3 ತಿಂಗಳ ಭೀಕರ ಕಾಡ್ಗಿಚ್ಚಿನ ನಂತರ ವರುಣನ ಕೃಪೆ: ಮಳೆಯಲ್ಲೇ ಅಡ್ಡಬಿದ್ದು ಕೈಮುಗಿದು ಕಣ್ಣೀರಿಟ್ಟ ಅಗ್ನಿಶಾಮಕ ಸಿಬ್ಬಂದಿ | Indonesia Rain

ಇಂಡೋನೇಷ್ಯಾದಲ್ಲಿ ಸುದೀರ್ಘ ಬರ ಹಾಗೂ ಕಾಡ್ಗಿಚ್ಚಿನಿಂದ ಕಂಗೆಟ್ಟಿದ್ದ ಪ್ರದೇಶದಲ್ಲಿ ಹಠಾತ್ತನೆ ಭಾರಿ ಮಳೆ ಸುರಿದಿದೆ. ಹೀಗಾಗಿ ಅಗ್ನಿಶಾಮಕ ಸಿಬ್ಬಂದಿ, ಸುರಿಯುವ ಮಳೆಯಲ್ಲೇ ಮಂಡಿಯೂರಿ ದೇವರಿಗೆ ಕೃತಜ್ಞತೆ ಸಲ್ಲಿಸಿರುವ ಹೃದಯಸ್ಪರ್ಶಿ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Indonesia rain, Fire fighter video
ಮಳೆ ಬರುತ್ತಿದ್ದಂತೆ ನೆಲಕ್ಕೆ ಅಡ್ಡಬಿದ್ದು ದೇವರಿಗೆ ಧನ್ಯವಾದ ಹೇಳಿದ ಅಗ್ನಿಶಾಮಕ ಸಿಬ್ಬಂದಿ
Published on: 

Indonesia rain video: ಕಳೆದ ಕೆಲವು ತಿಂಗಳುಗಳಿಂದ ಭೀಕರ ಕಾಡ್ಗಿಚ್ಚಿಗೆ ತುತ್ತಾಗಿ ನಲುಗಿಹೋಗಿದ್ದ ಇಂಡೋನೇಷ್ಯಾದಲ್ಲಿ ಹಠಾತ್ತನೆ ಸುರಿದ ಭಾರಿ ಮಳೆ ಜನರ ಮುಖದಲ್ಲಿ ನಗು ಮೂಡಿಸಿದೆ. ತಿಂಗಳುಗಳ ಕಾಲ ಬೆಂಕಿಯೊಂದಿಗೆ ಹೋರಾಡಿ ದಣಿದಿದ್ದ ಅಗ್ನಿಶಾಮಕ ಸಿಬ್ಬಂದಿ, ಮಳೆ ಬಂದ ತಕ್ಷಣ ಭಾವುಕರಾಗಿ ದೇವರಿಗೆ ಧನ್ಯವಾದ ಅರ್ಪಿಸಿದ ಹೃದಯಸ್ಪರ್ಶಿ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇಂಡೋನೇಷ್ಯಾದ ಸೌತ್ ಕಾಲಿಮಂಟನ್ ಪ್ರಾಂತ್ಯದ ಬಂಜಾರ್ ರೆಜೆನ್ಸಿಯ ಅಸ್ತಂಬುಲ್ ಪ್ರದೇಶದಲ್ಲಿ ಕಳೆದ ಮೂರರಿಂದ ನಾಲ್ಕು ತಿಂಗಳಿಂದ ಭೀಕರ ಕಾಡ್ಗಿಚ್ಚು ಹಾಗೂ ಬರಗಾಲ ತಲೆದೋರಿತ್ತು. ವಿಶೇಷವೆಂದರೆ, ಸತತ 60 ದಿನಗಳಿಗೂ ಹೆಚ್ಚು ಕಾಲ ಈ ಭಾಗದಲ್ಲಿ ಒಂದು ಹನಿ ಮಳೆಯೂ ಬಿದ್ದಿರಲಿಲ್ಲ.

ಕಾಡ್ಗಿಚ್ಚಿನಿಂದ ನೀರಿನ ಕೊರತೆ

ಇನ್ನು, ಭೀಕರ ಕಾಡ್ಗಿಚ್ಚಿನ ಪರಿಣಾಮ ದಟ್ಟವಾದ ಹೊಗೆ, ವಿಪರೀತ ಸೆಕೆ ಹಾಗೂ ನೀರಿನ ತೀವ್ರ ಹಾಹಾಕಾರದ ನಡುವೆಯೂ ಅಲ್ಲಿನ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ವಯಂಸೇವಕರು ಹಗಲಿರುಳು ಕಷ್ಟಪಟ್ಟು ಕಾಡ್ಗಿಚ್ಚನ್ನು ನಂದಿಸಲು ಶ್ರಮಿಸುತ್ತಿದ್ದರು.

ಮಳೆಯಲ್ಲೇ ಮಂಡಿಯೂರಿ ಕೃತಜ್ಞತೆ ಸಲ್ಲಿಸಿದ ಸಿಬ್ಬಂದಿ

ದೀರ್ಘಕಾಲದ ಹೋರಾಟದಿಂದ ಸಂಪೂರ್ಣವಾಗಿ ದಣಿದಿದ್ದ ಅಗ್ನಿಶಾಮಕ ಸಿಬ್ಬಂದಿಗೆ, ಹಠಾತ್ತನೆ ಸುರಿದ ಭಾರಿ ಮಳೆ ದೊಡ್ಡ ನೆಮ್ಮದಿಯನ್ನು ತಂದುಕೊಟ್ಟಿತು. ಮಳೆ ಜೋರಾಗಿ ಸುರಿಯುತ್ತಿದ್ದಂತೆ ಕಾಡ್ಗಿಚ್ಚು ತಣ್ಣಗಾಗಲು ಆರಂಭಿಸಿತು.

ಇದನ್ನೂ ಓದಿ: LPG ಮತ್ತು PNG ಸಂಪರ್ಕಕ್ಕೆ ಹೊಸ ನಿಯಮ: ನೀವಿದನ್ನು ತಿಳಿದುಕೊಳ್ಳಲೇಬೇಕು! | Gas Booking Rules

ತಿಂಗಳುಗಳ ಹೋರಾಟದ ಬಳಿಕ ಸಿಕ್ಕ ಈ ದೊಡ್ಡ ನೆಮ್ಮದಿಗೆ ಅಗ್ನಿಶಾಮಕ ಸಿಬ್ಬಂದಿ ಸಂಪೂರ್ಣ ಭಾವುಕರಾದರು. ಸುರಿಯುವ ಮಳೆಯಲ್ಲೇ ನೆಲಕ್ಕೆ ಅಡ್ಡಬಿದ್ದು ದೇವರಿಗೆ ಧನ್ಯವಾದ ಅರ್ಪಿಸಿದರು. ಈ ಕಣ್ಣೀರು ತರಿಸುವಂತಹ ಹೃದಯಸ್ಪರ್ಶಿ ದೃಶ್ಯದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net