

| ಪದ್ಮನಾಭ ರಾವ್ (74 ವರ್ಷ)
ಬೆನ್ನುನೋವಿಗೆ ಹಲವಾರು ಕಾರಣಗಳಿವೆ. ಯೋಗವು ಮನಸ್ಸು-ದೇಹದ ಚಿಕಿತ್ಸೆಯಾಗಿದ್ದು ಬೆನ್ನುನೋವಿಗೆ ಮಾತ್ರವಲ್ಲದೆ ಜೊತೆಗಿನ ಒತ್ತಡಕ್ಕೂ ಚಿಕಿತ್ಸೆ ನೀಡಲು ಶಿಫಾರಸ್ಸು ಮಾಡಲಾಗುತ್ತದೆ. ಸೂಕ್ತವಾಗಿ ಭಂಗಿಗಳು ನಿಮ್ಮ ದೇಹವನ್ನು ವಿಶ್ರಾಂತಿ ಮತ್ತು ಬಲಪಡಿಸಬಹುದು.
ಬೆನ್ನುನೋವಿಗೆ ಯೋಗ ಚಿಕಿತ್ಸೆ: ನಿರ್ದಿಷ್ಟ ಸ್ನಾಯುಗಳ ಶಕ್ತಿಯನ್ನು ಹೆಚ್ಚಿಸಲು ಯೋಗ ಸಹಾಯ ಮಾಡುತ್ತದೆ. ಆಯ್ದ ಯೋಗಾಸನಗಳ ನಿತ್ಯ ಅಭ್ಯಾಸದಿಂದ ಬೆನ್ನು ಮತ್ತು ಕಿಬ್ಬೊಟ್ಟೆಯ ಸ್ನಾಯುಗಳು ಬಲಯುತವಾಗುತ್ತವೆ. ಇದು ದೇಹವು ಸರಿಯಾದ ನೆಟ್ಟಗೆ ಇರುವ ಭಂಗಿ ಮತ್ತು ಚಲನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಸ್ನಾಯುಗಳು ಉತ್ತಮ ಸ್ಥಿತಿಯಲ್ಲಿದ್ದಾಗ ಬೆನ್ನುನೋವು ಬಹಳ ಕಡಿಮೆಯಾಗುತ್ತದೆ.
ಯೋಗದಲ್ಲಿ ಹಿಗ್ಗಿಸುವಿಕೆ ಮತ್ತು ವಿಶ್ರಾಂತಿಯ ಭಂಗಿಗಳಿವೆ. ಇದು ಒತ್ತಡವನ್ನು ಹೊತ್ತ ಸ್ನಾಯುಗಳಲ್ಲಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಯೋಗದ ಆಸನಗಳಲ್ಲಿ ಕೆಲವು ಸ್ನಾಯುಗಳು ಬಾಗುತ್ತವೆ ಮತ್ತು ವಿಸ್ತರಿಸುತ್ತವೆ. ಯೋಗವು ದೇಹದ ಎರಡೂ ಬದಿಗಳನ್ನು ಸಮಾನವಾಗಿ ಹಿಗ್ಗಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ. ಬೆನ್ನು ಮೂಳೆಯ ನೈಸರ್ಗಿಕ ವಕ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಯೋಗತಜ್ಞರ ಮೇಲ್ವಿಚಾರಣೆಯಲ್ಲಿ ಆಸನವನ್ನು ಪ್ರಾರಂಭಿಸಿ.
ಸೂಚಿತ ಅಸನಗಳು: ತಾಡಾಸನ, ಅರ್ಧಚಕ್ರಾಸನ, ಕಟಿಚಕ್ರಾಸನ, ಪರ್ವತಾಸನ, ವಜ್ರಾಸನ, ಮಾರ್ಜಾಲಾಸನ, ವಕ್ರಾಸನ, ಭಾರದ್ವಾಜಾಸನ, ಉತ್ಥಿತ ಏಕಪಾದಾಸನ, ಸೇತುಬಂಧಾಸನ, ಮಕರಾಸನ, ಏಕಪಾದಾಸನ, ಶಲಭಾಸನ, ಶವಾಸನ, ಜೊತೆಯಲ್ಲಿ ನೀವು ಅಭ್ಯಾಸ ಮಾಡುವ ಪ್ರಾಣಾಯಾಮ ಮುಂದುವರಿಸಿ. ಆರಂಭದಲ್ಲಿ ಸಾಧ್ಯವಾಗುವ ಯೋಗಾಸನಗಳನ್ನು ಮಾತ್ರ ಮಾಡಿ.
| ವಿಶ್ವ ರಾವ್, ತುಮಕೂರು (38 ವರ್ಷ)
ಈ ಆಸನಕ್ಕೆ ಸಿಡಿಲ ಭಂಗಿ ಎಂಬ ಹೆಸರಿದೆ. ದೇಹವನ್ನು ವಜ್ರದಂತೆ ಕಾಪಾಡುವ ಭಂಗಿ ವಜ್ರಾಸನ.
ವಿಧಾನ: ಜಮಖಾನದ ಮೇಲೆ ಎರಡೂ ಕಾಲುಗಳನ್ನು ಹಿಂದಕ್ಕೆ ನಿಧಾನವಾಗಿ ಮಡಚಿ ಕುಳಿತುಕೊಳ್ಳಿ. ಕಾಲ ಹೆಬ್ಬೆರಳು ಒಂದಕ್ಕೊಂದು ತಗಲುವಂತಿರಲಿ. ಕೈಗಳನ್ನು ನೇರವಾಗಿ ಚಾಚಿ ಆಯಾ ಮಂಡಿಗಳ ಮೇಲಿರಿಸಿ. ಕೈಗಳು ಚಿನ್ಮುದ್ರೆಯಲ್ಲಿರಲಿ. ಬೆನ್ನು, ಕುತ್ತಿಗೆ, ತಲೆ ನೇರವಾಗಿರಲಿ. ಈ ಆಸನದಲ್ಲಿ ಸಮ ಉಸಿರಾಟ ನಡೆಸುತ್ತ ಒಂದರಿಂದ ಮೂರು ನಿಮಿಷಗಳವರೆಗೆ ಇರಿ. ಈ ಸ್ಥಿತಿಯಲ್ಲಿ ಆಂತರಿಕ ವಿಷಯಗಳಾದ ಶ್ವಾಸೋಚ್ಛಾ್ವಸವನ್ನು ಗಮನಿಸುತ್ತ ಸುಮಾರು 5ರಿಂದ 10 ನಿಮಿಷ ಕಾಲ ಧ್ಯಾನದ ಸ್ಥಿತಿಯಲ್ಲಿ ಇರಿ. ಆ ಮೇಲೆ ವಿಶ್ರಮಿಸಿ.
ಪ್ರಯೋಜನ: ಜೀರ್ಣಕ್ರಿಯೆ ಸುಧಾರಣೆ, ಮಲಬದ್ಧತೆ ನಿಯಂತ್ರಣ. ಬೆನ್ನು ಬಲಗೊಳ್ಳಲು ಸಹಾಯ ಮಾಡುತ್ತದೆ. ಸಯಾಟಿಕ ರೋಗಿಗಳಿಗೆ ಅನುಕೂಲವಾಗುತ್ತದೆ. ಕಾಲಿನ ಪಾದಗಳ ಮಣಿಗಂಟು ಮತ್ತು ಮಂಡಿನೋವು ನಿಯಂತ್ರಣ. ವಜ್ರಾಸನದಲ್ಲಿ ಕುಳಿತುಕೊಂಡು ಪ್ರಾರ್ಥನೆ, ಪ್ರಾಣಾಯಾಮ, ಓಂಕಾರ ಧ್ಯಾನ ಇತ್ಯಾದಿ ಅಭ್ಯಾಸ ಮಾಡಬಹುದಾಗಿದೆ.
ಸೂಚನೆ: ತೀವ್ರ ಮಂಡಿನೋವು ಇದ್ದವರು ಅಭ್ಯಾಸ ಮಾಡುವುದು ಬೇಡ. ಆರಂಭದಲ್ಲಿ ಜಮಖಾನೆ ಮೇಲೆ ಮೆತ್ತಗಿನ ತಲೆದಿಂಬು ಇಟ್ಟು ಅಭ್ಯಾಸ ಮಾಡುವುದು ಕ್ಷೇಮ.