

ಚೆನ್ನೈ: ಚಿಕನ್ ಮೂಲಕವೂ ಮಾರಕ ಕೊರೊನಾ ವೈರಸ್ ಸೋಂಕು ತಗಲುತ್ತದೆ ಎಂದು ವದಂತಿಯನ್ನು ಹಬ್ಬಿಸಿದ್ದ ಯುವಕನನ್ನು ತಮಿಳುನಾಡು ಪೊಲೀಸರು ಕಡಲೂರು ಜಿಲ್ಲೆಯಲ್ಲಿ ಬುಧವಾರ ಬಂಧಿಸಿದ್ದಾರೆ.
ಬಂಧಿತ 18 ವರ್ಷದ ಯುವಕನಾಗಿದ್ದು, ನೈವೇಲಿಯ ನಿವಾಸಿ. ಸ್ನೇಹಿತನ ಶಾಪ್ನಲ್ಲಿ ಉಚಿತವಾಗಿ ಚಿಕನ್ ಸಿಗದ ಕಾರಣ ಆತ ಈ ವದಂತಿಯನ್ನು ಹಬ್ಬಿಸಿದ್ದ ಎಂದು ಪೊಲೀಸ್ ವಿಚಾರಣೆ ವೇಳೆ ಬಹಿರಂಗವಾಗಿದೆ.
ಆರೋಪಿಯು ನೈವೇಲಿಯ ಸೂಪರ್ ಬಜಾರ್ನಲ್ಲಿರುವ ಸ್ನೇಹಿತನ ಶಾಪ್ನಿಂದ ಆಗಾಗ ಉಚಿತವಾಗಿ ಚಿಕನ್ ಪಡೆಯುತ್ತಿದ್ದನಂತೆ. ಆದರೆ, ಇತ್ತೀಚೆಗೆ ಸ್ನೇಹಿತ ಫಕ್ರುದ್ದೀನ್ ಅಲಿ ಅಹಮ್ಮದ್ ಚಿಕನ್ ನೀಡಲು ನಿರಾಕರಿಸಿದ್ದಾನೆ. ಬಳಿಕ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಚಿಂತಿಸುತ್ತಿದ್ದ ಆತನ ತಲೆಗೆ ಹೊಳೆದಿದ್ದೇ ಅಪಾಯಕಾರಿ ಕೊರೊನಾ ವೈರಸ್ ಸೋಂಕು.
ಬಳಿಕ ಕತೆಯೊಂದನ್ನು ಹೆಣೆದ ಆರೋಪಿ ಸೂಪರ್ ಬಜಾರ್ನ ಸಹನಾ ಚಿಕನ್ ಸೆಂಟರ್ನಿಂದ ಕೊಂಡು ತಂದ ಮಾಂಸದಿಂದ ತನ್ನ ಸ್ನೇಹಿತ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ. ಆತನನ್ನು ನೈವೇಲಿಯ ಲಿಗ್ನೈಟ್ ಕಾರ್ಪೊರೇಶನ್ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಕಡಲೂರು ಸರ್ಕಾರಿ ಆಸ್ಪತ್ರೆಯ ಸಹಾಯದಿಂದ ಹೆಚ್ಚಿನ ಚಿಕಿತ್ಸೆಗಾಗಿ ಪುದುಚೆರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು, ಅವನಿಗೆ ಕೊರೊನಾ ವೈರಸ್ ತಗಲಿದೆ ಎಂದು ಸುಳ್ಳುಸುದ್ದಿ ಬರೆದು ವಾಟ್ಸ್ಆ್ಯಪ್ನಲ್ಲಿ ಮಂಗಳವಾರ ಪೋಸ್ಟ್ ಮಾಡಿದ್ದ. ಅದಾದ ಕೆಲವೇ ಕ್ಷಣಗಳಲ್ಲಿ ಪೋಸ್ಟ್ ವೈರಲ್ ಆಗಿತ್ತು.
ಇದರಿಂದ ಎಚ್ಚೆತ್ತ ಪೊಲೀಸರು ಬುಧವಾರ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಚಿಕನ್ ಮೂಲಕ ಕೊರೊನಾ ವೈರಸ್ ಹರಡುವುದಿಲ್ಲ ಎಂಬ ಆರೋಪಿಯ ಹೇಳಿಕೆಯ ವಿಡಿಯೋ ಮಾಡಿ ಪೊಲೀಸರೆ ಹರಿಬಿಟ್ಟು ಸ್ಪಷ್ಟನೆ ನೀಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಹುಡುಗಾಟವಾಡಿದ ಆರೋಪದಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 505(2) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇತ್ತೀಚಿನ ವರದಿಯ ಪ್ರಕಾರ ವದಂತಿಯ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಚಿಕನ್ ಮಾರಾಟ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕಳೆದ ತಿಂಗಳಿನಿಂದ ಬರೋಬ್ಬರಿ 50 ರಷ್ಟು ಚಿಕನ್ ಮಾರಾಟ ಕುಸಿದಿದೆ. ಚಿಕನ್ ಬೆಲೆಯೂ ಕೂಡ 70 ರಷ್ಟು ಇಳಿದಿದೆ. ಮಾರಾಕ ಕೊರೊನಾ ವೈರಸ್ನಿಂದ ಚೀನಾ ಸೇರಿ ಹಲವೆಡೆ ಸಾವಿರಾರು ಮಂದಿ ಈಗಾಗಲೇ ಸಾವಿಗೀಡಾಗಿದ್ದಾರೆ. ಆದರೆ, ಇದು ಚಿಕನ್ ಮೂಲಕ ಹರಡುವುದಿಲ್ಲ ಎಂದು ವೈದ್ಯರೇ ಧೃಡಪಡಿಸಿದ್ದಾರೆ. (ಏಜೆನ್ಸೀಸ್)