

ಆಯನೂರು: ಪ್ರತಿಯೊಬ್ಬ ಮನುಷ್ಯನಿಗೂ ಧರ್ಮ ಬಹಳ ಮುಖ್ಯ. ಹಲವರು ಧರ್ಮ ಮಾರ್ಗವನ್ನು ಉಲ್ಲಂಘಿಸಿದ ಕಾರಣ ಜೀವನದಲ್ಲಿ ಅಶಾಂತಿ, ಅಸಮಾಧಾನ, ಎಲ್ಲಿ ನೋಡಿದರಲ್ಲಿ ಸಂಘರ್ಷ ಕಾಣುವಂತಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಆಯನೂರು ಸಮೀಪದ ದ್ಯಾವಿನಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಬಾಳೆಹೊನ್ನೂರು ಧರ್ಮಪೀಠ ಯಾವುದೇ ಜಾತಿಯನ್ನು ಪರಿಗಣಿಸದೆ ಸಮಸ್ತ ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ವಿಶ್ವ ಹಿಂದುತ್ವದ ಸಂದೇಶವನ್ನು ನಾಡಿಗೆ ತಿಳಿಸಿದೆ. ಪ್ರಸ್ತುತ ಜಾತಿಗಿಂತ ಧರ್ಮ ಬಹಳ ದೊಡ್ಡದು. ನಾವು ಧರ್ಮ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿದರೆ ನಮ್ಮೆಲ್ಲರ ಜೀವನ ಸುಖಮಯವಾಗಲಿದೆ ಎಂದರು.
ಪ್ರತಿಯೊಬ್ಬರೂ ಜೀವನದಲ್ಲಿ ಧರ್ಮಾಚರಣೆ ಅನುಸರಿಸಬೇಕು. ಧರ್ಮ ಎಂದರೆ ಹಸಿದವನಿಗೆ ಅನ್ನ ಇದ್ದ ಹಾಗೆ. ಬಾಯಾರಿದವನಿಗೆ ನೀರು ಇದ್ದಂತೆ. ಪಕ್ಷಿಗಳಿಗೆ ರೆಕ್ಕೆ ಇದ್ದ ಹಾಗೆ. ಅಂಧನಿಗೆ ಕಣ್ಣು ಇದ್ದ ಹಾಗೆ. ಹೀಗಾಗಿ ಯಾರೂ ಧರ್ಮವನ್ನು ಮರೆಯಬಾರದು. ಪ್ರತಿಯೊಂದು ವಸ್ತುವಿಗೂ ಹೊಣೆಗಾರಿಕೆ ಇದೆ. ಇದನ್ನು ನಿರ್ವಹಿಸಿದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದು ಹೇಳಿದರು.
ಯಡಿಯೂರು ಕ್ಷೇತ್ರದ ಜಗದ್ಗುರು ಶ್ರೀ ರೇಣುಕ ಸ್ವಾಮಿಜಿ, ಹಾರನಹಳ್ಳಿ ರಾಮಲಿಂಗೇಶ್ವರ ಮಠದ ಶ್ರೀ ಕಸ್ತುಭ ಬ್ರಹ್ಮಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಮಳಲಿ ಸಂಸ್ಥಾನ ಮಠದ ಶ್ರೀ ನಾಗಭೂಷಣ ಸ್ವಾಮೀಜಿ, ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ ಇತರರಿದ್ದರು. ಗ್ರಾಮದ ಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೀಗಳು ಪೂಜೆ ಸಲ್ಲಿಸಿದರು.