

ವಾಷಿಂಗ್ಟನ್ ಡಿಸಿ: ಕೆಲಸವು ಮಾನವ ಜೀವನದ ಒಂದು ಪ್ರಮುಖ ಭಾಗವಾಗಿದೆ. ಆದರೆ ಅದು ಎಷ್ಟರ ಮಟ್ಟಿಗೆ ಇರಬೇಕು ಎಂಬುದು ಪ್ರಪಂಚದಾದ್ಯಂತ ಚರ್ಚೆಯಾಗುತ್ತಿದೆ. ಕೆಲವು ದೊಡ್ಡ ಕೈಗಾರಿಕೋದ್ಯಮಿಗಳು ಮತ್ತು ಕಂಪನಿ ಮಾಲೀಕರು ದೀರ್ಘ ಗಂಟೆಗಳ ಕಾಲ ಕೆಲಸ ಮಾಡುವುದನ್ನು ಯಶಸ್ಸಿನ ಕೀಲಿಕೈ ಎಂದು ಪರಿಗಣಿಸುತ್ತಾರೆ. ಆದರೆ ಮತ್ತೊಂದೆಡೆ ಜನರು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸೀಮಿತ ಕೆಲಸದ ಪರವಾಗಿರುತ್ತೇವೆ ಎಂದು ಹೇಳುತ್ತಾರೆ.
ಈ ಚರ್ಚೆಯ ಮಧ್ಯೆ ಟೆಸ್ಲಾ ಸಂಸ್ಥಾಪಕ ಬಿಲಿಯನೇರ್ ಎಲಾನ್ ಮಸ್ಕ್ 120 ಗಂಟೆಗಳ ಕಾಲ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ. ಸದ್ಯ ಎಲಾನ್ ಮಸ್ಕ್ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಕೋಲಾಹಲ ಉಂಟುಮಾಡಿದೆ. ಸಾಮಾಜಿಕ ಜಾಲತಾಣದ ತನ್ನ ಎಕ್ಸ್ ಖಾತೆಯಲ್ಲಿ ಎಲಾನ್ ಮಸ್ಕ್ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ತಂಡವು ವಾರಕ್ಕೆ 120 ಗಂಟೆಗಳ ಕಾಲ ಕೆಲಸ ಮಾಡುತ್ತಿದೆ. ಆದರೆ ಸರ್ಕಾರಿ ನೌಕರರು ಕೇವಲ 40 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಎಲಾನ್ ಮಸ್ಕ್ ಅವರ ಈ ಪೋಸ್ಟ್ ವೈರಲ್ ಆದ ಬಳಿಕ ನೆಟ್ಟಿಗರು ಮಸ್ಕ್ ಅವರ ದೀರ್ಘ ಕಾಲದ ಕೆಲಸದ ಸಮಯದ ನೀತಿಯನ್ನು ಟೀಕಿಸುತ್ತಿದ್ದಾರೆ. ಎಲಾನ್ ಮಸ್ಕ್ ಹೆಚ್ಚು ಸಮಯ ಕೆಲಸ ಮಾಡುವುದನ್ನು ಪ್ರತಿಪಾದಿಸಿದ ಏಕೈಕ ಕೈಗಾರಿಕೋದ್ಯಮಿ ಅಲ್ಲ. ಇದಕ್ಕೂ ಮೊದಲು ಭಾರತದಲ್ಲಿ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ದೇಶದ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುವಂತೆ ಕೇಳಿಕೊಂಡಿದ್ದರು.
ಇದಾದ ನಂತರ ಎಲ್ & ಟಿ ಸಿಇಒ ಎಸ್.ಎನ್.ಸುಬ್ರಮಣ್ಯಂ ಕೂಡ 90 ಗಂಟೆಗಳ ಕೆಲಸದ ಬಗ್ಗೆ ಮಾತನಾಡಿದರು. ಈ ಬಗ್ಗೆ ದೇಶದಲ್ಲಿ ಚರ್ಚೆ ನಡೆಯುತ್ತಿದೆ. ಅದೇ ಸಮಯದಲ್ಲಿ ಇತ್ತೀಚೆಗೆ ಮಂಡಿಸಲಾದ ಆರ್ಥಿಕ ಸಮೀಕ್ಷೆಯು ವಾರಕ್ಕೆ 60 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುವುದರಿಂದ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ಸ್ಪಷ್ಟವಾಗಿ ಹೇಳುತ್ತದೆ.(ಏಜೆನ್ಸೀಸ್)