

ಈ ಬಾರಿಯ ಶಿವರಾತ್ರಿಯು ಕುಂಭಮೇಳದ ಸಂದರ್ಭದಲ್ಲಿ ಬಂದಿರುವುದು ಮತ್ತು ಭಾರತದ ಹಿಂದುಗಳು ಶಿವರಾತ್ರಿಯನ್ನು ದಿವ್ಯವಾದ ಆಧ್ಯಾತ್ಮಿಕ ಸಾಧನೆ ಹಾಗೂ ಧಾರ್ವಿುಕ ಅಭಿವ್ಯಕ್ತಿಯ ಸಂಕ್ರಮಣದಂತೆ ಕಾಣುವುದರಿಂದ ಇಂದಿನ ದಿನದ ಮಹತ್ವವು ನೂರ್ಮಡಿಗೊಳ್ಳುವಂತೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಶೋಧನೆಯಾಗಿರುವ ಶಾಸನವೊಂದು ಪ್ರಮುಖವಾದ ಪ್ರಾಚೀನ ದಾಖಲೆಯಾಗಿದ್ದು ಶಿವರಾತ್ರಿಯನ್ನು ನಮ್ಮ ದೇಶದಲ್ಲಿ ಅನೂಚಾನವಾಗಿ ಆಚರಿಸಿಕೊಂಡು ಬರುತ್ತಿರುವುದರ ದ್ಯೋತಕವಾಗಿದೆ. ಗತಕಾಲದ ಶಾಸನಗಳಲ್ಲಿ, ವೀರಗಲ್ಲುಗಳ ಮೇಲೆ ‘ಶಿವರಾತ್ರಿ’ ಕುರಿತಾದ ಉಲ್ಲೇಖಗಳು ನಮಗೆ ಸಾಕಷ್ಟು ದೊರೆತಿವೆ. ಆದರೆ ಕಳೆದ ವಾರವಷ್ಟೇ ಹೊಸದಾಗಿ ಶೋಧನೆಯಾಗಿರುವ ಶಿಲಾಶಾಸನವೊಂದು ಈ ದಿಸೆಯಲ್ಲಿ ಆಸಕ್ತಿಕರವಾಗಿದೆ. ಹಂಪಿಯ ‘ಕರ್ನಾಟಕ ಸಾಮ್ರಾಜ್ಯ’ವು ಜನಪ್ರಿಯವಾಗಿರುವುದು ‘ವಿಜಯನಗರ’ ಸಾಮ್ರಾಜ್ಯ ಎಂದೇ.
ವಾಸ್ತವವಾಗಿ ವಿಜಯನಗರ ಅಥವಾ ವಿದ್ಯಾನಗರವು ರಾಜಧಾನಿಯಾಗಿತ್ತು ಮತ್ತು ಆ ಸಾಮ್ರಾಜ್ಯದ ಹೆಸರು ‘ಕರ್ನಾಟಕ ಸಾಮ್ರಾಜ್ಯ’ ಎಂದು ಶಾಸನದಲ್ಲಿ ಉಲ್ಲೇಖವಾಗಿದೆ. ಇಂಥ ಸಾಮ್ರಾಜ್ಯವನ್ನು ಸ್ಥಾಪಿಸಿದ ಸಹೋದರರಲ್ಲಿ ಒಬ್ಬನಾದ ಹಕ್ಕರಾಯ ಅಥವಾ ಒಂದನೇ ಹರಿಹರನ ಶಾಸನವು ಇದಾಗಿದ್ದು, ಆಂಧ್ರಪ್ರದೇಶದ ವರ್ಕರು ಎಂಬ ಹಳ್ಳಿಯಲ್ಲಿ ಪತ್ತೆಯಾಗಿದೆ. ಇದು ತೃಟಿತ ಶಾಸನವಾಗಿದ್ದು ಶಾಸನದ ಭಾಷೆ ಮತ್ತು ಲಿಪಿ ಕನ್ನಡವಾಗಿದೆ. ಇದರಲ್ಲಿ ಉಲ್ಲೇಖವಾಗಿರುವಂತೆ ಈ ಶಾಸನದ ಕಾಲವು ಶಕವರ್ಷ 1261, ಪ್ರಮಾಧಿ, ಮಾಘ ಬಹುಳ, 14, ಶುಕ್ರವಾರ ಎಂದಿದೆ. ಇದು ಸಾಮಾನ್ಯ ವರ್ಷದಲ್ಲಿ 1340ರ ಜನವರಿ 28 ಶುಕ್ರವಾರಕ್ಕೆ (28-1-1340) ಸರಿಹೊಂದುತ್ತದೆ.
‘ಶ್ರೀಪರ್ವತದ ಶ್ರೀ ಮಲ್ಲಿಕಾರ್ಜುನ ದೇವರಿಗೆ ಶಿವರಾತ್ರಿಯ ದಿನದಂದು ನೈವೇದ್ಯ, ಪ್ರಸಾದ ಸೇವೆಗೆಂದು ನರವಾಡಿಯಲ್ಲಿನ ಕೋಳೂಮೂರ ಎಂಬ ಹಳ್ಳಿಯಲ್ಲಿನ ಎರಡು ಖಂಡುಗ ಭೂಮಿಯನ್ನು ಮಹಾಮಂಡಲೇಶ್ವರರಾದ ಮಾಗಿಯ ಮಾಯಿದೇವನು ಕಾಣಿಕೆಯಾಗಿ ನೀಡಿದನು’ ಎಂದು ಉಲ್ಲೇಖಿಸಲಾಗಿದೆ. ಆ ಸಂದರ್ಭದಲ್ಲಿ ಗುತ್ತಿಯಿಂದ ಭಂಡಾರಿ ‘ಹರಿಯಪ್ಪ ಒಡೆಯನು’ ಆಳ್ವಿಕೆ ನಡೆಸುತ್ತಿದ್ದನು ಎಂದೂ ಶಾಸನದಲ್ಲಿ ದಾಖಲಾಗಿದೆ. ಹಂಪಿಯ ವಿಜಯನಗರ ಸಾಮ್ರಾಜ್ಯದ ಪ್ರಾರಂಭಿಕ ಶಾಸನಗಳಲ್ಲಿ ಒಂದನೆಯ ಹರಿಹರನನ್ನು ‘ಹರಿಯಪ್ಪ ಒಡೆಯ’ ಎಂದೇ ಕರೆಯಲಾಗಿದೆ. ಅದಾಗಲೇ ಒಂದನೆಯ ಹರಿಹರನು ಆನೆಗೊಂದಿಯನ್ನು ರಾಜಧಾನಿಯಾಗಿಸಿಕೊಂಡು ಸಾಮ್ರಾಜ್ಯ ಕಟ್ಟುವ ಕೆಲಸದಲ್ಲಿ ನಿರತನಾಗಿದ್ದನು.
ಈ ಸಾಹಸದಲ್ಲಿ ಅವನ ಸಹೋದರ ಬುಕ್ಕರಾಯನೂ ಹೆಗಲೆಣೆಯಾಗಿ ದುಡಿದವನೆ. ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ ಈ ಶಾಸನದಲ್ಲಿ ಉಕ್ತವಾಗಿರುವ ‘ಶ್ರೀಪರ್ವತ’ ಎಂದರೆ ಶ್ರೀಶೈಲ ಎಂದು ಅರ್ಥ. ಪ್ರಾಚೀನ ಶಾಸನ, ಸಾಹಿತ್ಯಕ ಕೃತಿಗಳಲ್ಲಿ ಶ್ರೀಶೈಲವನ್ನು ‘ಶ್ರೀಗಿರಿ’ ಮತ್ತು ‘ಶ್ರೀಪರ್ವತ’ ಎಂದು ಕರೆಯಲಾಗಿದೆ. ಒಟ್ಟಾರೆ, ಶಿವರಾತ್ರಿಯ ಶುಭಸಂದರ್ಭದಲ್ಲಿಯೇ ಶಿವರಾತ್ರಿಯ ಕುರಿತು ಉಲ್ಲೇಖವಿರುವ ಶಾಸನವು ಶೋಧನೆಗೊಂಡಿರುವುದು ದೈವೀ ಸಂಯೋಗವೇ ಸರಿ ಎಂದು ಆಸ್ತಿಕ ಮನಸ್ಸುಗಳಿಗೆ ಅನಿಸಿದರೆ ಅದರಲ್ಲಿ ಅಚ್ಚರಿಯೇನಿಲ್ಲ ಬಿಡಿ, ಅಲ್ಲವೇ? ಯಾಕೆಂದರೆ, ಆಸ್ತಿಕ ಮನಸ್ಸಿನ ಜೀವದ್ರವ್ಯವೇ ದೈವದಲ್ಲಿನ ನಂಬಿಕೆಯ ನೆಲೆಗಟ್ಟಿನ ಮೇಲೆ ನಿಂತಿರುವಂಥದು.