದುಗುಡ ತಣಿಸುವ ಕಸರತ್ತು: ಸುಪ್ರೀಂ ಕೋರ್ಟ್ ತೀರ್ಪು ಮುಂದಿಟ್ಟು ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ರಾತ್ರೋರಾತ್ರಿ ದೇವಸ್ಥಾನ ನೆಲಸಮಗೊಳಿಸಿದ್ದು ಹಿಂದು ಸಮುದಾಯಗಳ ದುಗುಡ ಹೆಚ್ಚಿಸಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೀಗಾಯಿತಲ್ಲ ಎಂಬ ಕೊರಗು, ವಿವಾದ ಹಾಗೂ ಆಕ್ರೋಶ ಭುಗಿಲೆದ್ದು ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲಾಗುವ ಸನ್ನಿವೇಶ ಸೃಷ್ಟಿಯಾಗಿತ್ತು. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆದಿಯಾಗಿ ಪ್ರಮುಖ ನಾಯಕರು ದೇವಸ್ಥಾನಗಳ ರಕ್ಷಣೆಗೆ ಬದ್ಧವೆಂದು ಹೇಳುವ ಮೂಲಕ ಸರ್ಕಾರ ಮಾಡಬೇಕಾದ್ದೇನು ಎಂದು ಸೂಚ್ಯವಾಗಿ ತಿಳಿಸಿದ್ದರು.

ಸಮ್ಮತಿ ಬಾಕಿ: ದಾವಣಗೆರೆಯಲ್ಲಿ ಭಾನುವಾರ ನಡೆದ ರಾಜ್ಯ ಕೋರ್ ಕಮಿಟಿ ಹಾಗೂ ಕಾರ್ಯಕಾರಿಣಿ ಸಭೆಗಳಲ್ಲಿ ದೇಗುಲಗಳನ್ನು ಒಡೆಯಬಾರದು ಎಂಬ ಒಂದು ಸಾಲಿನ ನಿರ್ಣಯ ಅಂಗೀಕರಿಸಲಾಗಿತ್ತು. ದೇವಸ್ಥಾನ ನೆಲಸಮ ಪ್ರಕರಣದ ನಂತರದ ಬೆಳವಣಿಗೆಯನ್ನು ಅಂದಾಜಿಸಿದ್ದ ಬೊಮ್ಮಾಯಿ, ಕಾನೂನಾತ್ಮಕ ಪರಿಹಾರದ ಮೂಲಕ ರ್ತಾಕ ಅಂತ್ಯ ಕಾಣಿಸುವ ಕಾರ್ಯತಂತ್ರ ಹೆಣೆದು, ದುಗುಡ ದೂರ ಮಾಡುವ ಕಸರತ್ತು ನಡೆಸಿದರು.

ಸಹೋದ್ಯೋಗಿಗಳಿಗೆ ಮನವರಿಕೆ: ಸಚಿವ ಸಂಪುಟ ಸಭೆಯಲ್ಲಿ ವಿಧೇಯಕದ ಅನಿವಾರ್ಯತೆ, ತುರ್ತು ಮಂಡನೆ ಅಗತ್ಯತೆ ಕುರಿತು ಸಂಪುಟದ ಸಹೋದ್ಯೋಗಿಗಳಿಗೆ ಸಿಎಂ ಬೊಮ್ಮಾಯಿ ಅಂಶವಾರು ಮನವರಿಕೆ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ಸಾಕಷ್ಟು ಹೋಂ ವರ್ಕ್ ಮಾಡಿಕೊಂಡಿದ್ದ ಬೊಮ್ಮಾಯಿ, ಸುಪ್ರೀಂಕೋರ್ಟ್ ಆದೇಶದ ಪ್ರಮುಖಾಂಶಗಳ ಜತೆಗೆ ಸಂರಕ್ಷಣಾ ಮಸೂದೆಯ ಪುಟ್ಟ ಟಿಪ್ಪಣಿ ಸಿದ್ಧಪಡಿಸಿಕೊಂಡು ಸಭೆಗೆ ಬಂದಿದ್ದರು ಎಂದು ಮೂಲಗಳು ತಿಳಿಸಿವೆ.

ಕಾನೂನು ತಜ್ಞರೊಂದಿಗೆ ರ್ಚಚಿಸಿ ಪಡೆದ ಮಾಹಿತಿಯಂತೆ ಕಾಯ್ದೆ ತಿದ್ದುಪಡಿ ಸಾಧಕ-ಬಾಧಕ ವಿಶ್ಲೇಷಿಸಿ, ಬಿಜೆಪಿ ರಾಜ್ಯ ಕೋರ್ ಕಮಿಟಿ ಮತ್ತು ಕಾರ್ಯಕಾರಿಣಿ ಸಭೆಯ ತೀರ್ವನಗಳನ್ನು ವಿವರಿಸಿದ್ದಾರೆ. ಸಿಎಂ ವಿವರಣೆ ನೀಡಿದ ಬಳಿಕ ಧಾರ್ವಿುಕ ಕಟ್ಟಡಗಳ ಸಂರಕ್ಷಣೆ ಮಸೂದೆಗೆ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಸದಸ್ಯರು ಸಮ್ಮತಿಸಿದರು ಎಂದು ಮೂಲಗಳು ತಿಳಿಸಿವೆ. ವಿಧಾನ ಮಂಡಲದ ಅಧಿವೇಶನದಲ್ಲಿ ಪರ್ಯಾಲೋಚನೆ ಮತ್ತು ಅಂಗೀಕಾರ ಪ್ರಕ್ರಿಯೆ ಸುಸೂತ್ರವಾಗಿ ನಡೆಯುವ ಕುರಿತು ಬೊಮ್ಮಾಯಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅಲ್ಲದೆ, ಏನೆಲ್ಲ ಅಡ್ಡಿ-ಆತಂಕ ಬರಬಹುದು ಹಾಗೂ ಅದನ್ನು ಹೇಗೆ ಎದುರಿಸಬೇಕು ಎನ್ನುವ ಕುರಿತು ಬೊಮ್ಮಾಯಿ ಮಹತ್ವದ ‘ಟಿಪ್ಸ್’ ನೀಡಿದರು ಎಂದು ಮೂಲಗಳು ಮಾಹಿತಿ ನೀಡಿವೆ.

ಮಿಂಚಿನ ವೇಗದಲ್ಲಿ ಕಾರ್ಯತತ್ಪರ: ಸಂಪುಟ ಸಭೆಯಲ್ಲಿ ವಿಧೇಯಕದ ಕರಡು ಒಪ್ಪಿಗೆ ಪಡೆಯುತ್ತಿದ್ದಂತೆಯೇ ಮುಂದಿನ ಹಂತದ ಕೆಲಸಗಳು ಮಿಂಚಿನ ವೇಗದಲ್ಲಿ ನಡೆದವು. ವಿಧೇಯಕದ ಪ್ರತಿಗಳನ್ನು ಮುದ್ರಣಕ್ಕೆ ಕಳುಹಿಸುವ ಜತೆಗೆ ವಿಧಾನಸಭಾಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟು ಸೋಮವಾರದ ಕಲಾಪ ಪಟ್ಟಿಯಲ್ಲಿ ಪ್ರಸ್ತಾವಿತ ಬಿಲ್ ಸೇರ್ಪಡೆಗೆ ಸರ್ಕಾರ ಒಪ್ಪಿಸಿತು. ವಿಧಾನಸಭೆ ಅಧಿವೇಶನದ ಕಾರ್ಯ-ಕಲಾಪಗಳ ಪಟ್ಟಿಗೆ ಭೋಜನ ವಿರಾಮದ ನಂತರ ಪೂರಕ ಕಾರ್ಯಸೂಚಿ ಪಟ್ಟಿಯಲ್ಲಿ ಅಡಕಗೊಳಿಸಿ, ವಿಧೇಯಕ ಮಂಡನೆ ಹಾದಿ ಸುಗಮಗೊಳಿಸಲಾಯಿತು. ಮುಜರಾಯಿ ಸಚಿವರ ಬದಲಿಗೆ ಸ್ವತಃ ಸಿಎಂ ‘ಧಾರ್ವಿುಕ ಕಟ್ಟಡಗಳ (ಸಂರಕ್ಷಣ) ವಿಧೇಯಕ, 2021’ ಮಸೂದೆಯನ್ನು ಮಂಡಿಸುವ ಮೂಲಕ ಧಾರ್ವಿುಕ ಕೇಂದ್ರಗಳ ಸಂರಕ್ಷಣೆಗೆ ನೀಡಿದ ಮಹತ್ವ ಸಾರಿದರು.

ಮಸೂದೆಯ ಮುಖ್ಯಾಂಶಗಳು

  • ಯಾವುದೇ ಕಾನೂನಿನಲ್ಲಿ ಅಡಕ, ಕೋರ್ಟ್, ನ್ಯಾಯಾಧಿಕರಣ ಅಥವಾ ಪ್ರಾಧಿಕಾರದ ತೀರ್ಪ, ಡಿಕ್ರಿ ಇಲ್ಲವೇ ಆದೇಶ ಇದ್ದರೂ ಈ ಅಧಿನಿಯಮ ಪ್ರಾರಂಭದ ದಿನಾಂಕದಿಂದ ನಿಯಮಗಳು ಮತ್ತು ಷರತ್ತಿಗೆ ಒಳಪಟ್ಟು ಅಸ್ತಿತ್ವದಲ್ಲಿರುವ ಧಾರ್ವಿುಕ ಕಟ್ಟಡಗಳ ಸಂರಕ್ಷಣೆ
  • ರಾಜ್ಯ ಸರ್ಕಾರ, ಸ್ಥಳೀಯ ಪ್ರಾಧಿಕಾರ ಭವಿಷ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಧಾರ್ವಿುಕ ಕಟ್ಟಡ ನಿರ್ವಣಕ್ಕೆ ಅವಕಾಶ ನೀಡುವಂತಿಲ್ಲ
  • ಚಾಲ್ತಿ ಕಾನೂನು, ಜಿಲ್ಲಾ ಆಡಳಿತ, ರಾಜ್ಯ ಸರ್ಕಾರ ಕಾಲ ಕಾಲಕ್ಕೆ ವಿಧಿಸುವ ಇತರ ಯಾವುದೇ ಷರತ್ತಿಗೆ ಒಳಪಟ್ಟು ಸಂರಕ್ಷಿತ ಕಟ್ಟಡಗಳಲ್ಲಿ ಯಾವುದೇ ಧಾರ್ವಿುಕ ಕಾರ್ಯಚಟುವಟಿಕೆಗಳಿಗೆ ಅವಕಾಶ
  • ಅಧಿಸೂಚನೆ, ಅದರಡಿ ರಚಿಸಿದ ನಿಯಮಗಳಡಿ ಸದ್ಭಾವನೆಯಿಂದ ಮಾಡಿದ ಅಥವಾ ಮಾಡಲು ಉದ್ದೇಶಿಸಿದ ಕಾರ್ಯಕ್ಕಾಗಿ ರಾಜ್ಯ ಸರ್ಕಾರ ಇಲ್ಲವೇ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಯಾವುದೇ ದಾವೆ, ಪ್ರಾಸಿಕ್ಯೂಷನ್, ಇತರ ಕಾನೂನು ಕ್ರಮ ಕೈಗೊಳ್ಳುವಂತಿಲ್ಲ
  • ಕಾಯ್ದೆಯ ಉಪಬಂಧಗಳ ಜಾರಿಗೆ ಯಾವುದೇ ತೊಂದರೆ ತಲೆದೋರಿದರೆ ಅವಶ್ಯ ಅಥವಾ ಸೂಕ್ತವೆನಿಸಿದ ಉಪಬಂಧಗಳನ್ನು ರಚಿಸಬಹುದು
  • ಆದರೆ ಈ ಅಧಿನಿಯಮದ ಪ್ರಾರಂಭದ ದಿನಾಂಕದಿಂದ 2 ವರ್ಷ ಅವಧಿಯ ಮುಕ್ತಾಯದ ತರುವಾಯ ಅಂಥ ಯಾವುದೇ ಆದೇಶ ಹೊರಡಿಸುವಂತಿಲ್ಲ

3 ವರ್ಷದ ಡಿಪ್ಲೊಮಾ ಪಿಯುಸಿ ತತ್ಸಮಾನ

ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್ ಅನ್ನು ಪಿಯುಸಿಗೆ ತತ್ಸಮಾನ ವಿದ್ಯಾರ್ಹತೆಯೆಂದು ಸರ್ಕಾರಿ ನೇಮಕಾತಿಗೆ ಪರಿಗಣಿಸಲು ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಸಮ್ಮತಿ ನೀಡಿರುವುದಾಗಿ ಮೂಲಗಳು ತಿಳಿಸಿವೆ. ಬಹುದಿನಗಳಿಂದ ಇಂಥದ್ದೊಂದು ಬೇಡಿಕೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಲೇ ಇತ್ತು. ನೇಮಕ ಸಂದರ್ಭದಲ್ಲಿ ತಮ್ಮನ್ನು ಪರಿಗಣಿಸುವುದಿಲ್ಲ ಎಂಬ ಅಳಲು ವಿದ್ಯಾರ್ಥಿಗಳದ್ದಾಗಿತ್ತು. ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದು ಅಂತಿಮವಾಗಿ ಅನುಮೋದನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯ ಸೇವೆಗಳು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ವಿಧೇಯಕ, ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ವಿಧೇಯಕ, ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ತಿದ್ದುಪಡಿ ವಿಧೇಯಕಕ್ಕೂ ಸಂಪುಟ ಅಸ್ತು ಎಂದಿದೆ. ಈ ವಿಧೇಯಕಗಳು ಇದೇ ಅಧಿವೇಶನದಲ್ಲಿ ಮಂಡನೆಯಾಗಿ ಪರ್ಯಾಲೋಚನೆಗೊಳಪಡಲಿದೆ.

ಹಣಕಾಸಿನ ದುರ್ಬಳಕೆ ಸಂಬಂಧಪಟ್ಟಂತೆ ಕಲಘಟಕಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಮೇಟಿ ಅವರಿಗೆ ಉಪ ಲೋಕಾಯುಕ್ತರ ಶಿಫಾರಸಿನಂತೆ ಕಡ್ಡಾಯವಾಗಿ ನಿವೃತ್ತಿಗೊಳಿಸುವ ಬಗ್ಗೆಯೂ ಚರ್ಚೆ ನಡೆದಿದೆ.

ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ಕುಂಟೋಜಿ ಹಾಗೂ 17 ಗ್ರಾಮಗಳಿಗೆ ಕುಡಿಯವ ನೀರು ಪೂರೈಸುವ 38.78 ಕೋಟಿ ರೂ.ಅಂದಾಜು ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.

ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಆಶ್ರಮ ಶಾಲೆಗಳ ವಿದ್ಯಾರ್ಥಿಗಳಿಗೆ ಆಹಾರ ಸಾಮಗ್ರಿ, ಶುಚಿ ಸಂಭ್ರಮ ಕಿಟ್ ಹಾಗೂ ಶೂ ಸಾಕ್ಸ್​ಗಳಿಗೆ 69.49 ಕೋಟಿ ರೂ. ಅಂದಾಜು ವೆಚ್ಚಕ್ಕೆ ಅನುಮೋದನೆ ದೊರೆತಿದೆ.

ಶುಭ್ರ ಬೆಂಗಳೂರು ಯೋಜನೆಯಡಿ ಕೊಳಚೆ ನೀರು ತಡೆಯಲು ಮಲ್ಲತ್ತಳ್ಳಿ ಕೆರೆ ಬಳಿ ಕಾಮಗಾರಿ ನಡೆಸಲು 22.40 ಕೋಟಿ ರೂ.ಗೆ ಅನುಮೋದನೆ ನೀಡಲಾಗಿದೆ. ಪ್ರಮುಖವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ, ಉಪ ಚುನಾವಣೆಗಳು ಹಾಗೂ ಅಧ್ಯಕ್ಷ, ಉಪಾಧ್ಯಕ್ಷ, ಮೇಯರ್, ಉಪಮೇಯರ್ ಚುನಾವಣೆ ನಡೆಸಲು ಒಪ್ಪಿಗೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net