

ಬೆಂಗಳೂರು: ರಾಜ್ಯಾದ್ಯಂತ ಸೆ.2ರಿಂದ ‘ಎಲ್ಲಿ ಬೇಕಾದರೂ’ (ಎನಿವ್ಹೇರ್) ಆಸ್ತಿ ನೋಂದಣಿ ಯೋಜನೆ ಜಾರಿಗೊಳಿಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸಜ್ಜಾಗಿದೆ. ಈಗಾಗಲೆ ತುಮಕೂರು ಮತ್ತು ಬೆಳಗಾವಿ ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿ ಪ್ರಯೋಗಿಕವಾಗಿ ಜಾರಿ ಯಶಸ್ವಿಯಾಗಿರುವುದರಿಂದ ಈ ಕ್ರಮಕ್ಕೆ ಮುಂದಾಗಿದೆ.
ಜಿಲ್ಲೆ ವ್ಯಾಪ್ತಿಯಲ್ಲಿರುವ ಯಾವುದಾದರೂ ಉಪ ನೋಂದಣಿ ಕಚೇರಿಯಲ್ಲಿ ದಸ್ತಾವೇಜು ನೋಂದಣಿ ಮಾಡಿಸಿಕೊಳ್ಳಬಹುದು. ಇದಕ್ಕೂ ಮೊದಲು ಆಸ್ತಿ ಇರುವ ವಿಳಾಸ ಯಾವ ಸಬ್ ರಿಜಿಸ್ಟ್ರಾರ್ ಕಚೇರಿಗೆ ಸೇರುತ್ತೋ ಅಲ್ಲಿಗೇ ಹೋಗಿ ನೋಂದಣಿ ಮಾಡಿಸಿಕೊಳ್ಳಬೇಕಿತ್ತು. ಇದರಿಂದ ಕೆಲ ಕಚೇರಿಗಳ ಮೇಲೆ ಒತ್ತಡ ಮತ್ತು ಸಾರ್ವಜನಿಕರಿಗೂ ಅನಾನೂನುಕೂಲ ಆಗುತ್ತಿತ್ತು.
ಜನಸ್ನೇಹಿ ಸೇವೆ ಮತ್ತು ಕೆಲಸದೊತ್ತಡ ತಗ್ಗಿಸಲು ಬೆಂಗಳೂರು ನಗರ ಜಿಲ್ಲೆಯಲ್ಲಿ ಮೊದಲು ಎನಿವ್ಹೇರ್ ರಿಜಿಸ್ಟ್ರೇಷನ್ ಯೋಜನೆ ಜಾರಿಗೆ ತರಲಾಯಿತು. ಇದಾದ ಮೇಲೆ ತುಮಕೂರು ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಪ್ರಯೋಗಿಕವಾಗಿ ಜಾರಿಗೆ ತಂದಿದ್ದು, ರಾಜ್ಯವ್ಯಾಪಿ ವಿಸ್ತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 257 ಉಪ ನೋಂದಣಾಧಿಕಾರಿ ಕಚೇರಿಗಳು ಕೆಲಸ ನಿರ್ವಹಿಸುತ್ತಿವೆ. ಆಧುನಿಕ ತಂತ್ರಜ್ಞಾನದಿಂದ ಆಯಾ ಜಿಲ್ಲೆ ವ್ಯಾಪ್ತಿಯ ಯಾವುದಾದರೊಂದು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಸ್ತಾವೇಜು ನೋಂದಣಿಗೆ ಅವಕಾಶ ಕಲ್ಪಿಸಲಿದ್ದು, ಪ್ರಕ್ರಿಯೆ ಸುಲಲಿತವಾಗಲಿದೆ ಎಂಬ ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಿಂದ ಸಾರ್ವಜನಿಕರು ತಮಗೆ ಅನುಕೂಲ ಇರುವ ಕಚೇರಿಗೆ ಹೋಗಿ ಸೇವೆ ಪಡೆಯಬಹುದು. ಒಂದೇ ಕಚೇರಿಗೆ ಹೋಗಬೇಕೆಂದು ನಿಯಮ ಇಲ್ಲ. ಜಿಲ್ಲೆಯಲ್ಲಿ ಇರುವ ಯಾವುದೇ ಕಚೇರಿಯಲ್ಲಿ ದಸ್ತಾವೇಜು ನೋಂದಣಿ ಮಾಡಿಕೊಳ್ಳಬಹುದು.
ನಕಲಿ ಗುರುತಿನ ಚೀಟಿ, ದಾಖಲೆಗಳನ್ನು ಬಳಸಿಕೊಂಡು ಯಾರದ್ದೋ ಆಸ್ತಿಯನ್ನು ಬೇರೆ ಯಾರೋ ನೋಂದಣಿ ಮಾಡಿಕೊಂಡು, ಇನ್ನ್ಯಾರಿಗೋ ಮಾರಾಟ ಮಾಡುವ ಬಗ್ಗೆ ವ್ಯಾಪಕ ದೂರುಗಳು ಬಂದಿದ್ದವು. ಜಮೀನಿನ ವ್ಯವಸ್ಥಿತ ದರೋಡೆಯಿಂದ ನೈಜ ಮಾಲೀಕರು ಅಥವಾ ಖರೀದಿಸಿದವರು ವಂಚನೆಗೆ ಒಳಗಾಗುತ್ತಿದ್ದರು. ವ್ಯವಸ್ಥಿತ ವಂಚನೆ ದಂಧೆಗೆ ಕಡಿವಾಣ ಹಾಕಲು ತಂತ್ರಜ್ಞಾನ ಬಳಸಿ ಮೂರು ತಾಲೂಕುಗಳಲ್ಲಿ ವ್ಯಕ್ತಿತ್ವ ಗುರುತು ದೃಢೀಕರಣದ ಪ್ರಯೋಗವಾಗಿತ್ತು. ಪ್ರಾಯೋಗಿಕ ಜಾರಿ ಸಲವಾಗಿದೆ. ಜಮೀನಿನ ಮಾಲೀಕರ ಸುರಕ್ಷತೆ, ವಿಶ್ವಾಸಪೂರ್ಣ ಆಸ್ತಿ ವಹಿವಾಟು ದೃಷ್ಟಿಯಿಂದ ಕ್ರಮವಹಿಸಲಾಗಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಆಧಾರ್, ಪ್ಯಾನ್ ಜತೆಗೆ ಪಾಸ್‌ಪೋರ್ಟ್ :
ಆಧುನಿಕ ತಂತ್ರಜ್ಞಾನ ಬಳಸಿ ಜಮೀನು ಮಾಲೀಕತ್ವದ ಸುರಕ್ಷತೆ, ವಂಚನೆ ಮುಕ್ತ ನೋಂದಣಿ ವ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ದಸ್ತಾವೇಜು ನೋಂದಣಿಗೆ ಆನ್‌ಲೈನ್‌ನಲ್ಲಿ ವ್ಯಕ್ತಿತ್ವ ಗುರುತು ದೃಢೀಕರಣಕ್ಕೆ ಆಧಾರ್ ಸಂಖ್ಯೆ, ಪ್ಯಾನ್ ಕಾರ್ಡ್ ಜೊತೆಗೆ ಪಾಸ್‌ಪೋರ್ಟ್ ಹಾಜರುಪಡಿಸುವುದು ಕಡ್ಡಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.