62ನೇ ವಸಂತಕ್ಕೆ ಕಾಲಿಟ್ಟ ನೀತಾ ಅಂಬಾನಿ: ಲಕ್ಷಾಂತರ ಮಂದಿಯ ಜೀವನ ಬದಲಿಸಿದ ಆದರ್ಶ ನಾರಿಗೆ ಅಭಿನಂದನೆಗಳ ಮಹಾಪೂರ! Nita Ambani

Nita Ambani
Published on

ಮುಂಬೈ: ನೀತಾ ಅಂಬಾನಿ... ( Nita Ambani ) ಈ ಹೆಸರಿಗೆ ಪರಿಚಯದ ಅಗತ್ಯವೇ ಇಲ್ಲ. ಏಕೆಂದರೆ, ಇವರು ದೇಶದ ಶ್ರೀಮಂತ ಮಹಿಳೆ ಮಾತ್ರವಲ್ಲ, ಕಷ್ಟದಲ್ಲಿದ್ದವರಿಗೆ ಸ್ಪಂದಿಸುವ ಉದಾರದಾನಿಯೂ ಹೌದು. ರಿಲಯನ್ಸ್ ಫೌಂಡೇಷನ್‌ನ ಸ್ಥಾಪಕರಾಗಿ, ಉದ್ಯಮ, ಶಿಕ್ಷಣ, ಆರೋಗ್ಯ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅವರ ಅದ್ಭುತ ಕೊಡುಗೆಗಳು ಲಕ್ಷಾಂತರ ಜನರ ಜೀವನವನ್ನೇ ಬದಲಾಯಿಸಿದೆ. ತಮ್ಮ ಶಿಸ್ತು, ಸೌಂದರ್ಯ ಮತ್ತು ಸಮಾಜಮುಖಿ ಕಾರ್ಯಗಳಿಂದ ಪರಿಪೂರ್ಣ ಮಹಿಳೆ ಎನಿಸಿಕೊಂಡಿರುವ ನೀತಾ ಅಂಬಾನಿ ಅವರು ಒಂದು ಆದರ್ಶ ಜೀವನದ ಉದಾಹರಣೆ ಎಂದರೆ ಅತಿಶಯೋಕ್ತಿಯಲ್ಲ. ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡು ಉದ್ಯಮದ ಜೊತೆಜೊತೆಗೆ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ನೀತಾ ಅಂಬಾನಿ ಅವರು ಇಂದು 62ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಅನೇಕ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಸಾಮಾನ್ಯ ಕುಟುಂಬದಲ್ಲಿ ಜನಿಸಿ ಇಂದು ದೇಶದ ಅತ್ಯಂತ ಪ್ರಭಾವಿ ಮಹಿಳೆಯಾಗಿ ಬೆಳೆದುಬಂದ ಅವರ ಹಾದಿ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದೆ. ಹೀಗಾಗಿ ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಜೀವನದ ಹಾದಿಯನ್ನು ಒಮ್ಮೆ ತಿರುಗಿ ನೋಡೋಣ.

ನೀತಾ ಅಂಬಾನಿ ಅವರು ಮುಂಬೈನ ಒಂದು ಸಾಮಾನ್ಯ ಗುಜರಾತಿ ಕುಟುಂಬದಲ್ಲಿ 1963, ನವೆಂಬರ್ 1ರಂದು ಜನಿಸಿದರು. ರವಿಂದ್ರಭಾಯಿ ದಲಾಲ್ ಮತ್ತು ಪೂರ್ಣಿಮಾ ದಲಾಲ್‌ರ ಪುತ್ರಿಯಾಗಿ ಬೆಳೆದರು. ನರಸೀ ಮಂಜಿ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್‌ನಿಂದ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದ ನೀತಾ ಅವರು, ಬಾಲ್ಯದಿಂದಲೇ ಭರತನಾಟ್ಯದಲ್ಲಿ ತರಬೇತಿ ಪಡೆದು ವೃತ್ತಿಪರ ನೃತ್ಯಗಾರ್ತಿಯಾಗಿ ಗುರುತಿಸಿಕೊಂಡರು. 1985ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ವಿವಾಹವಾದರು. ನೀತಾ ಅಂಬಾನಿ ಅವರ ಕುಟುಂಬದ ಆಸ್ತಿ ಮೌಲ್ಯ 117.8 ಬಿಲಿಯನ್ ಡಾಲರ್‌ಗಳನ್ನು ಮೀರಿದ್ದು, ವಿಶ್ವದ ಅತ್ಯಂತ ಧನಿಕ ಕುಟುಂಬಗಳಲ್ಲಿ ಒಂದಾಗಿದೆ.

ಸಾಮಾಜಿಕ ಜವಾಬ್ದಾರಿ ಮರೆಯಲಿಲ್ಲ

ನೀತಾ ಅಂಬಾನಿ ಅವರ ಜೀವನ ಐಷಾರಾಮಿಯಿಂದ ಕೂಡಿದ್ದರೂ ಸಾಮಾಜಿಕ ಜವಾಬ್ದಾರಿಯನ್ನು ಮಾತ್ರ ಅವರು ಮರೆಯಲಿಲ್ಲ. 2010ರಲ್ಲಿ ಅವರು ಸ್ಥಾಪಿಸಿದ ರಿಲಯನ್ಸ್ ಫೌಂಡೇಷನ್‌ನ ಅಧ್ಯಕ್ಷರಾಗಿ, ಭಾರತದ ಅಭಿವೃದ್ಧಿಗೆ ಅಡಿಪಾಯ ಹಾಕಿದರು. ಈ ಸಂಸ್ಥೆಯ ಮೂಲಕ 5.75 ಕೋಟಿಗೂ ಹೆಚ್ಚು ಜನರ ಜೀವನಗಳನ್ನು ಬದಲಾಯಿಸಿದ್ದಾರೆ. ಇದರಲ್ಲಿ ಶಿಕ್ಷಣ, ಆರೋಗ್ಯ, ಗ್ರಾಮೀಣ ಅಭಿವೃದ್ಧಿ, ಕ್ರೀಡೆ ಮತ್ತು ಮಹಿಳಾ ಸಬಲೀಕರಣದಂತಹ ಕ್ಷೇತ್ರಗಳೂ ಸೇರಿವೆ. ಈ ವರ್ಷದ ಅಕ್ಟೋಬರ್‌ ತಿಂಗಳಲ್ಲಿ ಪ್ರಕಟವಾದ ಒಂದು ವರದಿಯ ಪ್ರಕಾರ, ರಿಲಯನ್ಸ್ ಫೌಂಡೇಷನ್‌ ಅನೇಕ ಕಾರ್ಯಕ್ರಮಗಳು 2.15 ಕೋಟಿ ಜನರಿಗೆ ನೇರವಾಗಿ ಪ್ರಯೋಜನ ನೀಡಿವೆ.

ಸಮಾಜಮುಖಿ ಸೇವೆಗಳು

ನೀತಾ ಅಂಬಾನಿ ಅವರ ಪರೋಪಕಾರ ಸೇವೆಗಳು ರಿಲಯನ್ಸ್ ಫೌಂಡೇಷನ್‌ ಪ್ರಮುಖ ಉದ್ದೇಶವಾಗಿದೆ. ಈ ಸಂಸ್ಥೆಯು ಭಾರತದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿದೆ. ವಿಶೇಷವಾಗಿ ಆರೋಗ್ಯ, ಗ್ರಾಮೀಣ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣದಲ್ಲಿ ಪ್ರಮುಖ ಪಾತ್ರವಹಿಸಿದೆ. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ, ಈ ಫೌಂಡೇಷನ್ ಭಾರತದ ಆಕ್ಸಿಜನ್ ಉತ್ಪಾದನೆಯ ಶೇ. 11ಕ್ಕೂ ಹೆಚ್ಚು ಪೂರೈಸಿತು. ಸಂಕಷ್ಟದ ಕಾಲದಲ್ಲಿ ಇವರ ಸಹಾಯ ಜಾಗತಿಕ ಮನ್ನಣೆ ಸಹ ಪಡೆಯಿತು. ಇನ್ನು ಮಹಿಳಾ ಸಬಲೀಕರಣಕ್ಕಾಗಿ 2022ರಲ್ಲಿ 'ಹರ್ ಸರ್ಕಲ್' ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ನೀತಾ ಅಂಬಾನಿ ಅವರು ಪ್ರಾರಂಭಿಸಿದ್ದಾರೆ. ಇದು ಮಹಿಳೆಯರಿಗೆ ಸುರಕ್ಷಿತ ಸಂವಾದ ಮತ್ತು ಸಾಮಾಜಿಕ ನೆಟ್‌ವರ್ಕಿಂಗ್ ಅವಕಾಶ ನೀಡುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಸ್ವಯಂ ಉದ್ಯೋಗ ಮತ್ತು ಆರ್ಥಿಕ ಸ್ವಾವಲಂಬನೆಗಾಗಿ ನಡೆಸುವ ಕಾರ್ಯಕ್ರಮಗಳು ಕೊಡುಗೆಯ ಮಹತ್ವವನ್ನು ತೋರುತ್ತವೆ.

ಕ್ರೀಡಾ ಕ್ಷೇತ್ರಕ್ಕೆ ಬೆಳಕಾದ ನೀತಾ

ಕ್ರೀಡೆಯಲ್ಲಿ ನೀತಾ ಅಂಬಾನಿ ಅವರ ಪಾತ್ರವು ಅನನ್ಯ. ಐಪಿಎಲ್ ತಂಡ ಮುಂಬೈ ಇಂಡಿಯನ್ಸ್‌ನ ಸಹ-ಮಾಲೀಕರಾಗಿ, ಅವರು 2013, 2015, 2017, 2019 ಮತ್ತು 2020ರಲ್ಲಿ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ರಿಲಯನ್ಸ್ ಫೌಂಡೇಷನ್‌ನ ಕ್ರೀಡಾ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ, ಅವಕಾಶ ವಂಚಿತ ಯುವಕರಿಗೆ ಅವಕಾಶ ನೀಡುತ್ತಿದ್ದಾರೆ. 2016ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿ (IOC)ಯ ಮೊದಲ ಭಾರತೀಯ ಮಹಿಳಾ ಸದಸ್ಯರಾಗಿ ಆಯ್ಕೆಯಾಗಿದ್ದು, 2017ರಲ್ಲಿ ಒಲಿಂಪಿಕ್ ಚಾನಲ್ ಕಮಿಷನ್‌ಗೆ ನೇಮಕಗೊಂಡರು. 2017ರಲ್ಲಿ ರಾಷ್ಟ್ರೀಯ ಕ್ರೀಡಾ ಪ್ರೋತ್ಸಾಹ ಪುರಷ್ಕಾರ ಪಡೆದಿದ್ದಾರೆ.

ಕಲೆ ಮತ್ತು ಸಂಸ್ಕೃತಿಗೆ ನೀತಾ ಕೊಡುಗೆ ಅನನ್ಯ

ನೀತಾ ಅಂಬಾನಿ ಅವರು ಕಲೆಯ ಪೋಷಕರಾಗಿಯೂ ಗುರುತಿಸಿಕೊಂಡಿದ್ದಾರೆ. 2023ರಲ್ಲಿ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನೀತಾ ಮುಖೇಶ್ ಅಂಬಾನಿ ಕಲಾ ಕೇಂದ್ರ (NMACC) ಅನ್ನು ಉದ್ಘಾಟಿಸಿದ್ದಾರೆ. ಇದರಲ್ಲಿ ಪ್ರದರ್ಶನ ಸ್ಥಳಗಳು, ಥಿಯೇಟರ್‌ಗಳು (2,000 ಸೀಟ್‌ಗಳ ಗ್ರ್ಯಾಂಡ್ ಥಿಯೇಟರ್ ಸಹ) ಮತ್ತು ಕಲಾ ಶಿಕ್ಷಣ ಕಾರ್ಯಕ್ರಮಗಳು ಸೇರಿವೆ. 2015ರಿಂದ 2024ರವರೆಗೆ ಮುಂಬೈ ಅಕಾಡೆಮಿ ಆಫ್ ಮೂವಿಂಗ್ ಇಮೇಜ್‌ನ ಬೋರ್ಡ್ ಸದಸ್ಯರಾಗಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ, 2016ರಲ್ಲಿ ಫೋರ್ಬ್ಸ್‌ನ 'ಏಷ್ಯಾದ ಅತ್ಯಂತ ಪ್ರಭಾವಶಾಲಿ ಮಹಿಳಾ ವ್ಯಾಪಾರ ನಾಯಕರು' ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. 2017ರಲ್ಲಿ ನ್ಯೂಯಾರ್ಕ್ ಮೆಟ್ ಮ್ಯೂಸಿಯಂನಿಂದ ಸಮಾಜ ಸೇವೆಗಾಗಿ ಗೌರವ ಪಡೆದರು.

ಶಿಕ್ಷಣಕ್ಕೆ ಕೊಡುಗೆ

ನೀತಾ ಅಂಬಾನಿ ಅವರ ಶಿಕ್ಷಣದ ಬಗ್ಗೆ ಆಸಕ್ತಿಯು ಅವರ ವೃತ್ತಿಯ ಆರಂಭದಿಂದಲೇ ಕಂಡುಬರುತ್ತದೆ. ಏಕೆಂದರೆ, ಆರಂಭದಲ್ಲಿ ಅವರು ಶಿಕ್ಷಕಿಯಾಗಿ ಕೆಲಸ ಮಾಡಿದ್ದರು. 2003ರಲ್ಲಿ ಸ್ಥಾಪಿಸಿದ ಧೀರೂಭಾಯ್ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ (DAIS) ಅವರ ಕನಸಿನ ಸಾಕಾರ. ಈ ಶಾಲೆಯು ಭಾರತದ ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದ್ದು, 2019ರಲ್ಲಿ ಅಂತಾರಾಷ್ಟ್ರೀಯ ಬ್ಯಾಕಲ್ಯೂರಿಯೇಟ್ (IB) ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿತ್ತು. ಇದರಲ್ಲಿ ವೈಜ್ಞಾನಿಕ ಸೌಲಭ್ಯಗಳು ಮತ್ತು ಸೇವೆಗಳು ಅತ್ಯುತ್ತಮವಾಗಿವೆ. ಇದಲ್ಲದೆ, ರಿಲಯನ್ಸ್ ಫೌಂಡೇಷನ್‌ನ ಮೂಲಕ, ಅವರು 'ಎಡ್ಯುಕೇಷನ್ ಅಂಡ್ ಸ್ಪೋರ್ಟ್ಸ್ ಫಾರ್ ಆಲ್' (ESA) ಕಾರ್ಯಕ್ರಮವನ್ನು ಜಾರಿಗೊಳಿಸಿದ್ದಾರೆ. ಈ ಯೋಜನೆಯು ಅವಕಾಶ ವಂಚಿತ ಮಕ್ಕಳಿಗೆ ಶಿಕ್ಷಣ ಮತ್ತು ಕ್ರೀಡೆಯ ಅವಕಾಶಗಳನ್ನು ಒದಗಿಸುತ್ತದೆ. 1 ಲಕ್ಷಕ್ಕೂ ಹೆಚ್ಚು ಮಕ್ಕಳು ಈ ಕಾರ್ಯಕ್ರಮದಿಂದ ಪ್ರಯೋಜನ ಪಡೆದಿದ್ದಾರೆ.

ನೀತಾ ಅಂಬಾನಿ ಅವರ ಸಾಧನೆಗಳು ಮತ್ತು ಕೊಡುಗೆಗಳು ಭಾರತೀಯ ಮಹಿಳೆಯ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುತ್ತವೆ. ಅವರ ದೂರದೃಷ್ಟಿ ಮತ್ತು ಅಚಲ ಪ್ರಯತ್ನಗಳು ಲಕ್ಷಾಂತರ ಜೀವಗಳನ್ನು ಬದಲಾಯಿಸಿವೆ. 62ನೇ ಜನ್ಮದಿನದಂದು, ಇಂತಹ ಮಹಾನ್​ ನಾಯಕಿಗೆ ಶುಭಾಶಯಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net