ಕಾಂಗ್ರೆಸ್ ಸಂಸದ ಶಶಿ ತರೂರ್‌ಗೆ ದೆಹಲಿ ನ್ಯಾಯಾಲಯದಿಂದ ರಿಲೀಫ್; ಮಾನನಷ್ಟ ಮೊಕದ್ದಮೆ ಅರ್ಜಿ ವಜಾ | Shashi Tharoor

Untitled design - 2025-02-04T175919.331
Published on

ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್(Shashi Tharoor) ಅವರಿಗೆ ದೆಹಲಿ ನ್ಯಾಯಾಲಯದಿಂದ ದೊಡ್ಡ ರಿಲೀಫ್ ಸಿಕ್ಕಿದೆ. ಭಾರತೀಯ ಜನತಾ ಪಕ್ಷದ ನಾಯಕ ರಾಜೀವ್ ಚಂದ್ರಶೇಖರ್ ಅವರು ತರೂರ್ ವಿರುದ್ಧ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ನ್ಯಾಯಾಲಯ ಮಂಗಳವಾರ(ಫೆಬ್ರವರಿ 4) ವಜಾಗೊಳಿಸಿದೆ.

ಶಶಿ ತರೂರ್ ಅವರಿಗೆ ಸಮನ್ಸ್ ಜಾರಿ ಮಾಡಲು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪರಾಸ್ ದಲಾಲ್ ನಿರಾಕರಿಸಿದರು. ಮೇಲ್ನೋಟಕ್ಕೆ ದೂರಿನಲ್ಲಿ ಯಾವುದೇ ಮಾನನಷ್ಟದ ಅಂಶ ಕಂಡುಬಂದಿಲ್ಲ ಎಂದು ನ್ಯಾಯಾಧೀಶರು ಹೇಳಿದರು. ರಾಷ್ಟ್ರೀಯ ದೂರದರ್ಶನದ ಸಂದರ್ಶನವೊಂದರಲ್ಲಿ ತರೂರ್ ಸುಳ್ಳು ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ಮಾನಹಾನಿ ಮಾಡಿದ್ದಾರೆ ಎಂದು ಚಂದ್ರಶೇಖರ್ ತಮ್ಮ ದೂರಿನಲ್ಲಿ ಆರೋಪಿಸಿದ್ದರು.

ಶಶಿ ತರೂರ್ ವಿರುದ್ಧದ ಆರೋಪವೇನು?

ಕಳೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವ ಮತ್ತು ತಮ್ಮನ್ನು ಕೆಣಕುವ ಉದ್ದೇಶದಿಂದ ಶಶಿ ತರೂರ್ ಉದ್ದೇಶಪೂರ್ವಕವಾಗಿ ತಮ್ಮ ವಿರುದ್ಧ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಎಂದು ಚಂದ್ರಶೇಖರ್ ಆರೋಪಿಸಿದ್ದರು. ಆರೋಪಿಯ ಆಜ್ಞೆಯ ಮೇರೆಗೆ ಸಂದರ್ಶನವನ್ನು ವಿವಿಧ ಸುದ್ದಿಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪರಿಣಾಮವಾಗಿ ಸಮಾಜದಲ್ಲಿ ನನ್ನ ಖ್ಯಾತಿಗೆ ಧಕ್ಕೆಯಾಯಿತು ಮತ್ತು ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಎದುರಿಸಬೇಕಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ 21ರಂದು ನ್ಯಾಯಾಲಯ ದೂರನ್ನು ಪರಿಗಣಿಸಿತ್ತು. ಇದಕ್ಕೆ ಸಂಬಂಧಿಸಿದ ಬೆಳವಣಿಗೆಯೊಂದರಲ್ಲಿ ದೆಹಲಿ ಹೈಕೋರ್ಟ್ ಸೋಮವಾರ ತರೂರ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಚಂದ್ರಶೇಖರ್ ತಮ್ಮ ಮಾನಹಾನಿ ಮಾಡಿದ್ದಕ್ಕಾಗಿ 10 ಕೋಟಿ ರೂ. ಪರಿಹಾರ ಕೋರಿದ್ದಾರೆ. ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರು ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 28ಕ್ಕೆ ನಿಗದಿಪಡಿಸಿದರು. ಈ ದೂರನ್ನು ಮೊಕದ್ದಮೆಯಾಗಿ ದಾಖಲಿಸಲಿ. ಪ್ರತಿವಾದಿ (ತರೂರ್) ಗೆ ಸಮನ್ಸ್ ಜಾರಿ ಮಾಡಿ. ಏಪ್ರಿಲ್ 28 ರಂದು ಜಂಟಿ ರಿಜಿಸ್ಟ್ರಾರ್ ಮುಂದೆ ಪಟ್ಟಿ ಮಾಡಿ" ಎಂದು ನ್ಯಾಯಾಲಯ ಹೇಳಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net