ಪರೋಪಕಾರ ಕೆಲಸದಿಂದ ಜೀವನ ಸಾರ್ಥಕ

12Holehonnur1
ತಟ್ಟೆಹಳ್ಳಿ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ದೇವರ ನೂತನ ಕಟ್ಟಡದ ಗೃಹಪ್ರವೇಶ ಸಂದರ್ಭದಲ್ಲಿ ಪೂರ್ಣಾಹುತಿಯನ್ನು ಕೇದಾರ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಿದರು.
Published on

ಹೊಳೆಹೊನ್ನೂರು: ಪುರಾತನ ಕಾಲದಿಂದಲೂ ಸಮಾಜದಲ್ಲಿ ಶಾಂತಿ, ನೆಮ್ಮದಿ ಇರಲು ದೇವಸ್ಥಾನಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ಕೇದಾರ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣ ಸಮೀಪದ ತಟ್ಟೆಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ಮೈಲಾರಲಿಂಗೇಶ್ವರ ದೇವರ ನೂತನ ಕಟ್ಟಡದ ಗೃಹಪ್ರವೇಶ ಹಾಗೂ ದೇವರ ಪ್ರತಿಷ್ಠಾಪನೆ ನೆರವೇರಿಸಿದ ನಂತರ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಮಾನವ ಎಲ್ಲರೊಂದಿಗೆ ಕೂಡಿ ಬಾಳಬೇಕು. ಭಾರತೀಯ ಧರ್ಮದ ಆಧಾರದ ಮೇಲೆ ನಾವೆಲ್ಲರೂ ಜೀವನ ನಡೆಸುತ್ತಿದ್ದೇವೆ. ನೆಲ, ಜಲ, ಭಾಷೆ, ದೇವರು ಹಾಗೂ ಧರ್ಮ ಸಿದ್ಧಾಂತ ನಮ್ಮೆಲ್ಲರ ತವರು ಮನೆ ಇದ್ದಂತೆ. ಆದ್ದರಿಂದ ಪ್ರತಿಯೊಬ್ಬರು ಪರೋಪಕಾರ, ಪುಣ್ಯದ ಕೆಲಸ ಮಾಡಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ದೇವರ ನೂತನ ಕಟ್ಟಡದ ಗೃಹಪ್ರವೇಶ ಹಿನ್ನೆಲೆಯಲ್ಲಿ ಗಂಗೆ ಪೂಜೆ, ಗಣಪತಿ ಪೂಜೆ, ಪುಣ್ಯಾಹ, ನಾಂದಿ, ಪಂಚಕಳಶ ನವಗ್ರಹ, ಮಹಾರುದ್ರ ಕಳಶ, ಮೃತ್ಯುಂಜಯ ಹಾಗೂ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಗೆ ಕುಂಭಾಭಿಷೇಕ, ರುದ್ರಾಭಿಷೇಕ, ಪ್ರಾಣ ಪ್ರತಿಷ್ಠಾಪನೆ, ಹೋಮ, ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ಧಾರ್ಮಿಕ ಕಾರ್ಯಗಳು ನಡೆದವು. ನಂತರ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಶ್ರೀ ಮೈಲಾರಲಿಂಗೇಶ್ವರ ಸೇವಾ ಸಮಿತಿ ಪದಾಧಿಕಾರಿಗಳು ಹಾಗೂ ನೂರಾರು ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net