ತಮನ್ನಾ ಲೇಡಿ ರೌಡಿ ಗ್ಯಾಂಗ್​! ಹಣಕ್ಕಾಗಿ ನೀಚ ಕೃತ್ಯ, ಈಕೆಯ ಪುಂಡಾಟಿಕೆ ಒಂದೆರಡಲ್ಲ ಎಂದ ಪೊಲೀಸರು

Vinodhini alias Tamannah
Published on

ಕೊಯಮತ್ತೂರು: ಮಾರಕ ಆಯುಧಗಳನ್ನಿಡಿದು ವಿಡಿಯೋ ಮಾಡಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಖತರ್ನಾಕ್​ ಲೇಡಿಗಾಗಿ ಕೊಯಮತ್ತೂರಿನ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ವಿನೋದಿನಿ ಅಲಿಯಾಸ್​ ತಮನ್ನಾ (23)ಗಳನ್ನು ಬಂಧಿಸಿ, ವಿಚಾರಣೆ ನಡೆಸುವುದಕ್ಕಾಗಿ ಕೊಯಮತ್ತೂರು ಪೊಲೀಸರು ವಿಶೇಷ ತಂಡವನ್ನು ರಚನೆ ಮಾಡಿದೆ. ತಮನ್ನಾ, ವಿರುಧಾನಗರದ ನಿವಾಸಿಯಾಗಿದ್ದು, ಶೀಘ್ರದಲ್ಲೇ ಆಕೆಯನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಫ್ಯಾನ್ಸ್​ ಕಾಲ್​ ಮಿ ತಮನ್ನಾ ಹೆಸರಿನ ತಮ್ಮ ಇನ್​ಸ್ಟಾಗ್ರಾಂ ಖಾತೆಯಿಂದ ಅನೇಕ ವಿಡಿಯೋಗಳನ್ನು ತಮನ್ನಾ ಪೊಲೀಸ್​ ಮಾಡಿದ್ದರು. ಬಹುತೇಕ ವಿಡಿಯೋಗಳಲ್ಲಿ ಮಾರಕ ಆಯುಧಗಳನ್ನು ಹಿಡಿದು ಕಾಣಿಸಿಕೊಂಡಿದ್ದಾರೆ. ಪ್ರಗಾ ಬ್ರದರ್ಸ್​ ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲೂ ತಮನ್ನಾ ಸಕ್ರಿಯರಾಗಿದ್ದಾರೆ. ಕ್ರಿಮಿನಲ್​ ಗುಂಪಿಗೆ ಸಂಬಂಧಿಸಿದವರಿಂದಲೇ ಈ ವಿಡಿಯೋ ಅಪ್​ಲೋಡ್​ ಆಗುತ್ತಿದೆ ಮತ್ತು ಎದುರಾಳಿ ಗುಂಪಿಗೆ ಬೆದರಿಕೆ ಹಾಕುವ ಉದ್ದೇಶದಿಂದ ಇಂತಹ ರೀಲ್ಸ್​ಗಳನ್ನು ಅಪ್​ಲೋಡ್​ ಮಾಡುತ್ತಿದ್ದಾರೆ ಎಂದು ಕೊಯಮತ್ತೂರು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಮೊದಲು ಇದೇ ತಮನ್ನಾಳನ್ನು ಗಾಂಜಾ ಕೇಸ್​ನಲ್ಲಿ ಬಂಧಿಸಿದ್ದೆವು ಎಂದು ಕೊಯಮತ್ತೂರು ನಗರ ಪೊಲೀಸ್​ ಆಯುಕ್ತರಾದ ವಿ. ಬಾಲಕೃಷ್ಣನ್​​ ಹೇಳಿದ್ದಾರೆ. ಗಾಂಜಾವನ್ನು ತನ್ನ ಬಳಿ ಇಟ್ಟುಕೊಂಡಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಗಿತ್ತು. ಇಷ್ಟೇ ಅಲ್ಲದೆ, ಶ್ರೀಮಂತ ಕುಟುಂಬದ ಯುವಕರನ್ನು ಪರಿಚಯಿಸಿಕೊಂಡು ಬೆದರಿಕೆ ಹಾಕಿ ಹಣ ಸುಲಿಗೆ ಮಾಡುವುದನ್ನು ಆಕೆ ಹವ್ಯಾಸ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.

ತಮನ್ನಾ ಗ್ಯಾಂಗ್​ ಪೋಸ್ಟ್​ ಮಾಡುತ್ತಿರುವ ರೀಲ್ಸ್​ಗಳು ಎರಡು ಗ್ಯಾಂಗ್​ಗಳ ನಡುವೆ ದ್ವೇಷವನ್ನು ಹೆಚ್ಚಿಸುವಂತಿದೆ. ಹೀಗಾಗಿ ಆಕೆಯನ್ನು ಈ ಕ್ಷಣವೇ ಬಂಧಿಸಬೇಕಿದೆ. ಅಂತಹ ವಿಡಿಯೋಗಳನ್ನು ಯಾರೇ ಪೋಸ್ಟ್​ ಮಾಡಿದರು ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸ್​ ಆಯುಕ್ತರಾದ ವಿ. ಬಾಲಕೃಷ್ಣನ್​​ ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್​)

(ವಿಡಿಯೋ ಕೃಪೆ: ಜಯಾ ಪ್ಲಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net